ಭಾನುವಾರ, ಜೂನ್ 20, 2021
26 °C

ನಾಯಕರ ಸಾಲಿನಲ್ಲಿ ಕುಳಿತು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಈ ಚಿತ್ರದ ನಾಯಕ ನಾನೊಬ್ಬನಲ್ಲ. ಈ ಸಾಲಿನಲ್ಲಿ ಕುಳಿತಿರುವ ಎಲ್ಲರೂ~ ಎಂದರು ನಟ ವಿಜಯ್.`ಭೀಮಾ ತೀರದಲ್ಲಿ..~ ಚಿತ್ರದ ಸೀಡಿ ಬಿಡುಗಡೆ ಸಮಾರಂಭದಲ್ಲಿ ವಿಜಯ್ ಹೀಗೆ ಮಾರ್ಮಿಕವಾಗಿ ನುಡಿದು ವೇದಿಕೆಯಲ್ಲಿ ಕುಳಿತಿದ್ದವರ ಕಡೆಗೆ ಕಣ್ಣು ಹಾಯಿಸಿದರು.ಇಂಥ ಸಬ್ಜೆಕ್ಟ್ ಇರುವ ಸಿನಿಮಾ ಮಾಡಲು ಧೈರ್ಯ ಮಾಡಿದ ನಿರ್ಮಾಪಕ ಅಣಜಿ ನಾಗರಾಜ್, ಸಿನಿಮಾದ ಕನಸು ಕಟ್ಟಿದ ನಿರ್ದೇಶಕ ಓಂಪ್ರಕಾಶ್ ರಾವ್, ಬದ್ಧತೆಯನ್ನು ಬಿಡದೆ ನಟಿಸಿದ ಹಿರಿಯ ನಟ ಲೋಕನಾಥ್, ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದಂತೆ ನಟಿಸಿರುವ ಶರತ್ ಲೋಹಿತಾಶ್ವ ಮತ್ತು ಸುಚೇಂದ್ರ ಪ್ರಸಾದ್ ಎಲ್ಲರೂ ವಿಜಯ್‌ಗೆ ನಾಯಕರಂತೆಯೇ ಕಾಣಿಸಿದ್ದಾರೆ.ತಾವಿನ್ನೂ ಕಲಿಯುತ್ತಿರುವವರು, ಇವರೆಲ್ಲಾ ಕಲಿತವರು ಎನ್ನುತ್ತಾ ವಿನೀತವಾಗಿ ನುಡಿದ ವಿಜಯ್ ತಮ್ಮ ಚಿತ್ರಗಳ ಬಗ್ಗೆ ಎಕ್ಸೈಟ್‌ಮೆಂಟಾಗಿ ಮಾತನಾಡುವುದನ್ನು ಬಿಟ್ಟಿದ್ದಾರಂತೆ. ಅದಕ್ಕೆ ಕಾರಣ ನಿರೀಕ್ಷಿತ ಮಟ್ಟಕ್ಕೆ ಸಿನಿಮಾಗಳು ಹೋಗದೇ ಇದ್ದದ್ದು.`ಭೀಮಾ ತೀರದಲ್ಲಿ..~ ಚಿತ್ರಕ್ಕಾಗಿ ಜಮಖಂಡಿ, ಇಳಕಲ್ಲು, ಬಾಗಲಕೋಟೆ, ಗಜೇಂದ್ರಗಡದ ಏರುತಗ್ಗಿನ ರಸ್ತೆಗಳಲ್ಲಿ ಮಾಡಿದ ಕುದುರೆ ಸವಾರಿ ಮೈನವಿರೇಳಿಸಿದೆ.ಅದರ ನೆನಪನ್ನೇ ಹೆಚ್ಚು ಮೆಲುಕು ಹಾಕಿದ ಅವರು, ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಕನಸು ನೇಯುವ ಕಾಯಕವನ್ನು ಮೆಚ್ಚಿಕೊಂಡರು.ನಿರ್ದೇಶಕ ಓಂ ಪ್ರಕಾಶ್ ರಾವ್, `ಇಂಥದೊಂದು ನೈಜ ಘಟನೆಯನ್ನು ಸಿನಿಮಾ ಮಾಡುವುದು ನನ್ನ ಕನಸಾಗಿತ್ತು. ಇದುವರೆಗೂ ಅಪ್ಪ, ಮಾವ, ಚಿಕ್ಕಪ್ಪನಾಗಿ ಹೆಸರು ಮಾಡಿದ್ದ ಲೋಕನಾಥ್ ಅವರನ್ನು ಕಳ್ಳ, ಕೊರ್ಮನ ಪಾತ್ರದಲ್ಲಿ ನಟಿಸಲು ಕೇಳಿದೆ.ಅವರು ಪ್ರಧಾನ ಖಳನಾಗಿ ನಟಿಸಲು ಒಪ್ಪಿಗೆ ಸೂಚಿಸಿದರು. ನೈಜ ಘಟನೆಯ ಎಳೆ ಚಿತ್ರದಲ್ಲಿದ್ದರೂ ಕಮರ್ಷಿಯಲ್‌ಗೆ ಹೆಚ್ಚು ಒತ್ತು ಕೊಟ್ಟು ಸಿನಿಮಾ ರೂಪಿಸಿರುವೆ.ಎ.ಕೆ.47 ಚಿತ್ರ ನನ್ನ ಬದುಕಿಗೆ ನೀಡಿದ ತಿರುವನ್ನೇ ಇದೂ ನೀಡಲಿದೆ ಎಂಬ ನಂಬಿಕೆ ಇದೆ. ಕತೆಗೆ ಎಲ್ಲೂ ಲೋಪವಾಗದಂತೆ ಎರಡು ಹಾಡುಗಳನ್ನು ಸೇರಿಸಲಾಗಿದೆ~ ಎಂದರು.ನಿರ್ಮಾಪಕ ಅಣಜಿ ನಾಗರಾಜ ಅವರು ಇಂಥ ಸಿನಿಮಾಗೆ ತಾವು ನಿರ್ಮಾಪಕ ರಾಗಿರುವುದೇ ಹೆಮ್ಮೆಯ ವಿಚಾರ ಎಂದರು. ಚಿತ್ರೀಕರಣದ ಸಮಯದಲ್ಲಿ ಉತ್ತರ ಕರ್ನಾಟಕದ ಜನತೆ ನೀಡಿದ ಸಹಕಾರವನ್ನು ಸ್ಮರಿಸಿದ ಅವರು ಓಂ ಪ್ರಕಾಶ್ ಅವರ ಚಿತ್ರಕತೆಗೆ ಸಲಾಮ್ ಹೇಳಿದರು.`ಖಳನ ಪಾತ್ರವಾದರೂ ಸರಿ. ಮರ್ಯಾದೆ ಹೋಗದಂಥ ಪಾತ್ರ ಇರಲಿ~ ಎನ್ನುವ ಷರತ್ತು ವಿಧಿಸಿಯೇ ಈ ಚಿತ್ರದಲ್ಲಿ ನಟಿಸಿದ್ದಾಗಿ ಹಿರಿಯ ನಟ ಲೋಕನಾಥ್ ಹೇಳಿಕೊಂಡರು.ಶರತ್ ಲೋಹಿತಾಶ್ವ ಅವರು ಲೋಕನಾಥ್ ಅವರ ಮಗನಾಗಿ ನಟಿಸಿದ್ದಾರೆ. `ಹುಲಿಯಾ~, `ಸಿಂಗಾರವ್ವ~ ನಂತರ ಉತ್ತರ ಕನ್ನಡ ಶೈಲಿಯಲ್ಲಿ ಮಾತನಾಡುವ ಅವಕಾಶ ಸಿಕ್ಕಿದ್ದನ್ನು ಎಂಜಾಯ್ ಮಾಡಿರುವುದಾಗಿ ಹೇಳಿದ ಅವರಿಗೆ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಲೋಕನಾಥ್ ಅವರೊಂದಿಗೆ ಸೀರೆ ಖರೀದಿಗೆ ಹೋಗಿದ್ದು ಖುಷಿ ನೀಡಿತಂತೆ.ನಟ ಸುಚೇಂದ್ರ ಪ್ರಸಾದ್ ಅವರಿಗೆ ಒಟ್ಟಾರೆ ಚಿತ್ರತಂಡದ ಶ್ರಮ ಹಿಡಿಸಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರಂಥ  ಅತೃಪ್ತ ಭಾವದ ನಿರ್ದೇಶಕ ಇರಬೇಕು ಎಂದ ಅವರು ತಮ್ಮ ಚಿತ್ರ ಬೆದರಿಕೆಗಳಿಗೆ ಜಗ್ಗದೇ ನಿರ್ಮಾಣವಾಗಿದೆ ಎಂದು ಎದೆ ಉಬ್ಬಿಸಿದರು. ಹಿರಿಯ ನಟರೊಂದಿಗೆ ನಟಿಸಿದ ಖುಷಿ ಅನುಭವಿಸುತ್ತಿದ್ದ ನಾಯಕಿ ಪ್ರಣೀತಾ, ಚಿತ್ರದ ಎರಡನೇ ಭಾಗದಲ್ಲಿ ಮೇಕಪ್ ಇಲ್ಲದೇ ನಟಿಸಿರುವುದಾಗಿ ಹೇಳಿದರು. ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಅವರಿಗೆ ಚಿತ್ರಕ್ಕೆ ಸೂಕ್ತವಾಗುವಂತೆ ಮಾಸ್ ಮತ್ತು ಮೆಲೋಡಿ ಹಾಡನ್ನು ಹೆಣೆದಿರುವ ಬಗ್ಗೆ ತೃಪ್ತಿ ಇದೆ. ಎಲ್ಲರ ಮಾತಿನ ನಂತರ ನಟ ಲೋಕನಾಥ್ ಸೀಡಿ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಕೋರಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.