ನಾಯ್ಕಲ್ ಹಳ್ಳದ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ

7

ನಾಯ್ಕಲ್ ಹಳ್ಳದ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ

Published:
Updated:

ಯಾದಗಿರಿ: ಸಮೀಪದ ನಾಯ್ಕಲ್ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಸೇತುವೆ ನಿರ್ಮಾಣ ಕಾಮಗಾರಿಗೆ ವಿಜಯದಶಮಿಯಂದು ಭೂಮಿ ಪೂಜೆ ನೆರವೇರಿಸಲಾಯಿತು.ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಕೃಷ್ಣಾ ಭಾಗ್ಯ ಜಲ ನಿಗಮದ ಖಾನಾಪೂರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಣ್ಣಗೌಡ, ಈ ಭಾಗದ ರೈತರ ಹಲವಾರು ವರ್ಷಗಳ ಬೇಡಿಕೆ ಈಡೇರಿದಂತಾಗಿದ್ದು, ರೈತರ ಕನಸು ನನಸಾಗುವ ಕಾಲ ಸಮೀಪಿಸಿದೆ ಎಂದು ಹೇಳಿದರು.ರೂ.59 ಲಕ್ಷ ವೆಚ್ಚದಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಖಾನಾಪುರ ಸನ್ನತ್ತಿ ಏತ ನೀರಾವರಿ ಉಪವಿಭಾಗವು ಈ ಸೇತುವೆ ನಿರ್ಮಿಸುತ್ತಿದ್ದು, ಎರಡು ಕಡೆಗಳಲ್ಲಿ ಸಿಡಿ ನಿರ್ಮಾಣ ಕಾರ್ಯಕ್ಕೆ ಇದೀಗ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ಪ್ರವಾಹ, ಮಳೆಯಾಗಿದ್ದರಿಂದ ಕಾಮಗಾರಿಯ ಚಾಲನೆಗೆ ವಿಳಂಬವಾಗಿದೆ. ಕಾಮಗಾರಿಯನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.ಹಳ್ಳದ ಆಚೆ ಕಡೆಗೆ ನೂರಾರು ಎಕರೆ ಜಮೀನು ಇದ್ದು, ಹಳ್ಳದಲ್ಲಿ ನೀರು ಬಂದಾಗ ರೈತರು ಹರಸಾಹಸ ಮಾಡಬೇಕಾಗಿತ್ತು. ಭೀಮಾ ಬ್ಯಾರೇಜ್‌ಗೆ ಗೇಟ್ ಹಾಕಿದಾಗಲಂತೂ ಹಿನ್ನೀರಿನಿಂದ ರೈತರ ಜಮೀನುಗಳಿಗೆ ಸಂಪರ್ಕ ಕಡಿತವಾಗುತ್ತಿತ್ತು. ಈ ಬಗ್ಗೆ ಹಲವಾರು ಬಾರಿ ರೈತರು ಮನವಿ ಸಲ್ಲಿಸಿದ್ದರು. ಕಳೆದ ಕೆಲ ತಿಂಗಳ ಹಿಂದೆ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭೀಮರಾಯನಗುಡಿಗೆ ಭೇಡಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೀರಬಸವಂತರೆಡ್ಡಿ ಮುದ್ನಾಳರು, ನಾಯ್ಕಲ್ ಗ್ರಾಮದ ರೈತರ ಸಮಸ್ಯೆ ಕುರಿತು ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು.ಗುತ್ತಿಗೆದಾರ ಆರ್.ಎಸ್. ರೆಡ್ಡಿ, ಮೋಹನರೆಡ್ಡಿಗೌಡ ಗೋಗಿ, ಎಂಜಿನಿಯರ್‌ಗಳಾದ ವಿಶ್ವನಾಥರೆಡ್ಡಿ ಗೋಸ್ವಾಮಿ, ವಿಶ್ವನಾಥ ಚುತುರಾಚಾರ್ಯಮಠ, ಕೇದಾರಸ್ವಾಮಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೆಂಕಟರೆಡ್ಡಿ ಗೋಸ್ವಾಮಿ, ಪತ್ರಕರ್ತ ನಾಗಪ್ಪ ಕುಂಬಾರ, ರೈತರಾದ ಬಸವರಾಜಪ್ಪಗೌಡ ವಡ್ವಡಗಿ, ಜಿ. ಚೆನ್ನಾರೆಡ್ಡಿ, ಭೂಪಾರೆಡ್ಡಿ ಹಳೆಮನಿ, ನೀಲಕಂಠಪ್ಪಗೌಡ ದ್ಯಾವಪ್ಪನೋರ್, ಹುಸೇನ್, ರಸೂಲ್ ಟೇಲರ್ ಮುಂತಾದವರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry