ನಾಲೆಯಲ್ಲಿ ನೀರಿದ್ದಾಗ ಹಿರೇಕೆರೆ ತುಂಬಲಿಲ್ಲ!

7

ನಾಲೆಯಲ್ಲಿ ನೀರಿದ್ದಾಗ ಹಿರೇಕೆರೆ ತುಂಬಲಿಲ್ಲ!

Published:
Updated:

ಸಂತೇಮರಹಳ್ಳಿ: ರಾಜಕೀಯ ದೊಂಬರಾಟಕ್ಕೆ ಅಭಿವೃದ್ಧಿ ಯೋಜನೆಗಳು ಹೇಗೆ ದಿಕ್ಕುತಪ್ಪುತ್ತವೆ ಎಂಬುದಕ್ಕೆ ಸಮೀಪದ ಹೊಂಗನೂರು-ಹಿರೇಕೆರೆ ಏತ ನೀರಾವರಿ ಯೋಜನೆ ಸಾಕ್ಷಿಯಾಗಿದೆ.2.40 ಕೋಟಿ ರೂ ವೆಚ್ಚದ ಈ ಯೋಜನೆ ನಿಗದಿತ ವೇಳೆಗೆ ಪೂರ್ಣಗೊಂಡಿದ್ದರೆ ಬೇಸಿಗೆಯಲ್ಲಿ ರೈತರು ಉತ್ತಮ ಫಸಲು ತೆಗೆಯಬಹುದಿತ್ತು. ಜನಪ್ರತಿನಿಧಿಗಳು ಹಾಗೂ ಅಧಿಕಾರಶಾಹಿಯ ಬೇಜವಾಬ್ದಾರಿಯಿಂದ ಹಿರೇಕೆರೆಗೆ ನೀರು ತುಂಬಿಸುವ ಕಾರ್ಯ ನೆನೆಗುದಿಗೆ ಬಿದ್ದಿದೆ.ಕಬಿನಿ ಬಲದಂಡೆ ನಾಲೆಯಲ್ಲಿ ನೀರು ಹರಿಯುವಾಗಲೇ ಕೆರೆಗೆ ನೀರು ತುಂಬಿಸಬೇಕೆಂದು ಈ ಭಾಗದ ರೈತರು ಹೋರಾಟಕ್ಕೂ ಇಳಿದಿದ್ದರು. ಪ್ರಾಯೋಗಿಕವಾಗಿ ಪೈಪ್ ಲೈನ್ ಮೂಲಕ ಕೆರೆಗೆ ನೀರು ಸಹ ಬಿಡಲಾಗಿತ್ತು. ಪಂಪ್‌ಹೌಸ್‌ನಲ್ಲಿ ಕಾಣಿಸಿಕೊಂಡ ಸಣ್ಣಪುಟ್ಟ ತಾಂತ್ರಿಕ ದೋಷ ಸರಿಪಡಿಸಿ ಶೀಘ್ರದಲ್ಲೇ ನೀರು ಪೂರೈಕೆಗೆ ಅನುವು ಮಾಡಿಕೊಡುವುದಾಗಿ ಸೆಸ್ಕ್ ವಿಭಾಗದಿಂದ ಭರವಸೆಯೂ ಸಿಕ್ಕಿತ್ತು. ಆದರೆ, ಈಗ ಎಲ್ಲವೂ ತದ್ವಿರುದ್ಧ ಸ್ಥಿತಿಯಾಗಿದೆ.ಪ್ರಸ್ತುತ ನಾಲೆಯಲ್ಲಿ ನೀರು ಸ್ಥಗಿತಗೊಂಡಿದೆ. ಪ್ರಸಕ್ತ ವರ್ಷದಿಂದಲೇ ಬೆಳೆ ತೆಗೆಯುತ್ತವೆಂದು ಆಸೆಗಣ್ಣಿನಿಂದ  ನೋಡುತ್ತಿದ್ದ ರೈತರಿಗೆ ಹಿರೇಕೆರೆಯಲ್ಲಿ ಬೆಳೆದಿರುವ ಕಳೆ ಮಾತ್ರ ಕಾಣುತ್ತಿದೆಯೇ ಹೊರತು ನಾಲೆಯ ನೀರು ಕಾಣಿಸುತ್ತಿಲ್ಲ. ಉದ್ಘಾಟನೆಯ ದಿನಾಂಕ ನಿಗದಿಯಲ್ಲಿ ಸಮಯ ವ್ಯರ್ಥ ಮಾಡಿದ ಪರಿಣಾಮ ರೈತರು ಸಂಕಷ್ಟ ಅನುಭವಿಸುವಂತಾಗಿದೆ.ತಾಂತ್ರಿಕ ದೋಷ ಸರಿಪಡಿಸಿ ಕೆರೆಗೆ ನೀರು ತುಂಬಿಸುವಲ್ಲಿ ಕ್ಷೇತ್ರದ ಶಾಸಕರು ಹಿಂದೇಟು ಹಾಕಿದರು. ರಾಜಕೀಯ ಮೇಲಾಟಕ್ಕೆ ಇಳಿದ ಪರಿಣಾಮ ಉದ್ಘಾಟನೆಯೂ ಮುಂದೆ ಹೋಯಿತು. ತಾಂತ್ರಿಕ ದೋಷವನ್ನೂ  ಸರಿಪಡಿಸಲಿಲ್ಲ. ಆ ವೇಳೆಗೆ ಕ್ಷೇತ್ರ ಮರೆತ್ತಿದ್ದ ಶಾಸಕರು ಅನರ್ಹಗೊಂಡಿದ್ದರು. ಈಗ ನಾವು ತೊಂದರೆ ಅನುಭವಿಸುವಂತಾಗಿದೆ ಎನ್ನುವುದು ರೈತರ ಅಳಲು.ಸಿದ್ದರಾಮಯ್ಯ ಹಣಕಾಸು ಮಂತ್ರಿಯಾಗಿದ್ದ ವೇಳೆ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಅದ್ದೂರಿಯಾಗಿ ಕಾಮಗಾರಿ ಆರಂಭ ಕಂಡಿತು. ಈ ಭಾಗದ ಹೊಂಗನೂರು, ಬೆಟ್ಟಹಳ್ಳಿ, ಚಾಟೀಪುರ, ಮಸಣಾಪುರ, ಗಂಗವಾಡಿ ಹಾಗೂ ಕಳ್ಳೀಪುರದ ಗ್ರಾಮಸ್ಥರ ಮೊಗದಲ್ಲಿ ಮಂದಹಾಸ ಮೂಡಿತ್ತು. 2 ಸಾವಿರ ಎಕರೆಗೆ ಯೋಜನೆಯಡಿ ನೀರು ಣಿಸುವ ಗುರಿ ಹೊಂದಲಾಗಿತ್ತು. ಖಾರೀಫ ಋತುಮಾನ ದಲ್ಲಿ ಅರೆ ನೀರಾವರಿ ಬೆಳೆ ತೆಗೆಯುವ ರೈತರ ಆಸೆ ಈಗ ಕಮರಿಹೋಗಿದೆ.ಜತೆಗೆ, ಕೆರೆಯಲ್ಲಿ ಶೇ. 40ರಷ್ಟು ಹೂಳು ತುಂಬಿದೆ. ಹೂಳು ತೆಗೆದು ನೀರು ತುಂಬಿಸಬೇಕೆಂಬುದು ರೈತರ ಒತ್ತಾಯ. ಆದರೆ, ಪ್ರಸ್ತುತ ನೀರು ಕೂಡ ತುಂಬಿಸಿಲ್ಲ. ಸದ್ಯಕ್ಕೆ ಮಳೆ ನೀರು ಮಾತ್ರ ಕೆರೆಯಲ್ಲಿ ನಿಂತಿದೆ. ಈ ಕೆರೆ ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿದೆ. ಆದರೆ, ಇತ್ತೀಚೆಗೆ ನೀರಿನ ಮೂಲಗಳಿಗೆ ಮೇಲ್ಭಾಗದಲ್ಲಿ ಚೆಕ್‌ಡ್ಯಾಂ ಇತ್ಯಾದಿ ನಿರ್ಮಾಣ ಮಾಡಿರುವ ಪರಿಣಾಮ ನೀರು ಬರುತ್ತಿಲ್ಲ. ಇದರಿಂದ ಅಚ್ಚುಕಟ್ಟುದಾರರು ತೊಂದರೆ ಅನುಭವಿಸಿ ದ್ದರು. ಈಗ ನಾಲೆಯ ನೀರು ಕೂಡ ಪೂರೈಕೆಯಾಗದೆ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ.‘ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಬಾರಿ ಕಬಿನಿ ನಾಲೆಯಲ್ಲಿ ನೀರು ಹರಿಯುವಾಗಲೇ ಹಿರೇಕೆರೆಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ರಾಜಕಾರಣಿಗಳ ಸ್ವಾರ್ಥಕ್ಕೆ ರೈತರು ತೊಂದರೆ ಪಡುವಂತಾಗಿದೆ. ಕಬಿನಿ ಅಣೆಕಟ್ಟಿನಿಂದ ಕೆರೆಗೆ ಸಾಕಾಗುವಷ್ಟು ಪುನಃ ನಾಲೆಗೆ ನೀರು ಬಿಡಿಸಿ ತುಂಬಿಸಲು ಸರ್ಕಾರ ಮುಂದಾಗಬೇಕು’ ಎಂಬುದು ಹೊಂಗನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನತ್‌ಬೀ ಅವರ ಒತ್ತಾಯ.ದಿಕ್ಕು ತಪ್ಪಿಸುವ ಉತ್ತರ

ಚಾಮರಾಜನಗರ: ‘ಹೊಂಗನೂರು-ಹಿರೇಕೆರೆ ಏತ ನೀರಾವರಿ ಯೋಜನೆಗೆ 2010ರ ಅ. 26ರಂದು ಸೆಸ್ಕ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅಂದಿನಿಂದಲೇ ಕೆರೆಗೆ ನೀರು ತುಂಬಿಸುವ ಕಾರ್ಯ ಪ್ರಾರಂಭಿಸಲಾಗಿದೆ...’ -ಇದು ಯೋಜನೆಯ ಬಗ್ಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೀಡಿರುವ ಉತ್ತರ.ಈಚೆಗೆ ಸಂಸದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನೀಡಿದ ಅನುಪಾಲನಾ ವರದಿಯಲ್ಲಿ ಅಧಿಕಾರಿಗಳು ನೀಡಿರುವ ಉತ್ತರ ರೈತರನ್ನು ಅಚ್ಚರಿಗೊಳಿಸಿದೆ.ಅಕ್ಟೋಬರ್‌ನಲ್ಲಿ ನಡೆದ ಸಭೆಯಲ್ಲಿ ಸಂಸದ ಧ್ರುವನಾರಾಯಣ ಏತ ನೀರಾವರಿ ಯೋಜನೆಯ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲು ಸೂಚಿಸಿದ್ದರು. ನಂತರ, ಈಚೆಗೆ ನಡೆದ ಸಭೆಯಲ್ಲಿ ಅಧಿಕಾರಿಗಳು ನೀಡಿರುವ ಉತ್ತರ ಸಭೆಯಲ್ಲಿ ಹಾಜರಿದ್ದ ಸಂಸದರು ಮತ್ತು ಶಾಸಕರನ್ನು ದಿಕ್ಕುತಪ್ಪಿಸುವಂತಿದೆ.ನಾಲೆಯಲ್ಲಿ ನೀರು ಪೂರೈಕೆ ಸ್ಥಗಿತಗೊಂಡಿದೆ. ನೀರು ಹರಿಯುವಾಗ ಸಂಸದರು, ಶಾಸಕರು ಯೋಜನೆಯ ಉದ್ಘಾಟನೆಗೆ ಮುಂದಾಗಲಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗ ತೊಂದರೆ ಎದುರಾಗಿದೆ. ಅನುಪಾಲನಾ ವರದಿಯಲ್ಲಿ ನೀರು ಬಿಡಲಾಗುತ್ತಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ಜನಪ್ರತಿನಿಧಿಗಳು ಅಭಿವೃದ್ಧಿ ಕಾಮಗಾರಿ ಪರಿಶೀಲಿಸು ವುದಿಲ್ಲ. ಕಾಟಾಚಾರದ ಸಭೆ ನಡೆಸಿ ಕೈತೊಳೆದುಕೊಳ್ಳುವ ಪರಿಣಾಮ ರೈತರು ತೊಂದರೆ ಅನುಭವಿಸುವಂತಾಗಿದೆ ಎನ್ನುವುದು ರೈತ ಚಂದ್ರಪ್ಪ ಅವರ ದೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry