ನಾರಾಯಣಮೂರ್ತಿಗಳ (ಅ)ನ್ಯಾಯದ ಒಂದು ಮಾದರಿ

7

ನಾರಾಯಣಮೂರ್ತಿಗಳ (ಅ)ನ್ಯಾಯದ ಒಂದು ಮಾದರಿ

Published:
Updated:

ಇನ್ಫೋಸಿಸ್ ನಾರಾಯಣ ಮೂರ್ತಿಗಳು ಆಡಿದ ಮಾತುಗಳು (ಪ್ರವಾ. ಪುಟ 4. ಅ.9) ನಮ್ಮ ಉದ್ಯಮಪತಿಗಳ ಸಾಮಾಜಿಕ ದೃಷ್ಟಿಕೋನಕ್ಕೆ ತಕ್ಕ ಉದಾಹರಣೆಯಾಗಿದೆ. ನಾರಾಯಣ ಮೂರ್ತಿಗಳು ಆಡಿದ ಮೂರು ಮುತ್ತಿನಂಥ ಮಾತುಗಳು: 1. ದೇಶದ ನಾಗರಿಕರು ದೇಶದ ಯಾವುದೇ ಪ್ರದೇಶದಲ್ಲಿ ನೆಲೆಸಿ ಉದ್ಯೋಗ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಈ ಮೂಲಭೂತ ಹಕ್ಕಿಗಿಂತ ನಮ್ಮ ರಾಜ್ಯದ ಪ್ರೀತಿ ದೊಡ್ಡದಲ್ಲ. 2. ನಮ್ಮ ರಾಜ್ಯದವರಿಗೆ ಹೆಚ್ಚಿನ ಉದ್ಯೋಗ ಸಿಗಬೇಕೆಂದರೆ ರಾಜ್ಯದ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. 3. ಜಾತಿಯಾಧಾರಿತ ಮೀಸಲಾತಿ ಸಮ್ಮತವಲ್ಲ. ಪ್ರತಿಭೆಗಷ್ಟೇ ಮನ್ನಣೆ ಸಿಗಬೇಕು. ಪ್ರತಿಭಾವಂತ ದಲಿತರು ಐಟಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಂತೆ ಪರಿಣಿತಿ ಪಡೆಯುವ ಕಾರ್ಯಕ್ರಮಗಳನ್ನು ರೂಪಿಸಬೇಕು.

ನಾರಾಯಣ ಮೂರ್ತಿಯವರ ಮೊದಲ ಮಾತನ್ನು ಅದರ ಮುಖಬೆಲೆಯಲ್ಲಿ ಒಪ್ಪಬಹುದು. ಕರ್ನಾಟಕದಲ್ಲಿ ಕನ್ನಡಿಗರಿಗೆ ಮಾತ್ರ ಕೆಲಸದ ಹಕ್ಕು ಎಂಬುದು ಸಾಂವಿಧಾನಿಕ ನಾಗರಿಕ ಹಕ್ಕಿನ ದಮನವೇ ಸರಿ. ಆದರೆ ನಾರಾಯಣ ಮೂರ್ತಿಯವರ ಮಾತಿನ ಹಿನ್ನೆಲೆ ಬರಿ ಸಾಂವಿಧಾನಿಕ ನ್ಯಾಯವನ್ನು ಎತ್ತಿಹಿಡಿಯುವ ಜರೂರಿನದಲ್ಲ. ಕರ್ನಾಟಕದ ಎಷ್ಟು ಜನರಿಗೆ ಅವರ ಸಂಸ್ಥೆ ಉದ್ಯೋಗ ಒದಗಿಸಿದೆ ಎಂಬ ಪ್ರಶ್ನೆಗೆ ಸಮಜಾಯಿಷಿ. ಈ ಪ್ರಶ್ನೆಯನ್ನು ಸಾಂವಿಧಾನಿಕ ಹಕ್ಕನ್ನು ದಮನಿಸುವ ಉದ್ದೆೀಶದಿಂದ ಕೇಳಬೇಕಾಗಿಲ್ಲ. ನಾರಾಯಣ ಮೂರ್ತಿಯವರಂಥ ಉದ್ಯಮಪತಿಗಳು ತಾವು ಕರ್ನಾಟಕದಲ್ಲಿ ಉದ್ದಿಮೆ ಸ್ಥಾಪಿಸುವ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸುವಾಗ, ತಮ್ಮ ಉದ್ದಿಮೆ ಸ್ಥಾಪಿಸಿ, ಲಾಭದಾಯಕ ವ್ಯವಹಾರ ನಡೆಸಿಕೊಂಡು ಹೋಗುವುದಕ್ಕೆ ಅನೇಕ ಬಗೆಯ ತೆರಿಗೆ ವಿನಾಯಿತಿ ಹಾಗೂ ಒದಗಿಸಬೇಕಾದ ಸವಲತ್ತುಗಳ ಉದ್ದ ಪಟ್ಟಿ ಕೊಡುತ್ತಾರೆ. ತಾವು ಉದ್ದಿಮೆ ಸ್ಥಾಪಿಸಿದರೆ ರಾಜ್ಯದ ಯುವಜನರಿಗೆ ಉದ್ಯೋಗ ಸೃಷ್ಟಿಯಾಗುವುದರಿಂದ ಈ ವಿನಾಯಿತಿ-ಸವಲತ್ತುಗಳನ್ನು ಬೇಡುವುದು ತಮ್ಮ ಹಕ್ಕು ಎಂದೇ ವಾದಿಸುತ್ತಾರೆ. `ಕೊಡದಿದ್ದಲ್ಲಿ ಬೇರೆ ರಾಜ್ಯಗಳಿಗೆ ಹೋಗುತ್ತೇವೆ~ ಎಂಬ ಧಮಕಿ ಕೂಡ ಬೇಡಿಕೆ ಹಿಂದೆ ಇರುತ್ತದೆ. ನಾರಾಯಣ ಮೂರ್ತಿಯವರ ಸಂಸ್ಥೆಗೆ ಕರ್ನಾಟಕ ಸರ್ಕಾರ ದಶಕಗಳ ಕಾಲ ನೀಡಿರುವ ತೆರಿಗೆ ವಿನಾಯಿತಿ-ಸವಲತ್ತುಗಳಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟು ನಷ್ಟವಾಗಿದೆ ಎಂಬ ಲೆಕ್ಕಾಚಾರ ಮಾಡಿ ನೋಡಿ. ಕರ್ನಾಟಕದ ಯುವಕರಿಗೆ ಎಷ್ಟು ಉದ್ಯೋಗ ಒದಗಿಸಿದ್ದೇವೆ ಎಂಬ ಅವಲೋಕನ ಮಾಡಿಕೊಳ್ಳುವ ಪ್ರಾಮಾಣಿಕತೆ ಕೂಡ ಇಲ್ಲದೆ ಮೂರ್ತಿಗಳು ಒಮ್ಮೆಲೆ ಸಾಂವಿಧಾನಿಕ ಹಕ್ಕಿನ ಮಾತನಾಡುವುದು ಉತ್ತರದಾಯಿತ್ವದಿಂದ ಕೊಸರಿಕೊಳ್ಳುವ ಬುದ್ಧಿ. `ಬೆಂಗಳೂರು, ಮೈಸೂರು, ಮಂಗಳೂರಲ್ಲಿಯೇ ಎಷ್ಟು ಜನ ಕರ್ನಾಟಕದವರಿಗೆ ಕೆಲಸ ಕೊಟ್ಟಿದ್ದೀರಿ ಎಂದು ಕೇಳುತ್ತಿಲ್ಲ; ನಿಮ್ಮ ಹೊರ ರಾಜ್ಯದ ಕ್ಯಾಂಪಸ್ಸುಗಳನ್ನು ಕೂಡಿಸಿ ಹೇಳಿ~ ಎಂದು ಕೇಳಿದರೆ ಮೂರ್ತಿಯವರು ಹಕ್ಕುಗಳ ಮಾತನಾಡುತ್ತಾರೆ. `ನಿಮ್ಮ ಕ್ಯಾಂಪಸ್ಸುಗಳು ನೆಲೆಯೂರಿರುವ ನೆಲದಲ್ಲಿ ಯಾವ ರೈತನ ಉಳುವ ಭೂಮಿ ಇತ್ತೋ, ಯಾವ ಸಂಸಾರಸ್ಥರ ಮನೆಗಳಿದ್ದವೋ, ತಾವು ಮನೆಗಳಿಗೆ ಅನ್ವಯವಾಗುವ ವಿದ್ಯುತ್ ದರದಲ್ಲಿ ವಿದ್ಯುತ್ತನ್ನು ಪಡೆದಿದ್ದರಿಂದ ಎಷ್ಟು ಸಾರಿ ಸಾಮಾನ್ಯ ಸಂಸಾರಸ್ಥರು ಕರೆಂಟು ದುಬಾರಿಯಾಗುವುದನ್ನು ನುಂಗಿಕೊಂಡರು, ಅವರೆಲ್ಲರಿಗೂ ಬದುಕುವ ಸಾಂವಿಧಾನಿಕ ಹಕ್ಕುಗಳಿವೆ ಎನ್ನುವುದು ಮೂರ್ತಿಗಳಿಗೆ ಅಷ್ಟು ಮುಖ್ಯವಲ್ಲ ಎಂದು ಕಾಣುತ್ತದೆ.

ಮೂರ್ತಿಗಳು `ಜಾತಿ ಮುಖ್ಯವಲ್ಲ, ಪ್ರತಿಭೆ ಮುಖ್ಯ~ ಎನ್ನುತ್ತಾರೆ. ಅಮೆರಿಕದ ಉದ್ಯಮಗಳು ತಮ್ಮಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ `ಸಾಮಾಜಿಕ-ಸಾಂಸ್ಕೃತಿಕ-ವರ್ಣ~ ವಿವರಗಳನ್ನು ಹೆಗ್ಗಳಿಕೆಯಾಗಿ ಪ್ರಕಟಿಸುತ್ತವೆ. ಹಾಗೆಯೇ ಮೂರ್ತಿಯವರ ಉದ್ದಿಮೆ ತಮ್ಮ ಉದ್ಯೋಗಿಗಳ `ಸೋಶಿಯಲ್ ಪ್ರೊಫೈಲ್~ ಪ್ರಕಟಿಸಿದರೆ ಚೆನ್ನ. ಇರಲಿ, ದಲಿತರಿಗೆ ಉದ್ಯೋಗ ನೀಡುವಾಗ ಮಾತ್ರ `ಮೀಸಲಾತಿ ವಿರೋಧ~ `ಪ್ರತಿಭಾ ಮನ್ನಣೆ~ಯ ನ್ಯಾಯವಂತಿಕೆಯ ಮಾತು ಬರುತ್ತದೆ. ಇದೇ ಮಾನದಂಡವನ್ನು ಮೂರ್ತಿಯವರಂಥ ಬಂಡವಾಳದಾರ ಉದ್ಯಮಿಗಳಿಗೆ ಅನ್ವಯಿಸಿ ನೋಡೋಣ. ನಮ್ಮ ಸರ್ಕಾರ ಮಾನವಂತವಾಗಿದ್ದರೆ, ಮೂರ್ತಿಯವರಂಥ ಬಂಡವಾಳದಾರರು ಪ್ರಸ್ತಾಪ ತಂದಾಗ, `ಆಯ್ತಪ್ಪ, ನಿಮ್ಮ ಉದ್ದಿಮೆ ಸ್ಥಾಪನೆಗೆ ಅಗತ್ಯವಾದ ನೆಲ, ಬಂಡವಾಳ ತಯಾರು ಮಾಡಿಕೊಂಡು ಬನ್ನಿ. ಸರ್ಕಾರದ ನಿಯಮ-ನೀತಿ ಪ್ರಕಾರ ತೆರಿಗೆ, ಸೌಲಭ್ಯ ಶುಲ್ಕ ಕಟ್ಟಿ, ನಿಮ್ಮ ಪ್ರತಿಭೆಯನುಸಾರ ವ್ಯವಹಾರ ನಡೆಸಿ ಲಾಭ ಮಾಡಿಕೊಳ್ಳಿ~ ಎಂದಿದ್ದರೆ, ಎಷ್ಟು ಮಂದಿ ಐ.ಟಿ. ಬಿ.ಟಿ. ದೊರೆಗಳು ತಮ್ಮ `ಪ್ರತಿಭಾ ಪ್ರದರ್ಶನ~ ಮಾಡುತ್ತಿದ್ದರು? ಸರ್ಕಾರ ಇವರು ಬೊಟ್ಟು ಮಾಡಿ ತೋರಿಸಿದ ಭೂಮಿಯನ್ನು -ಉಳುವ ಭೂಮಿ ಇರಲಿ, ವಾಸಿಸುವ ಮನೆಗಳಿರಲಿ- ತನ್ನ ಬಲ ಪ್ರಯೋಗಿಸಿ ಕಿತ್ತು ಕೊಡಬೇಕು, ಆ ಜಾಗಕ್ಕೆ ಒಳ್ಳೆಯ ರಸ್ತೆ ಮಾಡಿ ಕೊಡಬೇಕು, ಅಗ್ಗದ ದರದಲ್ಲಿ ನೀರು, ಕರೆಂಟು ಕೊಡಬೇಕು. ಸಿಕ್ಕ ಸಿಕ್ಕ ತೆರಿಗೆಗಳ ವಿನಾಯಿತಿ ಕೊಡಬೇಕು- ಇದೆಲ್ಲ `ಅಭಿವೃದ್ಧಿ~ಗಾಗಿ ಉದ್ದಿಮೆದಾರರ `ಸಬಲೀಕರಣ~. ಮೂರ್ತಿಯವರಿಗೆ ಇದು `ಹಸಿದವರಿಂದ ಕಿತ್ತುಕೊಂಡು ಹೊಟ್ಟೆಬಾಕರಿಗೆ ಉಣಿಸುವ~ ಮೀಸಲಾತಿ ಯೋಜನೆ ಅನ್ನಿಸುವುದಿಲ್ಲ, ಯಾಕೆ? ಕರ್ನಾಟಕ ಸರ್ಕಾರ, ಕ್ಷೌರಿಕರು, ಟೇಲರುಗಳಿಗೂ ಸೇರಿದ ಹಾಗೆ ಎಲ್ಲ ಸೇವೆಗಳ ಮೇಲೆ ಶೇ 15 `ಸೇವಾ ತೆರಿಗೆ~ ವಿಧಿಸಿದಾಗ, ಮೂರ್ತಿಯವರ ನೇತೃತ್ವದಲ್ಲಿ ಐ.ಟಿ-ಬಿ.ಟಿ. ದೊರೆಗಳು ದಂಡು ಕಟ್ಟಿಕೊಂಡು ಮುಖ್ಯಮಂತ್ರಿಗಳ ಬಳಿ ಹೋಗಿ `ಹೀಗೆಲ್ಲ ಮಾಡಿದರೆ ನಾವೆಲ್ಲ ನೆರೆ ರಾಜ್ಯಗಳಿಗೆ ವಲಸೆ ಹೋಗುತ್ತೇವೆ~ ಎಂದು ಧಮಕಿ ಹಾಕಿ ಶೇ 5ಕ್ಕೆ ಇಳಿಸಿಕೊಂಡು ಬಂದರು- `ಎಂಥ ಪ್ರತಿಭೆ!~ ಇದು ನಾರಾಯಣ ಮೂರ್ತಿಯವರ ವೈಯಕ್ತಿಕ ಅಭಿಪ್ರಾ ಎಂದು ಟೀಕಿಸುತ್ತಿಲ್ಲ. ಇದು ಸಮಾಜದಲ್ಲಿ ಉಳ್ಳವರ `ಠೇಂಕಾರದ~ ಮಾತುಗಳ ಒಂದು ಮಾದರಿ.

ಮೂರ್ತಿಗಳು ಕರ್ನಾಟಕದಲ್ಲಿ ಶಿಕ್ಷಣ ಗುಣಮಟ್ಟ ಸುಧಾರಿಸುವ ಮಾತನಾಡಿದ್ದಾರೆ. ಇಲ್ಲಾದರೂ ಅವರು ಒಂಚೂರು ಪ್ರಾಮಾಣಿಕರಾಗಿರಬಹುದಿತ್ತು. ಯಾಕೆಂದರೆ, ಮೂರ್ತಿಯವರೂ ಸೇರಿದ ಹಾಗೆ ಇವತ್ತು ಉದ್ಯಮಪತಿಗಳ ದೂರೆಂದರೆ, `ಭಾರತದ ಎಂಜಿನಿಯರಿಂಗ್ ಪದವೀಧರರಲ್ಲಿ ನೂರಕ್ಕೆ 70ರಷ್ಟು ಜನ ಉದ್ದಿಮೆಗಳಲ್ಲಿ ನೇರವಾಗಿ ಉದ್ಯೋಗ ಮಾಡಲು ಅರ್ಹರಾಗಿಲ್ಲ. ಅವರನ್ನು ಉದ್ಯೋಗಕ್ಕೆ ತೆಗೆದುಕೊಂಡು, ಸಂಬಳ ಸಹಿತ ವರ್ಷ ತರಬೇತುಗೊಳಿಸಿ ನಮ್ಮ ಉದ್ದಿಮೆಗೆ ತಕ್ಕ ಕೆಲಸ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ನಮ್ಮ ಎಂಜಿನಿಯರಿಂಗ್ ಕಲಿಕಾ ಪದ್ಧತಿಯನ್ನು ನೇರಗೊಳಿಸಬೇಕಾಗಿದೆ~. ಇದು ಚರ್ಚಾಸ್ಪದ ವಿಷಯ. ಆದರೆ ಇಲ್ಲಿ ಗುಣಮಟ್ಟದ ಪ್ರಶ್ನೆ ಬರಿ ಕರ್ನಾಟಕದ ಮಟ್ಟಕ್ಕೆ ಮಾತ್ರ ಸೀಮಿತವಾದುದು ಎಂದು ಯಾರೂ ಹೇಳಿದ್ದಿಲ್ಲ. ಆದರೆ ಮೂರ್ತಿಯವರು `ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು~ ಅಂದ ಹಾಗೆ ` ಕರ್ನಾಟಕದ ಯುವಕರಿಗೆ ಉದ್ಯೋಗದ ಪ್ರಶ್ನೆಗೆ~ `ಮೂರು ಮತ್ತೊಂದು~ ಎಂದು ಮಳ್ಳಿ ಉತ್ತರ ಕೊಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry