ನಾಲೆಗೆ ನೀರು: ಪರ-ವಿರೋಧ ಪ್ರತಿಭಟನೆ
ಪಾಂಡವಪುರ: ಚಿಕ್ಕದೇವರಾಯ ನಾಲೆಗೆ ನೀರು ಹರಿಸಬೇಕೆಂದು ಬನ್ನೂರು ಗ್ರಾಮಸ್ಥರು ಒತ್ತಾಯಿಸಿದರೆ ನಾಲೆಗೆ ಹೆಚ್ಚು ನೀರು ಹರಿಸಬಾರದೆಂದು ಪಟ್ಟಸೋಮನಹಳ್ಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಜರುಗಿತು.
ಪಟ್ಟಣದ ಕಾವೇರಿ ನೀರಾವರಿ ನಿಗಮದ ನಂ.3, ಕಚೇರಿ ಮುಂಭಾಗ ಜಮಾವಣೆಗೊಂಡ ಎರಡು ಗ್ರಾಮಸ್ಥರು ನೀರು ಹರಿಸುವ ಬಗ್ಗೆ ಪರ ವಿರೋಧ ವ್ಯಕ್ತಪಡಿಸಿದರು. ಇದರಿಂದಾಗಿ ಸಮಸ್ಯೆ ಬಗೆಹರಿಸಲು ಎಂಜಿನಿಯರುಗಳಿಗೆ ಕಷ್ಟ ಪರಿಸ್ಥಿತಿ ಎದುರಾಯಿತು.
ನಾಲೆಗೆ ಹೆಚ್ಚಿನ ನೀರು ಹರಿಸದೆ ಇರುವುದರಿಂದ ಸುಮಾರು 2 ಸಾವಿರ ಎಕರೆ ಬೆಳೆ ನಷ್ಟವಾಗುತ್ತಿದೆ. ಕಾಲುವೆ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಿ ಕಾಲುವೆಯಲ್ಲಿ ತುಂಬಿಕೊಂಡಿರುವ ಮಣ್ಣಿನ ಹೂಳನ್ನು ತೆಗೆಸಿದರೆ ಹೆಚ್ಚಿನ ನೀರನ್ನು ಹರಿಯಬಿಡಲು ಸಾಧ್ಯವಾಗುತ್ತದೆ. ನಾಲೆಯ ಕೊನೆಯ ಭಾಗದಲ್ಲಿರುವ ಬನ್ನೂರು ಗ್ರಾಮದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಎಂಜಿನಿಯರ್ಗಳು ಕ್ರಮ ವಹಿಸಬೇಕೆಂದು ಬನ್ನೂರು ಗ್ರಾಮದ ರೈತರು ಒತ್ತಾಯಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪಟ್ಟಸೋಮನಹಳ್ಳಿ ಗ್ರಾಮಸ್ಥರು ನಾಲೆಯನ್ನು ದುರಸ್ತಿಗೊಳಿಸಿ, ತುಂಬಿಕೊಂಡಿರುವ ಹೂಳನ್ನು ತೆಗೆಸಿದ ನಂತರ ನೀರನ್ನು ಹರಿಯಬಿಡಿ, ಹೂಳನ್ನು ತೆಗೆಸದೆ ನಾಲೆಗೆ ನೀರು ಹರಿಸಿದರೆ ಹರಿದು ಬರುವ ಹೆಚ್ಚಿನ ನೀರಿನಿಂದಾಗಿ ಬೆಳೆಗಳು ನಾಶವಾಗಲಿವೆ ಎಂದು ವಾದಿಸಿದ ರೈತರು ಇದರಿಂದಾಗಿ ಸುಮಾರು 150 ಎಕರೆ ಜಮೀನಿನ ಬೆಳೆ ನಾಶವಾಗಲಿದೆ. ಹಾಗಾಗಿ ತಮಗೆ ಅನ್ಯಾಯವಾಗದ ರೀತಿ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.
ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಚಿಕ್ಕದೇವರಾಯ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೂಡ ರೈತರು ಆಗ್ರಹಿಸಿದರು.
ಸಹಾಯಕ ಎಂಜಿನಿಯರ್ ಗೋವಿಂದರಾಜು ಸಮಸ್ಯೆಯನ್ನು ಬಗೆಹರಿಸಲು ಕಾಲಾವಕಾಶ ಕೇಳಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಮುಖಂಡರಾದ ಪರಮೇಶ್, ಕುಮಾರ್, ಧರಣೇಶ್, ಗಜೇಂದ್ರ, ರಾಮು, ವಿಜೇಂದ್ರಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.