ನಾಯಕತ್ವ ಕೊರತೆ: ಹನುಮಂತಪ್ಪ ವಿಷಾದ

7

ನಾಯಕತ್ವ ಕೊರತೆ: ಹನುಮಂತಪ್ಪ ವಿಷಾದ

Published:
Updated:

ಹೊಸಪೇಟೆ: ಉತ್ತಮ ಹಾಗೂ ಕ್ರಿಯಾಶೀಲ ಕಾರ್ಯಕರ್ತರನ್ನು ಹೊಂದಿರುವ ಪಕ್ಷದಲ್ಲಿ ನಾಯಕತ್ವದ ಕಾರಣದಿಂದ ಇಂದು ಈ ಸ್ಥಿತಿಯಲ್ಲಿರಬೇಕಾಗಿದ್ದು ಆತ್ಮವಿಮರ್ಶೆ ಮಾಡಿ ಕೊಳ್ಳಬೇಕಾಗಿದೆ ಎಂದು ಎಐಸಿಸಿ ರಾಜ್ಯ ಉಸ್ತುವಾರಿ ಹಾಗೂ ಸಂಸದ ವಿ.ಹನುಮಂತ ರಾವ್ ಹೇಳಿದರು.ಮಂಗಳವಾರ ಹೊಸಪೇಟೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ನಾಯಕರ ಆಂತರಿಕ ಕಲಹ ಕಾರ್ಯಕರ್ತರನ್ನು ಮೂಲೆಗುಂಪು ಮಾಡುವುದರ ಜೊತೆಗೆ ಪಕ್ಷವನ್ನು ಅಭದ್ರಗೊಳಿಸಿದೆ, ಪಕ್ಷದ ಇತಿಹಾಸ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟು ಒಂದಾಗಿ ಪಕ್ಷವನ್ನು ಬಲಪಡಿಸುವ ಕೆಲಸವಾಗಬೇಕು ಇಲ್ಲವಾದರೆ ಭ್ರಷ್ಟರಿಗೆ ಅಧಿಕಾರ ನೀಡಿ ರಾಜ್ಯವನ್ನು ಕೊಳ್ಳೆ ಹೊಡೆಯಲು ನಾವೇ ಅವಕಾಶ ನೀಡಿದಂತಾಗು ತ್ತದೆ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದರು.ರಾಜ್ಯಕ್ಕೆ ಕೇಂದ್ರ ಸರ್ಕಾರ ಶೇಕಡಾ 80ರಷ್ಟು ಅನುದಾನ ಬಿಡುಗಡೆಯಾದರೂ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಉಳಿದಂತೆ ಎಲ್ಲ ರಂಗ ಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ ಎಂದರು.ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸುವ ಹಾಗೂ ರಥಯಾತ್ರೆ ನಡೆಸುವ ಕೇಂದ್ರ ಬಿಜೆಪಿ ನಾಯಕರು ತಮ್ಮ  ಅಧಿಕಾರ ಇರುವ ರಾಜ್ಯಗಳಲ್ಲಿ ಲೋಕಪಾಲರನ್ನು ನೇಮಕ ಮಾಡಲು ಮುಂದಾಗಲಿ ಎಂದು ಭ್ರಷ್ಟ ಹಾಗೂ ರಾಜ್ಯವನ್ನು ಲೂಟಿ ಮಾಡುವವರನ್ನು ಸಮರ್ಥಿಸುವ ಬಿಜೆಪಿ ಹೈಕಮಾಂಡ್ ಕಾರ್ಯವೈಖರಿಗೆ ಲೇವಡಿ ಮಾಡಿದರು.ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಮಾತನಾಡಿ ಕಾಂಗ್ರೆಸ್ ನಾಯಕರು ಒಂದಾಗಿ ಸಾಮೂಹಿಕ ನಾಯಕತ್ವದಲ್ಲಿ ರಾಜ್ಯಕ್ಕೆ ಉತ್ತಮ ಆಡಳಿತ ನೀಡುವ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ ಎಂದರು.ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಲ್ಲಂ ವೀರಭದ್ರಪ್ಪ, ಕಮಲಾ ಮರಿಸ್ವಾಮಿ, ಅಬೀದ್ ಹುಸೇನ್, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಸ್ತುವಾರಿ ಎಸ್.ನಾಡಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್.ಸ್ವಾಮಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ರವೀಂದ್ರ ಹಾಜರಿದ್ದರು.ಮಾಜಿ ಶಾಸಕರಾದ ಎಸ್.ರತನ್‌ಸಿಂಗ್, ಗುಜ್ಜಲ್ ಜಯಲಕ್ಷ್ಮೀ, ಮುಖಂಡರಾದ ದೀಪಕ್‌ಕುಮಾರ ಸಿಂಗ್, ಜಿ.ಕೆ.ಹನುಮಂತಪ್ಪ ಹಾಜರಿದ್ದರು.ಮಾತಿನ ಚಕಮಕಿ:
ಸಭೆ ಅಂತ್ಯವಾಗುತ್ತಿದ್ದಂತೆ ಹೊರಬಂದ ನಾಯಕರನ್ನು ಅಡ್ಡಗಟ್ಟಿದ ಕಾರ್ಯಕರ್ತರು ಸ್ಥಳೀಯ ನಾಯಕರುಗಳೇಕೆ ಸಭೆಯಲ್ಲಿ ಪಾಲ್ಗೊಂಡಿಲ್ಲ. ಪರಸ್ಪರ ವೈರುಧ್ಯ ಕಾರ್ಯ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಮಾಡಿವೆ, ನಮ್ಮ ಭವಿಷ್ಯ ಮಂಕಾಗುತ್ತಿದೆ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಾ ಒಂದು ಹಂತದಲ್ಲಿ ನಾಯಕರ ಮುಂದೆಯೇ ಪರಸ್ಪರ ವಾಗ್ವಾದದಲ್ಲಿ ಮುಳುಗಿದರು.ಅನಿಲ್ ಲಾಡ್ ಈ ಸಂದರ್ಭದಲ್ಲಿ ಮಾತನಾಡಿ, ಈ ಕುರಿತಂತೆ ವಿವಿಧ ನಾಯಕರನ್ನು ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಅವರನ್ನು ಸಮಾಧಾನಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry