ನಾರುವ ಚರಂಡಿ; ಬದುಕು ಅಸಹನೀಯ

7

ನಾರುವ ಚರಂಡಿ; ಬದುಕು ಅಸಹನೀಯ

Published:
Updated:

ನಂಜನಗೂಡು: ಕೊಳೆತು ನಾರುವ ಚರಂಡಿ, ಮಳೆ ಬಂದರೆ ಮನೆಗೆ ನುಗ್ಗುವ ನೀರು, ಕೆಟ್ಟ ವಾಸನೆಯಿಂದ ಉಸಿರುಗಟ್ಟುವ ವಾತಾವರಣ, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನ, ಇಲ್ಲದ ಅಂಗನವಾಡಿ ಕೇಂದ್ರ.ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿ.ಮೀ. ಅಂತರದಲ್ಲಿರುವ ಬೃಹತ್ ಕೈಗಾರಿಕಾ ಪ್ರದೇಶವನ್ನೇ ಹೊದ್ದು ಮಲಗಿರುವ ಕನಕನಗರ ಎಂಬ ಗ್ರಾಮದ ಗೋಳಿನ ಕಥೆ ಇದು. ಕಪಿಲಾ ನದಿಗೆ ಅತಿ ಸನಿಹದಲ್ಲಿರುವ ಈ ಗ್ರಾಮ ಉಬ್ಬು, ತಗ್ಗು ಭೂ ಪ್ರದೇಶದಲ್ಲಿ 30 ವರ್ಷಗಳ ಹಿಂದೆ ತಲೆ ಎತ್ತಿತು. ಇದಕ್ಕೆ ಕಾರಣ ಕೂಗಲತೆಯ ದೂರಲ್ಲಿ ಹತ್ತಾರು ಕಾರ್ಖಾನೆಗಳು ಅಸ್ತಿತ್ವಕ್ಕೆ ಬಂದಿರುವುದು.ವಿಶ್ವದರ್ಜೆಯ ನೆಸ್ಲೆ ಇಂಡಿಯಾ, ಜುಬಿಲೆಂಟ್ ಲೈಫ್ ಸೈನ್ಸಸ್, ಎಟಿ ಅಂಡ್ ಎಸ್, ಆರ‌್ಯವೈಶ್ಯ ಕೊಟ್ಟಕ್ಕಲ್, ವಿಕೆಸಿ ಸೇರಿದಂತೆ ಹಲವು ಕೈಗಾರಿಕೆಗಳು ಈ ಗ್ರಾಮದ ಪಶ್ಚಿಮ ಮತು ದಕ್ಷಿಣ ದಿಕ್ಕಿನಲ್ಲಿ ಸ್ಥಾಪನೆಯಾಗಿವೆ. ಸಮೀಪದ ಕತ್ವಾಡಿಪುರ ಗ್ರಾಮದಿಂದ ವಲಸೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಕನಕನಗರದ ನಿವಾಸಿಗಳಾಗಿದ್ದಾರೆ. ಇದರ ಜೊತೆಗೆ ಕಾರ್ಖಾನೆಗಳಲ್ಲಿ ದುಡಿಯುವ ಉತ್ತರ ಭಾರತದ ಕಾರ್ಮಿಕರು ಇಲ್ಲಿ ಮನೆಗಳನ್ನು ಬಾಡಿಗೆಗೆ ಪಡೆದಿದ್ದಾರೆ. ತಾಲ್ಲೂಕಿನ 45 ಗ್ರಾಮ ಪಂಚಾಯಿತಿಗಳ ಪೈಕಿ ಆದಾಯ ಗಳಿಕೆಯಲ್ಲಿ 2ನೇ ಸ್ಥಾನ ಹೊಂದಿರುವ ದೇಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕನಕನಗರ ಸೇರಿದೆ. ಆದರೆ, ಈ ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತದೆ. ಚರಂಡಿಗಳು ಸ್ವಚ್ಛತೆ ಕಾಣದೆ ಕೊಳೆಯುತ್ತಿವೆ. ಇಂತಹ ಪರಿಸರದಲ್ಲಿ ಬದುಕುವುದಾದರೂ ಹೇಗೆ? ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ತಿಂಡಿ, ತಿನಿಸಿ ತಯಾರಿಸಿ ಮಾರುವ ಮಹಿಳೆ.ಕಲುಷಿತ ಪರಿಸರದಲ್ಲಿ ಯಾವಾಗ, ಯಾವ ತರಹದ ರೋಗ ಆವರಿಸುತ್ತದೋ ಎಂಬ ಭಯದಲ್ಲಿ ನಾವಿದ್ದೇವೆ. ರಸ್ತೆಗಳು ಡಾಂಬರು ಕಂಡೇ ಇಲ್ಲ. ಬೀದಿ ಕಸ  ಗುಡಿಸುವರಿಲ್ಲ. ಅಂಗನವಾಡಿ ಕೇಂದ್ರ ಇಲ್ಲ. ಬಸ್ ಸೌಲಭ್ಯ ಇಲ್ಲ. ಇಷ್ಟೆಲ್ಲಾ ಸಮಸ್ಯೆಗಳು ಕಾಡುತ್ತಿದ್ದರೂ ಇಲ್ಲಿನ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಅಸಡ್ಡೆ ತೋರಿಸುತ್ತಿದ್ದಾರೆ ಎನ್ನುವುದು ಗ್ರಾಮಸ್ಥರ ಆಕ್ರೋಶ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry