ನಾಯಿ ಕೊಂದು ಪೀಕಲಾಟ ಎದುರಿಸುತ್ತಿರುವ ಬಳ್ಳಾರಿ ಪಾಲಿಕೆ

7

ನಾಯಿ ಕೊಂದು ಪೀಕಲಾಟ ಎದುರಿಸುತ್ತಿರುವ ಬಳ್ಳಾರಿ ಪಾಲಿಕೆ

Published:
Updated:

ಬಳ್ಳಾರಿ: ಸ್ಥಳೀಯ ಮಹಾನಗರ ಪಾಲಿಕೆಯು  ತಿಂಗಳು ಕೆಲವು ಬೀದಿ ನಾಯಿಗಳ ಮಾರಣಹೋಮ ಮಾಡಿದೆ ಎಂದು ಆರೋಪಿಸಿ  ನಗರದ ರಾವ್‌ಬಹದ್ದೂರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಪಾಲಿಕೆಯ ವಿರುದ್ಧವೇ ಹೋರಾಟ ನಡೆಸುತ್ತಿದ್ದಾಳೆ.ಸ್ಥಳೀಯ ಹವಂಭಾವಿ ಪ್ರದೇಶದ ಭುವನಗಿರಿ ನಿವಾಸಿ ಆನಂದರಾಮನ್ ಸಾಕಿರುವ  ನಾಯಿಯೊಂದನ್ನು ಹಿಡಿದು, ವಿಷ ನೀಡಿ ಕೊಲ್ಲಲಾಗಿದೆ. ಆ ನಾಯಿಯ ಜತೆಗೆ ಅದೇ ಪ್ರದೇಶದ  25ರಿಂದ 30 ಬೀದಿನಾಯಿಗಳನ್ನೂ ಕೊಲ್ಲಲಾಗಿದ್ದು, ಇದು ಅಕ್ಷಮ್ಯ ಎಂದು ಆರೋಪಿಸಿ ಅವರ ಪುತ್ರಿ ನಿಕಿತಾ ಅಯ್ಯರ್ ಕಾನೂನು ಮೊರೆ ಹೋಗಿದ್ದಾರೆ.`ಅಂದು (ನ.28) ಮಧ್ಯಾಹ್ನ ಮನೆಯ ಬಳಿಯಿದ್ದ ನಮ್ಮ ನಾಯಿ ಹಿಡಿದು, ಅದಕ್ಕೆ ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿ, ದರದರನೆ ಎಳೆಯುತ್ತ ವಾಹನವೊಂದರಲ್ಲಿ ಹಾಕಿದ್ದನ್ನು ಕಣ್ಣಾರೆ ಕಂಡೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿ ನಾಯಿ ಮರಳಿಸುವಂತೆ ಕೋರಿದರೆ ಅಪಹಾಸ್ಯ ಮಾಡಿದ ಪಾಲಿಕೆ ಸಿಬ್ಬಂದಿ, ಪ್ರಾಣಿಗಳ ಜೀವದ ಬಗ್ಗೆ ಕಿಂಚಿತ್ ಕರುಣೆ ತೋರದೆ ಅವುಗಳನ್ನು ಕೊಂದು ಹಾಕಿದ್ದಾರೆ' ಎಂದು ನಿಕಿತಾ `ಪ್ರಜಾವಾಣಿ' ಎದುರು ಕೋಪ ವ್ಯಕ್ತಪಡಿಸಿದರು.`ತಕ್ಷಣವೇ ತಂದೆಯ ಜತೆ ಮಹಾನಗರ ಪಾಲಿಕೆಗೆ ತೆರಳಿ, ಮೇಯರ್ ಹಾಗೂ ಆಯುಕ್ತರಿಗೆ ಈ ಕುರಿತು ಕೇಳಿದರೆ, ಅವರಿಂದಲೂ ಬೇಜವಾಬ್ದಾರಿ ಉತ್ತರ ಬಂತು. ನಂತರವೇ ನಾಯಿ  ಕೊಂದ ಬಗ್ಗೆ ಮಾಹಿತಿ ದೊರೆಯಿತು. ಬೀದಿ ನಾಯಿಗಳು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರೆ, ಅವುಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನೀಡಿ, ರೇಬೀಸ್ ನಿರೋಧಕ ಚುಚ್ಚುಮದ್ದು ನೀಡಬೇಕು. ಆ ರೀತಿ ಮಾಡದೆ,  ನಾಯಿ ಕೊಂದಿರುವುದು ಸರಿಯಲ್ಲ ಎಂದು' ಅವರು ತಿಳಿಸಿದರು.`ನಾಯಿ ಕೊಂದ ವಿಷಯವನ್ನು ಅಂತರ್ಜಾಲದ ಮೂಲಕ ಪ್ರಾಣಿ ದಯಾ ಸಂಘಟನೆ ಸಂಘಟನೆಯ ಮೇನಕಾ ಗಾಂಧಿ ಅವರಿಗೆ ತಿಳಿಸಿದೆ. ಅವರು  ದೂರವಾಣಿಯಲ್ಲಿ ಐದಾರು ಬಾರಿ ನನ್ನನ್ನು ಸಂಪರ್ಕಿಸಿ, ಈ ಕುರಿತು ಕಾನೂನು ಹೋರಾಟ ನಡೆಸುವಂತೆ ಸೂಚಿಸಿದ್ದಾೆ. ಸದ್ಯ ಬಳ್ಳಾರಿಯಲ್ಲಿ ಸೂಕ್ತ ವಕೀಲರಿಗಾಗಿ ಹುಡುಕಾಟ ನಡೆಸಿದ್ದು, ಕಾನೂನಿನ ಪ್ರಕಾರ ಪಾಲಿಕೆ ಆಡಳಿತಕ್ಕೆ ನೋಟಿಸ್ ನೀಡುತ್ತೇನೆ' ಎಂದು  ಹೇಳಿದ್ದಾರೆ.ಮೇನಕಾ ಗಾಂಧಿ ಅವರು ಪಾಲಿಕೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸೂಕ್ತ ಉತ್ತರ ದೊರೆಯದ್ದರಿಂದ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ನಂತರ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಮೂಲಕ ತನಿಖೆ ಆರಂಭಿಸಲಾಗಿದೆ ಎಂದು  ವಿವರಿಸಿದರು. `ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ಪೌರಾಯುಕ್ತರು, ಪಾಲಿಕೆಯ ಆರೋಗ್ಯ ವಿಭಾಗದ ಸಿಬ್ಬಂದಿ ಮನೆಗೆ ಭೇಟಿ ನೀಡಿ ವಿವರ ಸಂಗ್ರಹಿಸಿದ್ದಾರೆ. ಪಾಲಿಕೆಯ ಕೆಲವು ಸಿಬ್ಬಂದಿ ನಮ್ಮನ್ನು ಸಂಪರ್ಕಿಸಿ, ದೂರು ನೀಡದಂತೆ ಮನವಿ ಮಾಡಿದ್ದಾರೆ. ಆದರೆ, ಮನುಷ್ಯರಂತೆಯೇ ನಾಯಿಗಳದ್ದೂ ಒಂದು ಜೀವ. ಅವುಗಳನ್ನು ಕೊಂದಿರುವುದು ಖಂಡಿತ ಸಣ್ಣ ಅಪರಾಧವಲ್ಲ ಎಂಬ ಕಾರಣದಿಂದ ನನ್ನ ಹೋರಾಟ ಮುಂದುವರಿಸುತ್ತೇನೆ' ಎಂದು ಅವರು ಹೇಳಿದರು.`ನಾವು ವಿದೇಶದ, ದುಬಾರಿ ನಾಯಿಗಳನ್ನು ಸಾಕಿಲ್ಲ. ಬೀದಿ ನಾಯಿಗಳನ್ನೇ ಸಾಕಿಕೊಂಡಿದ್ದೇವೆ. ಕ್ಷಣಾರ್ಧದಲ್ಲೇ ಅವುಗಳನ್ನು ಕೊಂದು ಹಾಕಿದ್ದರಿಂದ ನಮಗೆ ತೀವ್ರ ದುಃಖವಾಗಿದೆ' ಎಂದರು.

ಐದು ಜನರ ಅಮಾನತು

ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆ ಮೇರೆಗೆ ಈ ಕುರಿತು ತನಿಖೆ ಆರಂಭಿಸಲಾಗಿದೆ. ಅತ್ಯಂತ ವಿಷಕಾರಿ ಔಷಧಿ ಬಳಸಿ ನಾಯಿ ಮತ್ತು 60 ಹಂದಿಗಳನ್ನು ಕೊಂದಿರುವ ವಿಷಯ ಬಹಿರಂಗಗೊಂಡಿದೆ.

ಇದರಲ್ಲಿ ಪಾಲಿಕೆ ಅಧಿಕಾರಿಗಳು, ಸದಸ್ಯರೂ ಭಾಗಿಯಾಗಿದ್ದಾರೆ. ಬುಧವಾರ ಪಾಲಿಕೆಯ ಆರೋಗ್ಯ ಇಲಾಖೆ ಇನ್‌ಸ್ಪೆಕ್ಟರ್, ಸ್ಟೋರ್ ಕೀಪರ್ ಸೇರಿದಂತೆ ಐವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಆದೇಶ ನೀಡಿಲ್ಲ

`ಬೀದಿನಾಯಿ ಕೊಲ್ಲುವಂತೆ ಪಾಲಿಕೆಯಿಂದ ಯಾವುದೇ ಆದೇಶ ನೀಡಿರಲಿಲ್ಲ. ನಾಯಿ ಕೊಂದ ವಿಷಯ ನನಗೆ ಗೊತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಈ ಕುರಿತು ವಿವರಣೆ ಕೇಳಿ ನನಗೆ ಒಂದು ನೋಟಿಸ್ ನೀಡಲಾಗಿದೆ. ಅದಕ್ಕೆ ಉತ್ತರ ನೀಡಿದ್ದೇನೆ'

-ಮೇಯರ್ ಇಬ್ರಾಹಿಂ ಬಾಬು 

ತಪ್ಪಿತಸ್ಥರ ವಿರುದ್ಧ ಕ್ರಮ

ಪ್ರಾಣಿಗಳ ಮಾರಣಹೋಮ ಮಾಡಿರುವುದು ಭಾರಿ ತಪ್ಪು. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಣಮಿಸಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶೆಡ್ಯೂಲ್ಡ್ `ಎಕ್ಸ್' ಅಡಿ ಸೇರಿರುವ ವಿಷಕಾರಿ ಔಷಧಿಯನ್ನು ಪ್ರಾಣಿಗಳನ್ನು ಕೊಲ್ಲಲು ಬಳಸಲಾಗಿದೆ. ಇವುಗಳನ್ನು ತಂದು ಬಳಸಿದ ತಿರುಪತಿ ಮೂಲದ ವ್ಯಕ್ತಿಯೊಬ್ಬ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ಮುಂದುವರಿದಿದೆ. ಔಷಧಿಯ ಮಾದರಿಯನ್ನೂ, ನಾಯಿಗಳ ಶವದ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

- ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry