ಶನಿವಾರ, ಮಾರ್ಚ್ 6, 2021
21 °C

ನಾಲ್ಕು ಕಂಬಗಳ ಟೀನೇಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಲ್ಕು ಕಂಬಗಳ ಟೀನೇಜ್

ನಿರ್ದೇಶಕ ಶ್ರೀಕಾಂತ್ ಅವರ ಮಾತುಗಳಲ್ಲಿ ಪುಳಕವಿತ್ತು. ಆಗಷ್ಟೇ `ಟೀನೇಜ್~ ಚಿತ್ರದ ಗೀತೆಯೊಂದರ ಚಿತ್ರೀಕರಣ ಮುಗಿಸಿಕೊಂಡು ಮಾಧ್ಯಮಮಿತ್ರರ ಎದುರಿಗೆ ಕೂತಿದ್ದ ಅವರ ಮಾತುಗಳಲ್ಲೂ ಟೀನೇಜ್‌ನ ಹುಮ್ಮಸ್ಸಿತ್ತು.ಶ್ರೀಕಾಂತ್ ಮಾತುಗಳ ಕೇಂದ್ರದಲ್ಲಿ ಇದ್ದುದು ಚಿತ್ರದ ನಾಯಕಿ ಪ್ರಿಯಾ ಭರತ್ ಖನ್ನಾ. ಭಾರತ ಮೂಲದ ಈ ಚೆಲುವೆ ನೆಲೆಸಿರುವುದು ಆಸ್ಟ್ರೇಲಿಯಾದಲ್ಲಿ. ಅಮ್ಮನ ಉಸ್ತುವಾರಿಯಲ್ಲಿ ಸಿನಿಮಾದಲ್ಲಿ ಅದೃಷ್ಟ ಅರಸುತ್ತಿರುವ ಪ್ರಿಯಾ, ಟೀನೇಜ್ ಮೂಲಕ ಕನ್ನಡಕ್ಕೆ ಬರುತ್ತಿದ್ದಾಳೆ.ಪ್ರಿಯಾಳ ನಟನೆ ಮತ್ತು ನಡವಳಿಕೆ ಎರಡೂ ಶ್ರೀಕಾಂತ್ ಅವರನ್ನು ಪ್ರಭಾವಿಸಿದಂತಿತ್ತು. ದನವೋ, ನಾಯಿಯೋ ಬೀದಿಯಲ್ಲಿ ಕಾಣಿಸಿದಾಗ ಆಕೆ ಅಚ್ಚರಿಯಿಂದ ಕಣ್ಣರಳಿಸುತ್ತಿದ್ದಳಂತೆ. ಪ್ರಾಣಿಗಳನ್ನು ಬೀದಿಗಳಲ್ಲಿ ಪ್ರಿಯಾ ನೋಡುತ್ತಿರುವುದು ಇದೇ ಮೊದಲಂತೆ.ಅಂದಹಾಗೆ, ಪ್ರಿಯಾ ಟೀನೇಜ್‌ನಲ್ಲಿ ಪೂರ್ಣ ಪ್ರಮಾಣದ ನಾಯಕಿಯೇನಲ್ಲ. ಆಕೆಯ ಜೊತೆಗೆ ತನ್ವಿ, ಅಪೂರ್ವ ಮತ್ತು ಜಾರ್ಜಿಯಾ ಎನ್ನುವ ಚೆಲುವೆಯರೂ ಚಿತ್ರದಲ್ಲಿದ್ದಾರೆ.

 

ಇವರಲ್ಲಿ ಜಾರ್ಜಿಯಾ ಕೂಡ ವಿದೇಶದ ಹೆಣ್ಣುಮಗಳು. `ಟೀನೇಜ್~ ಚಿತ್ರಕ್ಕೆ ನಾಲ್ಕು ಕಂಬಗಳಂತಿರುವ ನಾಲ್ವರು ನಾಯಕಿಯರಿಗೆ ಒಬ್ಬನೇ ಕೃಷ್ಣ - ಕಿಶನ್. ಯೌವನದ ಹೊಳೆಯಲ್ಲಿ ಈಜಾಡುವ ತುಂಟ ಕೃಷ್ಣ ದಡ ಸೇರುತ್ತಾನಾ ಎನ್ನುವುದನ್ನು ಚಿತ್ರದಲ್ಲೇ ನೋಡಬೇಕಂತೆ.ಈ ವಯಸ್ಸೇ ಒಂಥರಾ ಎನ್ನುವುದು `ಟೀನೇಜ್~ನ ಅಡಿಬರಹ. ಒಂಥರದ ವಯಸ್ಸಿನ ತವಕತಲ್ಲಣಗಳು ಮಾತ್ರವಲ್ಲ, ಸೋದರ ಸೋದರಿಯ ಸಂಬಂಧದ ಕಥೆಯೂ ಚಿತ್ರದಲ್ಲಿದೆಯಂತೆ. ತಂಗಿಯಾಗಿ ಸೃಜನಿ ಎನ್ನುವ ಪುಟಾಣೆ ನಟಿಸಿದ್ದಾಳೆ.ಚಿತ್ರದ ನಾಯಕ ಮತ್ತು ತಮ್ಮ ಪುತ್ರ ಕಿಶನ್ ಬಗ್ಗೆ ಶ್ರೀಕಾಂತ್ ಅವರಿಗೆ ಇನ್ನಿಲ್ಲದ ಮೆಚ್ಚುಗೆ. `ನಟನೆಯಲ್ಲೇನೋ ಮಗನನ್ನು ನಿಭಾಯಿಸಬಹುದು. ಸಂಕಲನಕ್ಕೆ ಕೂತರೆ ಮಗನ ತಿಳಿವಳಿಕೆ ದಂಗು ಬಡಿಸುತ್ತದೆ~ ಎನ್ನುವ ಅವರ ಮಾತು, ತನ್ನನ್ನು ಮೀರಿ ಬೆಳೆದ ಮಗನ ಕುರಿತು ತಂದೆಯೊಬ್ಬನ ಬೆರಗಿನ ನುಡಿಯಂತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.