ಶನಿವಾರ, ಏಪ್ರಿಲ್ 17, 2021
27 °C

ನಾಯ್ದಗುರಿ ಸಂತ್ರಸ್ತರಿಗೆ ಹಕ್ಕುಪತ್ರ: ಪೇಜಾವರಶ್ರೀ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಜಿರೆ: ಸುಲ್ಕೇರಿ ಗ್ರಾಮದ ನಾಯ್ದಗುರಿಯಲ್ಲಿ  ಆರು ಮಲೆಕುಡಿಯ ಕುಟುಂಬಗಳು ವಾಸ್ತವ್ಯವಿರುವ ಮನೆಗಳಿಗೆ ಸರ್ಕಾರ ಹಕ್ಕುಪತ್ರ ನೀಡುವಂತೆ ಒತ್ತಡ ಹೇರುವುದಾಗಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.ಬುಧವಾರ ನಾಯ್ದಗುರಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಸಂತ್ರಸ್ಥರಿಗೆ ತಕ್ಷಣ ತಾತ್ಕಾಲಿಕ ನೆರವು ನೀಡುವುದಾಗಿ ಭರವಸೆ ನೀಡಿದ ಸ್ವಾಮೀಜಿ ಮನೆಗೆ ಬೇಕಾದ ಪಾತ್ರೆ - ಪರಡಿ ಹಾಗೂ ಇತರ ಅವಶ್ಯಕ ಪರಿಕರಗಳನ್ನು ನೀಡುವುದಾಗಿ ತಿಳಿಸಿದರು.  ಯಾವುದೇ ರೀತಿಯ ಭಯ - ಆತಂಕ ಪಡಬೇಡಿ ಎಂದು ಸಂತ್ರಸ್ತರಿಗೆ ಅಭಯ ನೀಡಿದರು.ಸಂತ್ರಸ್ಥರಾದ ಸಂಜೀವ ಮಲೆಕುಡಿಯ, ಲಕ್ಷ್ಮಣ ಮಲೆಕುಡಿಯ, ರಾಮ ಮಲೆಕುಡಿಯ, ಹೊನ್ನಮ್ಮ, ವಸಂತಿ ಮತ್ತು ಚಂದು ಮಲೆಕುಡಿಯ ಕುಟುಂಬದ ಸದಸ್ಯರು ತಮ್ಮ ಸಂಕಷ್ಟವನ್ನು ಸ್ವಾಮೀಜಿ ಬಳಿ  ತೋಡಿಕೊಂಡರು.ಪ್ರಕರಣದ ಹಿನ್ನೆಲೆ: ಹಿಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಸಲಹೆಯಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನದದಿಂದ ಹೊರಬಂದ ಆರು ಮಲೆಕುಡಿಯ ಕುಟುಂಬಗಳು ಸುಲ್ಕೇರಿ ಗ್ರಾಮದ ನಾಯ್ದಗುರಿಯಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ವಾಸ್ತವ್ಯ ಮಾಡಿದರು.ಆದರೆ ಇದು ಅಕ್ರಮ ಒತ್ತುವರಿಯಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಜ.13ರಂದು ಬಲಾತ್ಕಾರವಾಗಿ ಮನೆಯಿಂದ ಹೊರಗೆ ಹಾಕಿ ಮನೆಗಳನ್ನು ಧ್ವಂಸ ಮಾಡಿದ್ದರು. ಆದರೆ ಮತ್ತೆ ಅದೇ ಜಾಗದಲ್ಲಿ ಸಂತ್ರಸ್ತರು ಸಾರ್ವಜನಿಕರ ನೆರವಿನೊಂದಿಗೆ ಮನೆ ನಿರ್ಮಿಸಿ ವಾಸ್ತವ್ಯ ಮಾಡುತ್ತಿದ್ದಾರೆ.  ನಾರಾವಿಗೆ ಭೇಟಿ: ಬಳಿಕ ಶ್ರೀಗಳು  ನಾರಾವಿಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.