ಮಂಗಳವಾರ, ಜುಲೈ 14, 2020
25 °C

ನಾಯಕತ್ವ ತ್ಯಜಿಸಿದ ರಿಕಿ ಪಾಂಟಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಯಕತ್ವ ತ್ಯಜಿಸಿದ ರಿಕಿ ಪಾಂಟಿಂಗ್

ಮೆಲ್ಬರ್ನ್: ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕ ಎನಿಸಿರುವ ರಿಕಿ ಪಾಂಟಿಂಗ್ ಅವರು ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ತ್ಯಜಿಸಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ತಂಡ ಸೋಲು ಅನುಭವಿಸಿದ ಐದು ದಿನಗಳ ಬಳಿಕ ಪಾಂಟಿಂಗ್ ಅವರ ನಿರ್ಧಾರ ಹೊರಬಿದ್ದಿದೆ.ಆದರೆ ಒಬ್ಬ ಆಟಗಾರನಾಗಿ ಆಯ್ಕೆಗೆ ಲಭ್ಯವಿರುವುದಾಗಿ 36ರ ಹರೆಯದ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ. ‘ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪಾಂಟಿಂಗ್ ಹೇಳಿದರು.‘ಆದರೆ ಆಸೀಸ್ ಪರ ಆಡುವುದನ್ನು ಮುಂದುವರಿಸುವೆ. ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ಆಯ್ಕೆಗೆ ಲಭ್ಯವಿರುವುದಾಗಿ ಆಯ್ಕೆ ಸಮಿತಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ’ ಎಂದು ಅವರು ನುಡಿದರು.ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಆಸೀಸ್ ತಂಡ ಭಾರತದ ಕೈಯಲ್ಲಿ ಸೋಲು ಅನುಭವಿಸಿತ್ತು. ಆಗಲೇ ನಾಯಕತ್ವ ತ್ಯಜಿಸುವಂತೆ ಪಾಂಟಿಂಗ್ ಮೇಲೆ ಒತ್ತಡ ಬೀಳತೊಡಗಿತ್ತು. ನಿರೀಕ್ಷೆಯಂತೆಯೇ ಅವರು ಹುದ್ದೆಯಿಂದ ಕೆಳಗಿಳಿದಿದ್ದಾರೆ.‘ಆಸ್ಟ್ರೇಲಿಯಾ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಚಿಂತಿಸಿ ಈ ತೀರ್ಮಾನ ಕೈಗೊಂಡಿದ್ದೇನೆ. ಆಸ್ಟ್ರೇಲಿಯಾದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊಸ ನಾಯಕನಿಗೆ ನೀಡಲು ಇದು ಸೂಕ್ತ ಸಮಯ’ ಎಂದು ಪಾಂಟಿಂಗ್ ತಿಳಿಸಿದರು.‘ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ವೈಫಲ್ಯ ಅನುಭವಿಸಿದ್ದು ಈ ನಿರ್ಧಾರ ಕೈಗೊಳ್ಳಲು ನನ್ನನ್ನು ಪ್ರೇರೇಪಿಸಿದೆ. ಅದಕ್ಕೆ ಬದಲು ನಾಯಕತ್ವ ತ್ಯಜಿಸುವಂತೆ ಕ್ರಿಕೆಟ್ ಆಸ್ಟ್ರೇಲಿಯಾ ನನ್ನ ಮೇಲೆ ಒತ್ತಡ ಹೇರಿಲ್ಲ. ಇದು ನಾನು ಕೈಗೊಂಡ ವೈಯಕ್ತಿಕ ನಿರ್ಧಾರ’ ಎಂದರು. ಆಸೀಸ್ ತಂಡದ ನಾಯಕತ್ವವನ್ನು ಮೈಕಲ್ ಕ್ಲಾರ್ಕ್‌ಗೆ ನೀಡುವುದು ಸೂಕ್ತ ಎಂದು ಪಾಂಟಿಂಗ್ ಇದೇ ವೇಳೆ ತಿಳಿಸಿದರು. ಪಾಂಟಿಂಗ್ ಅವರು ಆಸ್ಟ್ರೇಲಿಯಾ ಮಾತ್ರವಲ್ಲ ವಿಶ್ವ ಕ್ರಿಕೆಟ್ ಕಂಡಂತಹ ಅತ್ಯುತ್ತಮ ನಾಯಕ ಎನಿಸಿದ್ದಾರೆ. 77 ಟೆಸ್ಟ್‌ಗಳಲ್ಲಿ ಆಸೀಸ್ ತಂಡವನ್ನು ಮುನ್ನಡೆಸಿದ್ದ ಅವರು 48 ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.ಅದೇ ರೀತಿ 228 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಇದರಲ್ಲಿ ಕಾಂಗರೂ ನಾಡಿನ ತಂಡ 164ರಲ್ಲಿ ಗೆಲುವು ಪಡೆದಿದೆ. 2003 ಹಾಗೂ 2007ರ ವಿಶ್ವಕಪ್ ಟೂರ್ನಿಗಳಲ್ಲಿ ಅವರು ಆಸೀಸ್ ತಂಡಕ್ಕೆ ಟ್ರೋಫಿ ತಂದುಕೊಟ್ಟಿದ್ದರು.ಈ ಬಾರಿ ಆಸ್ಟ್ರೇಲಿಯಾ ತಂಡ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಪಾಂಟಿಂಗ್ ‘ಹ್ಯಾಟ್ರಿಕ್’ ಸಾಧನೆ ಮಾಡುತ್ತಿದ್ದರು. ಮಾತ್ರವಲ್ಲ ಇಂತಹ ಸಾಧನೆ ಮಾಡಿದ ಮೊದಲ ನಾಯಕ ಎನಿಸುತ್ತಿದ್ದರು. ಆದರೆ ಆಸೀಸ್ ತಂಡ ಕ್ವಾರ್ಟರ್ ಫೈನಲ್‌ನಲ್ಲೇ ಸೋಲು ಅನುಭವಿಸಿದ ಕಾರಣ ಪಾಂಟಿಂಗ್ ಅವರು ಕನಸು ಭಗ್ನಗೊಂಡಿತು.

‘ಆಸೀಸ್ ತಂಡದ ನಾಯಕನಾಗಿ ಮಾಡಿದ ಸಾಧನೆಗಳ ಬಗ್ಗೆ ಹೆಮ್ಮೆಯಿದೆ. ಇದೊಂದು ಶ್ರೇಷ್ಠ ಗೌರವ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.