ನಾಲೆ ಕಾಮಗಾರಿ ಸ್ಥಗಿತ: ರೈತರಿಗೆ ತೊಂದರೆ

7

ನಾಲೆ ಕಾಮಗಾರಿ ಸ್ಥಗಿತ: ರೈತರಿಗೆ ತೊಂದರೆ

Published:
Updated:
ನಾಲೆ ಕಾಮಗಾರಿ ಸ್ಥಗಿತ: ರೈತರಿಗೆ ತೊಂದರೆ

ಹಳೇಬೀಡು: ಇತಿಹಾಸ ಪ್ರಸಿದ್ಧ ದ್ವಾರಸಮುದ್ರ ಕರೆಯ ಕೋಡಿಹಳ್ಳದ ಪಿಕಪ್‌ನಿಂದ ಕರಿಕಟ್ಟೆಹಳ್ಳಿ ಕೆರೆಗೆ ನೀರುಹರಿಯುವ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆ ನಿರ್ಮಿಸುತ್ತಿರುವ ನಾಲೆ ಕಾಮಗಾರಿ ಸ್ಥಗಿತವಾಗಿರುವುದರಿಂದ ಕುಂಟಮ್ಮ ಸೇತುವೆ ಸಮೀಪ ನಾಲೆ ಹಾಸುಪಾಸಿನ ರೈತರು ಪಡಬಾರದ ಕಷ್ಟ ಅನುಭವಿಸುವಂತಾಗಿದೆ. ಗುತ್ತಿಗೆದಾರರ ತಟಸ್ಥ ನೀತಿಯಿಂದ ಮಹತ್ವಕಾಂಕ್ಷೆಯ ಯೋಜನೆ ದಿಕ್ಕು ತಪ್ಪುತ್ತಿದೆ.ಪಿಕಪ್‌ನಿಂದ ಹಳ್ಳದಲ್ಲಿ ಹರಿಯುತ್ತಿದ್ದ ನೀರು ಬಳಕೆ ಮಾಡಿಕೊಂಡು ನೂರಾರು ರೈತರು ಕಬ್ಬು, ಬಾಳೆ ಮೊದಲಾದ ಬೆಳೆ ಮಾಡುತ್ತಿದ್ದರು. ನಾಲೆ ಕಾಮಗಾರಿ ಆರಂಭವಾದ ನಂತರ ಹಳ್ಳದ ನೀರನ್ನು ಬೇರೆ ಕಡೆಗೆ ಹರಿಸಲಾಗುತ್ತಿದೆ.ಇಂದಲ್ಲ ನಾಳೆ ಕಾಮಗಾರಿ ಪೂರ್ಣವಾಗುತ್ತದೆ ಎಂದು ರೈತರು ಮಾಡಿದ ವಿವಿಧ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಹಳ್ಳ ನೀರಿಲ್ಲದೆ ಒಣಗಿರುವುದಲ್ಲದೆ, ಇತ್ತ ಮಳೆಯೂ ಬಾರದೆ ಇರುವುದರಿಂದ ಬಿಸಿಲಿನ ಬೇಗೆಯಿಂದ ಬೆಳೆ ಒಣಗಿ ತರಗಿನಂತಾಗಿದೆ.ಕಾಂಕ್ರಿಟ್ ನಾಲೆ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ನೂರಾರು ಎಕರೆ ಬೆಳೆಗೆ ಹಾನಿಯಾಗಿದೆ. ಹತ್ತಾರು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡದೆ ಭೂಮಿ ಖಾಲಿ ಬಿದ್ದಿದೆ. ವರ್ಷ ಕಳೆದರೂ ಅರ್ಧದಷ್ಟು ಕಾಮಗಾರಿ ಮುಗಿಯದೆ ಇರುವುದರಿಂದ ರೈತ ವರ್ಗ ಅಸಮಾಧಾನಗೊಂಡಿದೆ.ಕಳೆದ ವರ್ಷ ನಿರ್ಮಿಸಿದ ನಾಲೆಯಲ್ಲಿ ಗಿಡಗಂಟಿ ಬೆಳೆಯುತ್ತಿವೆ. ನಾಲೆಯಲ್ಲಿ ಕಸ ಕಡ್ಡಿ ತುಂಬುತ್ತಿದ್ದು, ನೂತನ ನಾಲೆ ಬಹುವರ್ಷದ ಕಸದ ತೊಟ್ಟಿಯ ಸ್ವರೂಪ ಪಡೆಯುತ್ತಿದೆ. ಅರ್ಧ ಕಾಮಗಾರಿ ಆಗಿರುವ ಸ್ಥಳದಲ್ಲಿ ನಾಲೆ ಪಕ್ಕ ಮಣ್ಣಿನ ರಾಶಿಗಳಿದ್ದು, ರೈತರ ಓಡಾಟಕ್ಕೆ ಕಿರಿಕಿರಿಯಾಗಿದೆ.ಕಟ್ಟಡ ನಿರ್ಮಾಣಕ್ಕಾಗಿ ಹಳ್ಳದಲ್ಲಿ ಆಳ ಹಾಗೂ ಅಗಲವಾಗಿ ಮಣ್ಣು ತೆಗೆದಿರುವುದರಿಂದ ರೈತರು ಸರ್ಕಸ್ ಮಾಡಿಕೊಂಡು ದಾಟುವಂತಾಗಿದೆ. ಎತ್ತು ಗಾಡಿ ಓಡಾಡಲು ಅವಕಾಶವೇ ಇಲ್ಲದಂತಾಗಿದೆ. ಕೃಷಿ ಉತ್ಪನ್ನ ಸಾಗಾಟ ಮಾಡುವುದು ರೈತರಿಗೆ ಒಂದು ದೊಡ್ಡ ಕೆಲಸವಾಗಿದೆ.`ಗುತ್ತಿಗೆದಾರರು ಸಕಾಲಕ್ಕೆ ಕೆಲಸ ಮುಗಿಸದೆ ಇರುವುದರಿಂದ ರೈತರಿಗೆ ನಷ್ಟವಾಗಿದೆ. ಸಣ್ಣ ನೀರಾವರಿ ಇಲಾಖೆ ನಷ್ಟ ಪರಿಹಾರ ನೀಡಬೇಕು. ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಇದ್ದರೆ ಅನಿವಾರ್ಯವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ~ ಎನ್ನುತ್ಥಾರೆ ಸ್ಥಳೀಯ ರೈತ ಎಚ್.ಜಿ.ಮಹೇಶ್ವರಪ್ಪ ಶಂಬುಗನಹಳ್ಳಿ.`ಆರ್‌ಆರ್‌ಆರ್ ಯೋಜನೆ ಅಡಿಯಲ್ಲಿ ಇಲಾಖೆ ರೈತರಿಗೆ ಉಪಯುಕ್ತವಾಗುವ ಕಾಮಗಾರಿ ಕೈಗೊಂಡಿದೆ. ರೂ.95 ಲಕ್ಷ ಅಂದಾಜು ಮಾಡಲಾಗಿದ್ದು, ಶೇ.10 ರಷ್ಟು ಹಣ ಉದ್ಯೋಗ ಖಾತರಿ ಯೋಜನೆಗೆ ಮೀಸಲಾಗಿದೆ.ಕಾಮಗಾರಿ ಆರಂಭಿಸಿ ಬೇಗ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನೊಟೀಸ್ ಜಾರಿ ಮಾಡಲಾಗಿದೆ. ಉನ್ನತ ಅಧಿಕಾರಿಗಳಿಗೂ ವಿಚಾರ ಮುಟ್ಟಿಸಲಾಗಿದ್ದು, ಶೀಘ್ರದಲ್ಲಿಯೇ ಗುತ್ತಿಗೆದಾರರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು~ ಎನ್ನುತ್ತಾರೆ ಸಣ್ಣನೀರಾವರಿ ಇಲಾಖೆ ಎಂಜಿನಿಯರ್ ಶ್ರೀನಿವಾಸ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry