ಮಂಗಳವಾರ, ಮೇ 11, 2021
25 °C

ನಾಲ್ಕು ಕೋಟಿ ಯೂನಿಟ್ ರಕ್ತಕ್ಕೆ ಬೇಡಿಕೆ: ಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಮೌಢ್ಯತೆ ತುಂಬಿರುವ ಸಮಾಜದಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುವ ದಾನಿಗಳ ಸಂಖ್ಯೆ ಕಡಿಮೆ ಇರುವುದರಿಂದ ರಕ್ತದಾನ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್‌ಕುಮಾರ ಅಭಿಪ್ರಾಯಪಟ್ಟರು.ನಗರದ ವಿದ್ಯಾದಾನ ಸಮಿತಿಯ ಎಂ.ಬಿ. ಹುಯಿಲಗೋಳ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯಲ್ಲಿ ಮಾತನಾಡಿದರು.ಅಪಘಾತ, ಹೆರಿಗೆ ತೊಂದರೆ, ತೆರೆದ ಹೃದಯದ ಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಶಸ್ತ್ರ ಚಿಕಿತ್ಸೆ, ರಕ್ತ ಹೀನತೆ, ರಕ್ತದ ಕಾಯಿಲೆಗಳಿದ್ದಾಗ ರಕ್ತದ ಅವಶ್ಯಕತೆ ಇರುವುದರಿಂದ ರಕ್ತದಾನ ಮಾಡಬೇಕಾಗುತ್ತದೆ. ದೇಶದಲ್ಲಿ 4 ಕೋಟಿ ರಕ್ತದ ಯೂನಿಟ್ ಅವಶ್ಯಕತೆಯಿದ್ದು,  ಕೇವಲ 40 ಲಕ್ಷ ಮಾತ್ರ ಸಂಗ್ರವಿದೆ. ತುರ್ತು ಸಂದರ್ಭದಲ್ಲಿ  ರಕ್ತದಾನ ಮುಖ್ಯವಾಗಿದೆ. ನಗರದಲ್ಲಿ ಐಎಮ್‌ಐ ಪೂರ್ಣ ಪ್ರಮಾಣದ ಬ್ಲಡ್ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದ್ದು ಸಂತಸ ತಂದಿದೆ ಎಂದು ತಿಳಿಸಿದರು.ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ  ರಮೇಶ ಮುಂದಿನಮನಿ,  ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯ ರಕ್ತದಾನವನ್ನು ಸ್ವಯಂ ಪ್ರೇರಣೆಯಿಂದ ಮಾಡಬೇಕು.ಬಲಿಷ್ಠ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ವ್ಯಕ್ತಿಗಳ ಅವಶ್ಯವಿದೆ.  ರಕ್ತದಾನವನ್ನು ಗಂಡು- ಹೆಣ್ಣು ಎಂಬ ಭೇದಭಾವ ಇಲ್ಲದೇ 18 ರಿಂದ 60 ವರ್ಷದೊಳಗಿನ ಎಲ್ಲ ಆರೋಗ್ಯವಂತರು ಮಾಡಬಹುದು. ರಕ್ತದಾನ ಮಾಡುವುದರಿಂದ ಅಶಕ್ತತೆ ಬರುತ್ತದೆ ಎಂಬ  ತಪ್ಪು  ನಂಬಿಕೆ ಹೋಗಲಾಡಿಸಬೇಕು ಎಂದರು.ರಕ್ತದಾನ ಮಾಡುವುದರಿಂದ ಶೇ 80 ರಷ್ಟು ಹೃದಯಾಘಾತದ ಸಂಭವ ಕಡಿಮೆಯಾಗುವುದು. ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಗೆ ಉತ್ತೇಜನವಾಗುವುದು.  ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಚುರುಕುತನ, ನೆನಪಿನ ಶಕ್ತಿ ಹೆಚ್ಚಾಗುವುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ  ಮಾತನಾಡಿ, ಅನ್ನದಾನ, ವಿದ್ಯಾದಾನ, ಭೂದಾನಕ್ಕಿಂತ ಶ್ರೇಷ್ಠವಾದದ್ದು ರಕ್ತದಾನ. ರೋಗಿಗಳ ಸೇವೆಯೇ ದೇವರ ಸೇವೆ. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಜನರನ್ನು ಪ್ರೇರೇಪಿಸಬೇಕು ಎಂದು ನುಡಿದರು.   ನಗರಸಭಾ ಸದಸ್ಯ ಶ್ರೀನಿವಾಸ ಹುಯಿಲಗೋಳ,  ವಿಡಿಎಸ್‌ಟಿ ಬಾಲಕಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಸಿ. ಹೆದ್ದೂರಿ,  ಪ್ರಾಚಾರ್ಯ ಟಿ.ವಿ. ಮಾಗಳದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಚೆನ್ನಶೆಟ್ಟಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಆರ್.ಎನ್. ಪಾಟೀಲ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಸ್.ಗೌಡರ,  ಡಾ. ಸೋಲೋಮನ್,  ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಅರುಂಧತಿ,  ಆರೋಗ್ಯ ಇಲಾಖೆ  ಸಿಬ್ಬಂದಿ, ವಿವಿಧ  ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.ಇದೇ ಸಂದರ್ಭದಲ್ಲಿ ಇಪ್ಟಾ ಕಲಾ ತಂಡದವರಿಂದ  ಬೀದಿನಾಟಕ ಪ್ರದರ್ಶನ ಹಾಗೂ ರಕ್ತದಾನ ಮಹತ್ವದ ಕುರಿತು ಜಾನಪದ ಗೀತೆ ಕಾರ್ಯಕ್ರಮ ಜರುಗಿತು.ರಕ್ತದಾನಿಗಳಾದ ಡಾ. ಸೋಲೋಮನ್ , ಲಿಂಗರಾಜ ಬಗಲಿ, ಎಮ್.ಆರ್. ಹರ್ಲಾಪುರ, ರವಿರಾಜ ಕಂಪ್ಲಿ,  ವಿನಾಯಕ ಕಬಾಡಿ ಹಾಗೂ ಫ್ರಾಂಕ್ಲಿನ್ ದಲಭಂಜನ್ ಅವರನ್ನು ಸನ್ಮಾನಿಸಲಾಯಿತು. 

ಹಿರಿಯ ಆರೋಗ್ಯ ಸಹಾಯಕ ಆರ್.ವಿ. ಕುಪ್ಪಸ್ತ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.