ನಾಯಿ ದಾಳಿಗೆ ಜಿಂಕೆಮರಿ ಬಲಿ

7

ನಾಯಿ ದಾಳಿಗೆ ಜಿಂಕೆಮರಿ ಬಲಿ

Published:
Updated:

ಮುಂಡಗೋಡ: ನಾಡಿಗೆ ಬಂದ ಎರಡು ಜಿಂಕೆಗಳಲ್ಲಿ ಮರಿಯೊಂದ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲಾಗದೇ ಪ್ರಾಣ ತೆತ್ತರೆ, ಮತ್ತೊಂದು ಜಿಂಕೆ ಜಲಾಶಯದಲ್ಲಿ ಈಜಿ ಕಾಡಿನೊಳಗೆ ಸೇರಿದ ಘಟನೆ ತಾಲ್ಲೂಕಿನ ಸನವಳ್ಳಿ ಜಲಾಶಯದ ಸನಿಹ ಮಂಗಳವಾರ ಸಂಭವಿಸಿದೆ.ಸನವಳ್ಳಿ ಜಲಾಶಯದ ಸನಿಹ ಬಂದ ಎರಡು ಜಿಂಕೆಗಳನ್ನು ಕಂಡ ನಾಲ್ಕೈದು ನಾಯಿಗಳು ಜಿಂಕೆಗಳನ್ನು ಬೆನ್ನಟ್ಟಿವೆ. ನಾಯಿ ದಾಳಿಯಿಂದ ರಕ್ಷಿಸಿಕೊಳ್ಳಲು ಜಿಂಕೆಗಳು ಪ್ರಯತ್ನಿಸಿವೆ. ಜಲಾಶಯದ ಸನಿಹದ ಉದ್ಯಾನವನದತ್ತ ಓಡಿದ ಜಿಂಕೆ ತಂತಿ ಬೇಲಿಯನ್ನು ಜಿಗಿಯಲು ಹೋಗಿ ಗಾಯಗೊಂಡಿದೆ. ಮತ್ತೊಂದು ಜಿಂಕೆ ಜಲಾಶಯದಲ್ಲಿ ಈಜುತ್ತಾ ದಡ ಸೇರಿದೆ. ಆ ದಡದತ್ತಲೂ ನಾಯಿಗಳು ಹೋಗುತ್ತಿರುವುದನ್ನು ಕಂಡ ಅಲ್ಲಿನ ಗ್ರಾಮಸ್ಥರು ನಾಯಿಗಳನ್ನು ಓಡಿಸಿದ್ದಾರೆ. ಅರಣ್ಯ ಸಿಬ್ಬಂದಿ ಪಶುವೈದ್ಯರನ್ನು ಸ್ಥಳಕ್ಕೆ ಕರೆಯಿಸಿ ಗಾಯಗೊಂಡಿದ್ದ ಜಿಂಕೆಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಕುತ್ತಿಗೆ ಭಾಗದಲ್ಲಿ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಸ್ಥಳದಲ್ಲಿಯೇ ಮೃತಪಟ್ಟಿದೆ.ಸನವಳ್ಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಂಕೆಗಳು ಕಾಣಿಸಿಕೊಳ್ಳುತ್ತಿದ್ದು ನೀರು, ಆಹಾರ ಅರಸುತ್ತಾ ನಾಡಿನತ್ತ ಮುಖ ಮಾಡುತ್ತವೆ. ನಾಡಿಗೆ ಬಂದ ಜಿಂಕೆಗಳು ಹೆಚ್ಚಾಗಿ ನಾಯಿ ದಾಳಿ ಇಲ್ಲವೇ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry