ನಾಲಗೆ ಚುರ್ರೆನ್ನಿಸುವ ಆಹಾರ ಮೇಳ
ಗುಲ್ಬರ್ಗ: ಗುಲ್ಬರ್ಗ ಉತ್ಸವಕ್ಕೆ ಬರುವುದಾದರೆ ಉಪವಾಸ ಬನ್ನಿ. ಹೋಗುವಾಗ ಹಾಗೇ ಹೋಗುವುದಿಲ್ಲ. ನಿಮ್ಮ ಜಿಹ್ವಾ ಚಾಪಲ್ಯ ನೀಗಿಸುವ ಸರ್ವ ಬಗೆಯ ಭಕ್ಷ್ಯ ಭೋಜನಗಳೂ ಇಲ್ಲಿ ಲಭ್ಯ.
ಗುಲ್ಬರ್ಗ ನಗರದ ಉಪ್ಪಿನ್ ತೋಟದ ಅಂಗಳದಲ್ಲಿ ಹೈದರಾಬಾದ್ನ ‘ದೆಹಲಿವಾಲಾ’ ಹೋಟೆಲ್ನವರು ನಿಮ್ಮಷ್ಟೇ ಉದ್ದದ ನೂಡಲ್ಸ್ನ ಔತಣ ನೀಡಲು ಸಿದ್ಧರಾಗಿದ್ದಾರೆ. ಪಾವ್ಭಾಜಿ, ಪಾನಿಪುರಿ, ಫ್ರೈಡ್ ರೈಸ್ ಮತ್ತಿತರ ತಿಂಡಿಗಳೂ ಇಲ್ಲಿ ಲಭ್ಯ.
ಈ ಭಾಗದ ರುಚಿಕಟ್ಟಾದ ತಿಂಡಿಗಳಷ್ಟೇ ಅಲ್ಲ, ಎಲ್ಲ ಬಗೆಯ ರಸಸ್ವಾದನೆಗೆ ಅವಕಾಶ ನೀಡಿದೆ ಆಹಾರ ಮೇಳ. ಇಲ್ಲಿದೆ ಅಮೃತ್ ಸಿಂಗ್ ಅವರ ಚನಾ ಬಟೂರಾ, ಚಪಾತಿಯಗಲದ ಪೂರಿಯೊಂದಿಗೆ ಸ್ವಾದಿಷ್ಟ ಕಾಳಿನ ಪಲ್ಯ ಲಭ್ಯ. ಕುರುಕಲು ತಿನ್ನುವುದಾದರೆ ಕಾಂಧಾ ಭಜಿ, ಮಿರ್ಚಿ ಭಜಿಯೂ ನೀಡುತ್ತಾರೆ. ಕರಿದಿದ್ದು ತಿಂದ ನಂತರ ಬಿಸಿ ಚಹಾ ಕೂಡ ಸಿಗುತ್ತದೆ ಇಲ್ಲಿ.
ಇಡೀ ಆಹಾರ ಮೇಳದಲ್ಲಿ ಸಿಹಿ ನೀಡುವ ಒಂದೇ ಒಂದು ಮಳಿಗೆಯೆಂದರೆ ಶ್ರೀ ದುರ್ಗಾ ಸ್ತ್ರೀಶಕ್ತಿ ಸಂಘದವರದ್ದು. ಅವರು ಅಪ್ಪಟ ಖೋವಾದಲ್ಲಿ ತಯಾರಿಸಿದ ಜಾಮೂನು ಮಾರಾಟ ಮಾಡುತ್ತಿದ್ದಾರೆ. ಅದಲ್ಲದೆ ಉಳಿದ 9 ಬಗೆಯ ವಿವಿಧ ಚೂಡಾ ಹಾಗೂ ತಿಂಡಿಗಳನ್ನು ಮಾರಾಟಕ್ಕೆ ಇರಿಸಿದ್ದಾರೆ.
ಭವಾನಿ ಮಹಿಳಾ ಮಂಡಳವು ಶುಕ್ರವಾರ ರೊಟ್ಟಿ ಊಟ ಉಣ ಬಡಿಸಿದ್ದರೆ ಶನಿವಾರ ಚಪಾತಿ ಊಟವನ್ನು ತಯಾರಿಸಿದ್ದರು. ಕೇವಲ 35 ರೂಪಾಯಿಗಳಿಗೆ ಚಪಾತಿ, ಎರಡು ವಿಧದ ಪಲ್ಯ, ಅನ್ನ, ಸಾರು, ಶೇಂಗಾ ಚಟ್ನಿ ನೀಡುತ್ತಿದ್ದರು. ಬಂದವರಿಗೆ ಬಿಸಿ ಚಪಾತಿ ಮಾಡಿ, ಕರೆದು ನೀಡುವ ಆಪ್ತ ವಾತಾವರಣ ಇರಿಸಿಕೊಂಡಿದ್ದಾರೆ. ಈ ಮಂಡಳದ ಶ್ರೀದೇವಿಗೆ ಮನೆಯೂಟ ಬಡಿಸುವ ಆಸೆ ಇತ್ತಂತೆ. ಈ ವ್ಯಾಪಾರ ತೃಪ್ತಿ ನೀಡಿದೆ ಎನ್ನುತ್ತಾರೆ.
ಇವರಲ್ಲದೇ ಬಿಸಿ ದೋಸೆ ಹುಯ್ದು ಕೊಡಲು ಕಾಮತ್ ಕೆಫೆಯವರೂ ಇದ್ದಾರೆ. ಗುಲ್ಬರ್ಗದವರೇ ಆದ ಮೊಹ್ಮದ್ ಅಲಿ ಅವರು ವಡಾ ಪಾವ್, ಪಾವ್ ಭಾಜಿ ಹಾಗೂ ತಾಜಾ ಹಣ್ಣಿನ ರಸ ನೀಡುತ್ತಿದ್ದಾರೆ.
ಒಂದೇ ಸಮಾಧಾನವೆಂದರೆ ಎಲ್ಲೆಡೆಯೂ ಕೈಗೆಟಕುವ ಬೆಲೆಯಲ್ಲಿ ಊಟ, ತಿಂಡಿಗಳು ದೊರೆಯುತ್ತಿವೆ. ನೀರಿಗೆ ದಾಹ ತಣಿಯದಿದ್ದಲ್ಲಿ ಎಳನೀರು ಸಿಗುತ್ತದೆ. ಮಾಂಸ ಪ್ರಿಯರಿಗೂ ಚಿಕನ್ ತಿಕ್ಕಾ, ಚಿಕನ್ ಪಲಾವ್, ಚಿಕ್ಕನ್ ರೋಲ್ಸ್ ಮುಂತಾದ ತಿಂಡಿಗಳೂ ಇಲ್ಲಿವೆ.
ಎಲ್ಲ ವಯೋಮಾನದವರಿಗೆ ಹಸಿವು ಹಿಂಗಿಸಲು ಸಮರ್ಪಕ ಬಾಣಸಿಗರು, ರುಚಿಕಟ್ಟಾದ ಊಟವಂತೂ ಲಭ್ಯವಿದೆ. ಉಂಡಿದ್ದು ಜಾಸ್ತಿ ಎಂದೆನಿಸಿದರೆ ಅಲ್ಲಿಂದ ಮುಖ್ಯ ವೇದಿಕೆಯವರೆಗೂ ಒಂದೆರಡು ಸುತ್ತು ನಡೆದರಾಯಿತು. ವೇದಿಕೆಯಿಂದ ದೂರವಾದರೂ ಹಸಿವಿಗೆ ಅದು ದೂರವೆನಿಸದು.ಬನ್ನಿ ಆಸ್ವಾದಿಸಿ ಈ ಊಟವನ್ನು. ಆನಂದಿಸಿ ಸಾಂಸ್ಕೃತಿಕ ರಸದೌತಣವನ್ನು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.