ಭಾನುವಾರ, ಅಕ್ಟೋಬರ್ 20, 2019
21 °C

ನಾಯಿಮರಿ ನಾಯಿಮರಿ ಬಟ್ಟೆ ಬೇಕೆ...

Published:
Updated:

ಆಕೆ ಕೈಯಲ್ಲಿ ಹಿಡಿದ `ಚಿಕು~ವನ್ನು ಮಗುವಿನಂತೆ ಮುದ್ದುಮಾಡುತ್ತಿದ್ದಳು. ಅದರ ಬಾಯಲ್ಲಿ ಸುರಿಯುತ್ತಿರುವ ಜೊಲ್ಲನ್ನು ಟಿಶ್ಯೂ ಪೇಪರ್‌ನಿಂದ ಆಗಾಗ ಒರೆಸುತ್ತಿದ್ದಳು.ಅರೆಕ್ಷಣ ಅದನ್ನು ಬಿಟ್ಟಿರಲಾರೆ ಎಂಬ ಆತ್ಮೀಯತೆ. ಕಿಲಾಡಿಯೊಬ್ಬರು ಈ ನಾಯಿಮರಿಗೆ ಎಷ್ಟು ವರ್ಷ ಎಂದು ಪ್ರಶ್ನಿಸಿದರೆ, `ನಾಯಿ ಎಂದು ಹೇಳಬೇಡಿ, ಇದು ನನ್ನ ಮಗು~ ಎಂಬ ಅಚ್ಚರಿಯ ಉತ್ತರ ನೀಡಿದ್ದು ನಟಿ ಪೂಜಾ ಗಾಂಧಿ. ಅವರ ಕೈಲಿದ್ದ `ಚಿಕು~ ಪುಟ್ಟ ನಾಯಿಮರಿ. ಅದನ್ನು ಮಗುವಿನಂತೆ ಅಪ್ಪಿಕೊಂಡು ಅವರು ಅತ್ತಿತ್ತ ಓಡಾಡುತ್ತಿದ್ದ ದೃಶ್ಯ ಕಂಡುಬಂದಿದ್ದು ಆರ್.ಟಿ ನಗರದ `ವ್ಯಾಗ್ಸ್ ಅಂಡ್ ವಿಸ್ಕರ್ಸ್‌~ನ ಪೆಟ್ ಕೇರ್‌ನಲ್ಲಿ.ವಿಶಾಲವಾದ ಬಯಲು. ಸುತ್ತಲೂ ಹಸಿರಿನಿಂದ ತುಂಬಿದ ವಾತಾವರಣ. ಜೊತೆಗೆ ತಮ್ಮ ಮುದ್ದು ನಾಯಿಮರಿಗಳ ಕೊರಳಿಗೆ ಬಣ್ಣದ ಬೆಲ್ಟ್ ಕಟ್ಟಿ ಅದಕ್ಕೆ ಮಗುವಿಗಿಂತಲೂ ಹೆಚ್ಚು ಪ್ರೀತಿ ತೋರಿಸುತ್ತಿದ್ದ ಒಡೆಯರು. ಸಿಲಿಕಾನ್ ಸಿಟಿ ಜನರ ಪ್ರಾಣಿಪ್ರೀತಿ ಎದ್ದು ಕಾಣಲು ಇಷ್ಟು ಸಾಕಿತ್ತು. ಮುದ್ದಿನ ನಾಯಿ ಮತ್ತು ಬೆಕ್ಕುಗಳೊಂದಿಗೆ ಸುತ್ತಾಡಲು ಜಾಗವಿಲ್ಲ ಎಂಬ ಬೇಸರಕ್ಕೆ ಇಲ್ಲಿ ಅವಕಾಶವಿರಲಿಲ್ಲ. ಜೊತೆಗೆ ಅವುಗಳ ಯೋಗಕ್ಷೇಮದ ಸೇವೆಗಾಗಿ ಇರುವ ವೃತ್ತಿಪರ ಅನುಭವಿ ಸಂಸ್ಥೆ `ವ್ಯಾಗ್ಸ್ ಅಂಡ್ ವಿಸ್ಕರ್ಸ್‌~. ಪ್ರಾಣಿಪ್ರಿಯರಿಗೆ ಇದೊಂದು ಸುಂದರತಾಣ.ಇಲ್ಲಿ ಕೇವಲ ನಾಯಿ ಮರಿಗಳಿಗೆ ಮಾತ್ರವಲ್ಲ, ದೈನಂದಿನ ಜಂಜಾಟದ ಬದುಕಿನಿಂದ ವಿಶ್ರಾಂತಿ ಬಯಸುವ ಮನಸ್ಸುಗಳಿಗೂ ಇದು ವಿಶ್ರಾಂತಿ ತಾಣವಾಗಿದೆ. ಮಕ್ಕಳಿಗಾಗಿ ಈಜುಕೊಳ, ಟೆನ್ನಿಸ್, ಮತ್ತು ಬ್ಯಾಡ್ಮಿಂಟನ್ ಕೋರ್ಟ್, ರುಚಿಕರ ತಿಂಡಿ ತಿನಿಸುಗಳ ರೆಸ್ಟೋರೆಂಟ್ ಸೇರಿದಂತೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಸಹ ಇಲ್ಲಿದೆ.ಮುದ್ದುಮರಿಗಳಿಗೆ ಯಾವುದೇ ತೊಂದರೆಯಾಗದಂತೆ ಹಿತವಾಗುವಂತೆ ಶಾಂಪೂ ಸ್ನಾನ, ಬಿಸಿಗಾಳಿಯಿಂದ ಒಣಗಿಸುವುದು, ಕೂದಲು ಬಾಚುವುದು, ಉಗುರು ತೆಗೆಯವುದು, ಹಲ್ಲು ಶುಭ್ರಗೊಳಿಸುವುದು, ಜೊತೆಗೆ ಬಾಡಿ ಮಸಾಜ್ ಸಹ ಇದೆ. ಅವುಗಳಿಗೆ ಬೇಕಾದ ಆಟಿಕೆ, ವಸ್ತ್ರಗಳು ಸಹ ಇಲ್ಲಿ ಲಭ್ಯ.ಇಷ್ಟೇ ಅಲ್ಲದೇ ನಾಯಿಪ್ರಿಯರು ಹೊರಗಡೆ ಹೋಗಬೇಕಾದಾಗ ಅವುಗಳನ್ನು ಜೋಪಾನ ಮಾಡುವ ಜವಾಬ್ದಾರಿಯನ್ನೂ ವ್ಯಾಗ್ಸ್ ಅಂಡ್ ವಿಸ್ಕರ್ಸ್‌ ಹೊರುತ್ತದೆ. ಜೊತೆಗೆ  ಮುದ್ದುಮರಿಗಳಿಗಾಗಿ ವಿಶೇಷ ಸಲೂನ್, ಬೆಕ್ಕುಗಳಿಗೇ ಮೀಸಲಾದ ವಿಶೇಷ ಪ್ರದೇಶ, ಪ್ರಾಣಿಗಳ ವಸ್ತುಗಳಿಗಾಗಿ ವಿಶೇಷ ಅಂಗಡಿ, ಸದಾ ಲಭ್ಯವಿರುವ ಪ್ರಾಣಿ ವೈದ್ಯರು- ಹೀಗೆ ಇದು ಒಟ್ಟಾರೆ `ಪ್ರಾಣಿಗಳ ಸುಂದರ ಸ್ವರ್ಗ~.ಇಲ್ಲಿ ಎಲ್ಲವೂ ಒಂದೇ ಜಾಗದಲ್ಲಿ ಸಿಗುತ್ತದೆ. ಬೆಂಗಳೂರಿನಲ್ಲಿ ಇಷ್ಟೆಲ್ಲಾ ವ್ಯವಸ್ಥೆ ಇರುವ ಮೊದಲ ಸಂಸ್ಥೆ ಇದು ಎಂದು ವ್ಯಾಗ್ಸ್ ಅಂಡ್ ವಿಸ್ಕರ್‌ನ  ಸಂಸ್ಥಾಪಕಿ ರಾಧಿಕಾ ಹೆಮ್ಮೆಪಡುತ್ತಾರೆ. ಈ ಸಂಸ್ಥೆಯನ್ನು ಶ್ರೀಕಂಠದತ್ತ ಒಡೆಯರ್ ಉದ್ಘಾಟಿಸಿದರು.

ಪ್ರಾಣಿಗಳನ್ನು ಮಗುವಿನಂತೆ ಪ್ರೀತಿಸುವವರಿಗೆ ಜೊತೆಗೆ ಅದರ ಆರೈಕೆ ಮಾಡುವುದು ಹೇಗೆ, ಎಲ್ಲಿ? ಎಂಬ ಗೊಂದಲಬೇಡ. ಮುದ್ದುಮರಿಗಳನ್ನು ಮುದ್ದಾಡುವುದರ ಜೊತೆಗೆ ಅವುಗಳ ಸೇವೆಗೆ ಈ ಸಂಸ್ಥೆಯ ಬಾಗಿಲು ತೆರೆದಿದೆ.ಸಂಪರ್ಕಕ್ಕೆ: ವ್ಯಾಗ್ಸ್ ಅಂಡ್ ವಿಸ್ಕರ್ಸ್‌, ಪಟೇಲ್ಸ್ ಇನ್, 38/2, 15ನೇ ಕ್ರಾಸ್, 2ನೇ ಬ್ಲಾಕ್, ಆರ್.ಟಿ. ನಗರ. 

 

 

Post Comments (+)