ಶನಿವಾರ, ನವೆಂಬರ್ 23, 2019
17 °C

ನಾಯಕತ್ವ ಗುಣ ರೂಢಿಸಿಕೊಳ್ಳಲು ಸಲಹೆ

Published:
Updated:
ನಾಯಕತ್ವ ಗುಣ ರೂಢಿಸಿಕೊಳ್ಳಲು ಸಲಹೆ

ಬೆಂಗಳೂರು: `ಪೊಲೀಸ್ ಇಲಾಖೆಯಲ್ಲಿನ ಪ್ರತಿ ಸಿಬ್ಬಂದಿಯೂ ನಾಯಕತ್ವ ಗುಣ ರೂಢಿಸಿಕೊಳ್ಳಬೇಕು' ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಸಲಹೆ ನೀಡಿದರು.ನಗರದ ಕೋರಮಂಗಲದಲ್ಲಿನ ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್‌ಆರ್‌ಪಿ) ಮೈದಾನದಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯಾವುದೇ ಸಂಘ ಸಂಸ್ಥೆ ಅಥವಾ ಇಲಾಖೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಅಲ್ಲಿ ನಾಯಕತ್ವ ಗುಣವುಳ್ಳ ಮಾನವ ಸಂಪನ್ಮೂಲವಿರಬೇಕು. ನಾಯಕತ್ವ ಗುಣ ಕೇವಲ ಹಿರಿಯ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಿರಿಯ ಅಧಿಕಾರಿಗಳ ಜತೆಗೆ ಕಿರಿಯ ಸಿಬ್ಬಂದಿಯೂ ನಾಯಕತ್ವ ಗುಣವನ್ನು ರೂಢಿಸಿಕೊಳ್ಳಬೇಕು. ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಸಿಬ್ಬಂದಿಯಲ್ಲಿ ಶಕ್ತಿ, ಸಾಮರ್ಥ್ಯ ಹಾಗೂ ಉತ್ಸಾಹ ತುಂಬುವ ಕೆಲಸ ಮಾಡಬೇಕು. ಆಗ ಇಲಾಖೆಯಲ್ಲಿ ಅಸಾಧಾರಣ ಕೆಲಸವಾಗುತ್ತದೆ ಎಂದು ಹೇಳಿದರು.ದಕ್ಷತೆ ಹಾಗೂ ಉತ್ತಮ ಕಾರ್ಯ ನಿರ್ವಹಣೆಗೆ ಹೆಸರಾಗಿರುವ ರಾಜ್ಯದ ಪೊಲೀಸರು ರಾಷ್ಟ್ರ ಮಟ್ಟದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಇಲಾಖೆಯಲ್ಲಿ ಕಿರಿಯ ಸಿಬ್ಬಂದಿಯಿಂದ ಹಿರಿಯ ಅಧಿಕಾರಿಗಳವರೆಗೆ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾನ್‌ಸ್ಟೆಬಲ್ ಹುದ್ದೆಯಿಂದ ಎಸ್‌ಐವರೆಗಿನ ಸಿಬ್ಬಂದಿಯೇ ಇಲಾಖೆಯ ಜೀವಾಳ. ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬ ಅಂಶದ ಮೇಲೆ ಇಲಾಖೆಯ ಯಶಸ್ಸು ನಿರ್ಧಾರವಾಗುತ್ತದೆ ಎಂದು ರಂಗನಾಥ್ ತಿಳಿಸಿದರು.ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಉಮೇಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಓಂಪ್ರಕಾಶ್, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)