ಗುರುವಾರ , ಮೇ 19, 2022
25 °C

ನಾಲ್ಕು ದಶಕಗಳ ಸಾಹಿತ್ಯ ಸಮುಚ್ಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮುಚ್ಚಯ

ಲೇ: ಜಿ. ಎನ್. ರಂಗನಾಥ ರಾವ್; ಪು: 612; ಬೆ: ರೂ. 350, ಪ್ರ: ಸುಭಾಷ್ ಸ್ಟೋರ್ಸ್‌, ಕೃಷ್ಣ ಬಿಲ್ಡಿಂಗ್, 22-23, ಅವೆನ್ಯೂ ರಸ್ತೆ, ಬೆಂಗಳೂರು - 560002.

ಜಿ. ಎನ್. ರಂಗನಾಥ ರಾವ್ ಕತೆ, ನಾಟಕ, ಕಾದಂಬರಿ ಹಾಗೂ ಅನುವಾದಗಳೂ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರೂ ಅವರು ಸಾಹಿತ್ಯ ವಿಮರ್ಶಕರಾಗಿಯೇ ಪ್ರಸಿದ್ಧರು. 1974ರಲ್ಲಿ ಅಕ್ಷರ ಪ್ರಕಾಶನ ಅವರ ‘ಹೊಸ ತಿರುವು’ ಎಂಬ ವಿಮರ್ಶಾ ಸಂಕಲನ ಪ್ರಕಟಿಸಿತು. ಆ ಬಳಿಕ ಅವರ ಐದಕ್ಕೂ ಹೆಚ್ಚು ವಿಮರ್ಶಾ ಸಂಕಲನಗಳು ಪ್ರಕಟವಾದವು.ವೃತ್ತಿಯಿಂದ ಪತ್ರಕರ್ತರಾದ ಅವರು ‘ಪ್ರಜಾವಾಣಿ’ ಬಳಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಉತ್ತಮ ಅಭಿರುಚಿಯ ವಿಮರ್ಶೆಯನ್ನೂ, ಪುಸ್ತಕಗಳನ್ನು ಓದುವ ಪ್ರೀತಿಯನ್ನೂ ಬೆಳೆಸಿದರು.ಪ್ರೊ. ಟಿ.ಪಿ. ಅಶೋಕ ಏಳು ವರುಷಗಳ ಕಾಲ ‘ಮಯೂರ’ದಲ್ಲಿ ಪ್ರತಿ ತಿಂಗಳೂ ಒಂದು ಪುಸ್ತಕದ ಬಗ್ಗೆ ಬರೆದ ಲೇಖನಗಳ ಸಂಗ್ರಹ ‘ಪುಸ್ತಕ ಪ್ರೀತಿ’ಯನ್ನು ಜಿ.ಎನ್.ರಂಗನಾಥ ರಾವ್ ಹಾಗೂ ಜಿ.ಎಸ್.ಸದಾಶಿವ ಅವರಿಗೆ ಅರ್ಪಿಸಿರುವುದು ರಂಗನಾಥರಾಯರ ಮುಕ್ತ ಸಾಹಿತ್ಯ ಪ್ರೀತಿಗೆ ಸಂದ ಅಭಿನಂದನೆ ಎಂದೇ ನಾನು ತಿಳಿಯುತ್ತೇನೆ.

ಜಿ.ಎನ್.ಆರ್. ಅವರ ಅಭಿರುಚಿ, ಆಸಕ್ತಿಗಳು ಈಗಾಗಲೇ ಕನ್ನಡ ಸಾಹಿತ್ಯಾಸಕ್ತರಿಗೆ ಪರಿಚಿತ ಎಂಬುದನ್ನು ಸೂಚಿಸುವುದಕ್ಕಾಗಿ ಮೇಲಿನ ಮಾತುಗಳನ್ನು ಹೇಳಿದೆ. ಅವರು ಕಳೆದ 45 ವರುಷಗಳ ಕಾಲ ಬರೆದ ವಿಮರ್ಶೆಗಳಿಂದ ಆರಿಸಿದ ಮುಖ್ಯ ಲೇಖನಗಳ ಸಂಗ್ರಹ ‘ಸಮುಚ್ಚಯ’. ಇದರಲ್ಲಿ ಕಾದಂಬರಿ, ಸಣ್ಣಕತೆ, ಕಾವ್ಯ ಹಾಗೂ ನಾಟಕ ಎಂಬ ನಾಲ್ಕು ವಿಭಾಗಗಳಲ್ಲಿ ಲೇಖನಗಳನ್ನು ಒಟ್ಟು ಮಾಡಲಾಗಿದೆ.

ಇದರಿಂದಾಗಿ ಕಳೆದ ನಾಲ್ಕು ದಶಕಗಳ ಕನ್ನಡ ಸಾಹಿತ್ಯ ಚರಿತ್ರೆಯ ಸ್ಥೂಲ ರೂಪ ಒಂದೇ ಕಡೆ ಸಿಗುವಂತಾಗಿದೆ. ಸಾಹಿತ್ಯ ಚರಿತ್ರೆ ಬರೆಯುವ ಉದ್ದೇಶ ಜಿ.ಎನ್.ಆರ್. ಅವರದ್ದಲ್ಲವಾದರೂ, ಬರಹಗಳು ಒಟ್ಟಾದ ಕ್ರಮದಲ್ಲಿ ಕಳೆದ ನಾಲ್ಕು ದಶಕಗಳ ಕನ್ನಡ ಸಾಹಿತ್ಯ ಬೆಳವಣಿಗೆ ಸ್ಪಷ್ಟವಾಗಿ ಕಣ್ಣ ಮುಂದೆ ಬರುತ್ತದೆ.ಇಲ್ಲಿನ ಎಲ್ಲಾ ಲೇಖನಗಳಲ್ಲಿ ಮೊದಲಿಗೆ ಎದ್ದು ಕಾಣುವ ಅಂಶವೆಂದರೆ ಪತ್ರಿಕೋದ್ಯಮದಿಂದ ಪಳಗಿದ ವಿಮರ್ಶೆಯ ಭಾಷೆ. ವಿಮರ್ಶೆಗೆ ಪಾರಿಭಾಷಿಕ ಪದಗಳ ಸಂಕೀರ್ಣ ಮಿಶ್ರಣಗಳುಳ್ಳ ಸಂಕೀರ್ಣ ಶೈಲಿಯೇ ಸರಿಯಾದ ಕ್ರಮ ಎಂದು ಕೆಲವರದರೂ ಇಂದು ತಪ್ಪು ತಿಳಿದಿರುವಂತಿದೆ.ವಿಮರ್ಶೆಯಲ್ಲಿ ಸಂಕೀರ್ಣವಾದ ವಿಚಾರಗಳನ್ನೂ ಸರಳಕನ್ನಡದಲ್ಲಿ ಕಿರುವಾಕ್ಯಗಳಲ್ಲಿ ಹೇಗೆ ಹೇಳಬಹುದು ಎಂಬುದನ್ನು ಇಲ್ಲಿನ ಅನೇಕ ಲೇಖನಗಳ ಭಾಷೆ ತೋರಿಸಬಲ್ಲದು. ಕನಿಷ್ಠ ಈ ಒಂದು ದೃಷ್ಟಿಯಿಂದಲಾದರೂ ‘ಸಮುಚ್ಚಯ’ ಪುಸ್ತಕ ಎಲ್ಲಾ ಕಾಲೇಜುಗಳ ಹಾಗೂ ವಿಶ್ವವಿದ್ಯಾನಿಲಯಗಳ ಕನ್ನಡ ಗ್ರಂಥಾಲಯಗಳಲ್ಲಿದ್ದು ನಮ್ಮ ಸಾಹಿತ್ಯ ವಿದ್ಯಾರ್ಥಿಗಳಿಗೆ ಸುಲಭವಾಗಿ ಓದಲು ಸಿಗುವಂತಾಗಬೇಕು.

ಜಿ.ಎನ್.ಆರ್. ಕಾವ್ಯದಿಂದ ಪ್ರಭಾವಿತರಾದ ಗದ್ಯ ಸಾಹಿತ್ಯಕ್ಕೆ ಒಲಿದಿರುವ ವಿಮರ್ಶಕ, ಸಂಗ್ರಹ ಅವರ ಬರಹಗಳ ಸಹಜ ಗುಣ, ಆದರೆ ಅದು ಸಾರಾಂಶ ಹೇಳುವುದಲ್ಲ. ಅವರ ಗ್ರಹಿಕೆಯೇ ವಿಶ್ಲೇಷಣಾತ್ಮಕ. ತಾವು ಕಾಣುವಂತೆ ಸಾಹಿತ್ಯ ಕೃತಿಯನ್ನು ಅವರು ಪುನಃ ಕಟ್ಟುತ್ತಾರೆ.

ಸಾರಾಂಶ ನೀಡಿ ಆ ಬಳಿಕ ವಿವರಿಸುವ ಸಾಮಾನ್ಯ ವಿಮರ್ಶಾ ಕ್ರಮಕ್ಕಿಂತ ಇದು ಬೇರೆ.ಒಂದು ರೀತಿಯಲ್ಲಿ ಅವರದ್ದು ನವ್ಯ ವಿಮರ್ಶಾ ಪ್ರಜ್ಞೆಯ ಮುಂದುವರಿಕೆ. ಆದರೆ ಅವರ ಕೃತಿ ನಿಷ್ಠತೆ ಹೊರಗಿನ ಅಧ್ಯಯನ ಹಾಗೂ ಅವಲೋಕನಗಳ ಹೊಸ ಪ್ರಜ್ಞೆಯ ಸಂಯೋಗದಿಂದ ಬೆಳೆಯುತ್ತದೆ.

 ಕೆ.ಸದಾಶಿವ ಅವರ ‘ಅಪರಿಚಿತರು’ ಕತೆಯನ್ನು ಅವರು ವಿಶ್ಲೇಷಿಸುವ ಕ್ರಮದಲ್ಲಿ (ಪುಟ 254) ನಾವು ಕೃತಿಯೊಳಗಿಂದ ಹುಟ್ಟುವ ಅನುಭವ ಹೊಸ ಪ್ರಜ್ಞೆಯ ಸಂಯೋಗದಲ್ಲಿ ಬೆಳೆಯುವುದನ್ನು ಕಾಣಬಹುದು. ಗಂಡು - ಹೆಣ್ಣಿನ ಸಂಬಂಧದ ಬಗ್ಗೆ ತುಡಿಯುವ ನಾಯಕ, ಸಂಬಂಧ - ಸಾಯುಜ್ಯಗಳ ಬಗ್ಗೆ ಗಲಿಬಿಲಿಗೊಳ್ಳುವುದನ್ನು ಜಿ.ಎನ್.ಆರ್. ತೋರಿಸಿಕೊಡುತ್ತಾರೆ.

ಬೆದೆಯ ಅನಂತರದ ಭ್ರೂಣದ ಕಲ್ಪನೆ ಪ್ರಪಂಚದಲ್ಲಿ ಬಂಧುತ್ವದ ಮೂಲ ಗಂಟನ್ನು ಶೋಧಿಸುವ, ಮೌಲ್ಯಗಳನ್ನು ಅರಿಯಬೇಕಾದ, ಭಾವನೆಗಳ, ಉದ್ವೇಗದ ವಿವರಗಳನ್ನು ಕುರ್ತಕೋಟಿಯವರಿಗಿಂತ ಬೇರೆಯಾಗಿ ಜಿ.ಎನ್.ಆರ್. ತೋರಿಸಿಕೊಡುತ್ತಾರೆ. ಕೃತಿ ನಿಷ್ಠತೆ ಹಾಗೂ ಸಂಸ್ಕೃತಿಯ ಅಗತ್ಯತೆ ಎರಡರ ಶಕ್ತಿಯನ್ನೂ ಶುದ್ಧ ಸಾಹಿತ್ಯ ವಿಮರ್ಶೆಯಲ್ಲಿ ಹೇಗೆ ಉಳಿಸಿಕೊಳ್ಳಬಹುದು ಎಂದು ಚಿಂತಿಸುವವರಿಗೆ ಜಿ.ಎನ್.ಆರ್. ಬರಹಗಳಲ್ಲಿ ಅನೇಕ ಉತ್ತಮ ಉದಾಹರಣೆಗಳು ಸಿಗಬಹುದು.‘ಕನ್ನಡದಲ್ಲಿ ಅಸಂಗತ ನಾಟಕಗಳು’ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದಲೂ ಮುಖ್ಯವಾದ ಲೇಖನ. ಮಾಸ್ತಿ ಮೊದಲಾದವರ ನಾಟಕಗಳ ಬಗ್ಗೆ ಮುಖ್ಯವೆನಿಸಬಹುದಾದ ಲೇಖನಗಳಿದ್ದರೂ ಕಾವ್ಯಾಸಕ್ತರ ದೃಷ್ಟಿಯಿಂದ ‘ಎಚ್.ಎಸ್.ವೆಂಕಟೇಶಮೂರ್ತಿಯವರ ನಾಟಕ ಸಾಹಿತ್ಯ’ ಬಹು ಉಪಯುಕ್ತವಾದೊಂದು ಲೇಖನ. ಈಗಾಗಲೇ 17 ನಾಟಕಗಳನ್ನು ಬರೆದಿರುವ ಎಚ್.ಎಸ್.ವಿ. ಅವರ ನಾಟಕಗಳ ರೂಪಕ ಶಕ್ತಿಯನ್ನು ಗ್ರಹಿಸುವುದು ಅವರ ಕಾವ್ಯದ ಅಧ್ಯಯನಕ್ಕೆ ಪೂರಕ. ರಾಮಾಯಣ ಹಾಗೂ ಮಹಾಭಾರತಗಳು ಎಚ್.ಎಸ್.ವಿ.ಯವರ ನಾಟಕಗಳಲ್ಲಿ ಇಂದಿನ ಅನುಭವವಾಗಿ ವರ್ತಮಾನಗೊಳ್ಳುತ್ತವೆ.

(ಉದಾ: ಅಗ್ನಿ ಕೂಡಾ ಗಂಡಸೇ ಎಂದು ರಾಮ ಹೇಳಲಿಲ್ಲ. ನನ್ನ ಪುಣ್ಯಕ್ಕೆ ಎಂದು ಸೀತೆ ಹೇಳುವ ಮಾತು. ದ್ರೌಪದಿ ಸಂದರ್ಭದಲ್ಲಿ ಸೂರ್ಯ ಅನ್ನೊ ಕೃಷ್ಣ ಭೂಮಿಗೆ ಬಣ್ಣಬಣ್ಣದ ಪತ್ತಲ ಕೊಡ್ತಾನೆ, ರಾತ್ರೆ ಎಂಬ ದುಶ್ಯಾಸನ ಅದನ್ನು ಸೆಳೆಯುತ್ತಾನೆ, ಇತ್ಯಾದಿ). ಎಚ್.ಎಸ್.ವಿ. ಸಂದರ್ಭದಲ್ಲಿ ಗೀತ ನಾಟಕಗಳ ಪುನರುತ್ಥಾನ ಹೇಗಾಗುತ್ತದೆ ಎಂಬುದನ್ನು ವಿವರಿಸಿ, ಅವರ ಕಾವ್ಯ - ನಾಟಕಗಳ ಪೂರಕ ಪ್ರವೇಶವನ್ನು ಜಿ.ಎನ್.ಆರ್. ಅವರು ಸಾದರಪಡಿಸುತ್ತಾರೆ.

ಕಾದಂಬರಿ ಪ್ರಕಾರದಲ್ಲಿ ಕನ್ನಡದ ಪ್ರಪ್ರಥಮ ಸಾಮಾಜಿಕ ಕಾದಂಬರಿ ‘ಇಂದಿರಾ ಬಾಯಿ’ಯಿಂದ ಪ್ರಾರಂಭವಾಗಿ, ನವೋದಯ, ಪ್ರಗತಿಶೀಲ, ನವ್ಯದಲ್ಲಿ ಮುಂದುವರಿದು ಚೆನ್ನಣ್ಣ ವಾಲೀಕಾರರ ಕಾದಂಬರಿಗಳು, ಪ್ರಸನ್ನರ ‘ಬಾಲಗೋಪಾಲ’. ಕೆ.ಸತ್ಯನಾರಾಯಣರ ‘ಕಾಲಜಿಂಕೆ’, ವಿವೇಕ ಶಾನಭಾಗರ ಕಾದಂಬರಿಗಳು ಸೇರಿದಂತೆ ಇಂದಿನವರೆಗೆ ಕಾದಂಬರಿಗಳ ಬೀಸನ್ನು ತೋರಿಸುತ್ತದೆ.‘ಹೊಸ ಮಾರ್ಗದ ಹುಡುಕಾಟ: ವಾಸ್ತವ ಮಾಯಾವಾಸ್ತವ’ ಎಂಬ ಲೇಖನವೂ ನವ್ಯೋತ್ತರ ಕನ್ನಡ ಕಾದಂಬರಿ ಲೋಕದ ಕೃತಿಗಳನ್ನು ವಿವರವಾಗಿ ಅನಾವರಣಗೊಳಿಸುತ್ತಾ ಈಚೆಗಿನ ತಾತ್ವಿಕ ಹುಡುಕಾಟಗಳನ್ನೂ ಪರಿಶೀಲಿಸುತ್ತದೆ.ಸಣ್ಣಕತೆಗಳಲ್ಲೂ ನವ್ಯದ ಅನಾಥ ಪ್ರಜ್ಞೆಯಿಂದ ಪ್ರಾರಂಭಿಸಿ, ವೈದೇಹಿಯವರು ಸ್ತ್ರೀವಾದ ಮೊದಲಾದ ವಿವರಗಳೊಡನೆ ಈಚೆಗಿನ ಅನೇಕ ಹೊಸದನಿಯ ಕತೆಗಾರರನ್ನೂ ಗುರುತಿಸುತ್ತಾರೆ.ಪ್ರತ್ಯೇಕ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಒಟ್ಟು ಮಾಡುವಾಗಿನ ಸಮಸ್ಯೆಗಳು ಇಲ್ಲೂ ಎದುರಾಗಿ ಒಂದು ಕಾಲಘಟ್ಟದ ಎಲ್ಲಾ ಮುಖ್ಯ ಕೃತಿಗಳ ಬಗ್ಗೆ ಒಬ್ಬರಿಂದಲೇ ಚರ್ಚೆಯಗಿರುವುದಿಲ್ಲ. ಉದಾಹರಣೆಗೆ ಸಣ್ಣಕತೆಗಾರರಲ್ಲಿ ಮುಖ್ಯರಾದ ಕೆ.ಸತ್ಯನಾರಾಯಣ, ಅಮರೇಶ ನುಗದೋಣಿ, ವಿವೇಕ ಶಾನಭೋಗ ಮೊದಲಾದವರ ಕತೆಗಳ ಪ್ರಸ್ತಾಪ ಇಲ್ಲ.ಈ ಕೃತಿ ಕವಿ ಎಂ.ಗೋಪಾಲಕೃಷ್ಣ ಅಡಿಗರ ಹಾಗೂ ವೈ.ಎನ್.ಕೆ. ಅವರ ನೆನಪಿಗೆ ಅರ್ಪಿತವಾದರೂ ಅಡಿಗರ ಕಾವ್ಯದ ಬಗ್ಗೆ ಪ್ರತ್ಯೇಕ ಲೇಖನವಿಲ್ಲ. ಹಾಗೆಯೇ ನಾಟಕ ವಿಭಾಗದಲ್ಲಿ ಗಿರೀಶ್ ಕಾರ್ನಾಡರ ನಾಟಕಗಳ ಬಗ್ಗೆ ಪ್ರತ್ಯೇಕ ಬರಹಗಳಿಲ್ಲ.‘ಸಮುಚ್ಛಯ’ ಕೃತಿಗೆ ಒಂದು ಕಾಲಘಟ್ಟದ ಎಲ್ಲಾ ಮುಖ್ಯ ಕೃತಿಗಳನ್ನು ಸಮಗ್ರವಾಗಿ ವಿಮರ್ಶಿಸುವ ಉದ್ದೇಶ ಇಲ್ಲ ಎಂಬುದು ನಿಜ. ಆದರೆ ಒಂದು ಕಾಲಘಟ್ಟದ ಸಮರ್ಥ ಹಾಗೂ ಸಮಗ್ರ ಬೆಳವಣಿಗೆ ಬಗ್ಗೆ ನಡೆದ ಚರ್ಚೆ ಒಂದೇ ಕಡೆ ಓದಲು ಸಿಗಬಹುದಾದ ಒಂದು ಅವಕಾಶ ಹೀಗೆ ಅಲ್ಲಲ್ಲಿ ಕೆಲವು ಮುಖ್ಯ ಕೃತಿಗಳು ಒಳಗೊಳ್ಳದೇ ಇರುವುದರಿಂದ ತಪ್ಪಿಹೋಯಿತು.

ಹಾಗೆ ಎಲ್ಲವೂ ಒಂದೇ ಕಡೆ ಇರುವ ಒಂದು ಕೃತಿಯಾಗಬೇಕಿತ್ತು ಎಂಬ ನಿರೀಕ್ಷೆಯನ್ನು ಓದುಗನಲ್ಲಿ ಸಹಜವಾಗಿ ಈ ಕೃತಿ ಉಂಟು ಮಾಡುತ್ತದೆ ಎಂಬುದೂ ‘ಸಮುಚ್ಚಯ’ದ ಮಹತ್ವವನ್ನು ಸೂಚಿಸುತ್ತದೆ.ನಿಸಾರ್ ಅಹಮದ್ ಅವರ ಕಾವ್ಯದ ಬಗೆಗಿನ ಲೇಖನದ ಮೊದಲ ಭಾಗದಲ್ಲಿ ಪೀಠಿಕೆಯಂತೆ ಜಿ.ಎನ್.ಆರ್. ನೀಡುವ ಪ್ರವೇಶ ಅವರ ವಿಮರ್ಶಾ ಕ್ರಮಕ್ಕೆ ಉತ್ತಮ ಉದಾಹರಣೆ.

ಅವರು ಯಾವ ಸಾಹಿತ್ಯ ಕೃತಿಯನ್ನು ವರ್ತಮಾನದಲ್ಲಿ ಮಾತ್ರ ಹುಟ್ಟಿ ನಿಜವಾಗುವಂತಹದ್ದು ಎಂದು ತಿಳಿದವರಲ್ಲ. ಭಾಷೆಯ ಮೂಲಕ ಹರಿದು ಬರುವ ಪರಂಪರೆಯ ಸಾತತ್ಯವನ್ನು ಅವರ ವಿಮರ್ಶೆ ಸದಾ ಗುರುತಿಸುತ್ತದೆ. ಈ ದೃಷ್ಟಿಯಿಂದ ಜಿ.ಎನ್.ಆರ್. ಭಾರತೀಯ ಕಾವ್ಯ ಮೀಮಾಂಸೆಯ ಶಕ್ತಿಯನ್ನೂ ಗುರುತಿಸುತ್ತಾರೆ. ಅದರ ಜೊತೆ ಕೃತಿಯ ಅನುಸಂಧಾನಕ್ಕೆ ತೊಡಗುವುದರಿಂದ ಕೃತಿನಿಷ್ಠ ವಿಮರ್ಶೆಯ ಶಕ್ತಿಯನ್ನೂ ಆವಾಹಿಸಿಕೊಳ್ಳುತ್ತಾರೆ.ಇಂದು ‘ಮರಳಿ ಕೃತಿಗೆ’ ಎಂದು ವಿಮರ್ಶೆಯ ಸಂದರ್ಭದಲ್ಲಿ ಮಾತನಾಡುವಾಗ ಜಿ.ಎನ್.ಆರ್. ವಿಮರ್ಶೆಯನ್ನೂ ನಾವು ನೆನಪಿಸಿಕೊಳ್ಳಬೇಕಾಗುತ್ತದೆ.ವಸ್ತುನಿಷ್ಠವಾಗಿ ಸಾಹಿತ್ಯವನ್ನು ಕುರಿತು ನೈತಿಕ ಹೊಣೆಗಾರಿಕೆಯ ಮಾತುಗಳನ್ನಾಡುವ ಜವಾಬ್ದಾರಿ ವಿಮರ್ಶಕನ ಮೇಲಿದೆ ಎಂದು ಜಿ.ಎನ್.ಆರ್. ನಂಬುತ್ತಾರೆ. ಕೃತಿಗಳ ವಿವರಣೆ - ವಿಶ್ಲೇಷಣೆ, ಮೌಲ್ಯಮಾಪನಗಳ ಜೊತೆಗೆ ಸಮಗ್ರ ಗ್ರಹಿಕೆಯಿಂದ ಸಾಹಿತ್ಯವನ್ನು ಓದುಗರಿಗೆ ಪೂರ್ವಗ್ರಹವಿಲ್ಲದೆ ಪರಿಚಯಿಸುವುದೂ ವಿಮರ್ಶಕನ ಜವಾಬ್ದಾರಿ ಎಂದವರು ತಿಳಿಯುತ್ತಾರೆ.

ಈ ಜವಾಬ್ದಾರಿಯ ನಿರ್ವಹಣೆಯ ಪ್ರಕ್ರಿಯೆಯಲ್ಲಿ ಎಫ್.ಆರ್.ಲೀವಿಸ್ ಸೂಚಿಸುವಂತೆ ವಿಮರ್ಶೆ ಜೀವದಾಯಿಯಾಗುವುದು ಎಂದು ಪರಿಭಾವಿಸುತ್ತಾರೆ. ಕೃತಿಯ ಮೂಲಕ ಸಂಸ್ಕೃತಿಯ ನೆಲೆಗಳಿಗೆ ಕೈಚಾಚುವುದು ಅವರ ಸಹಜಗುಣ. ಈ ದೃಷ್ಟಿಯಿಂದ ಒಂದರ್ಥದಲ್ಲಿ ಜಿ.ಎನ್.ಆರ್. ಅವರು ಎಂ.ಜಿ.ಕೃಷ್ಣಮೂರ್ತಿ ಸೃಷ್ಟಿಸಿದ ವಿಮರ್ಶಾ ಮಾರ್ಗದ ಪ್ರತಿನಿಧಿ ಎಂದರೂ ತಪ್ಪಾಗಲಾರದು.

ಆದ್ದರಿಂದ ಅವರಿಗೆ ಸಾಹಿತ್ಯ ಕೃತಿಯೊಂದು ಕಲಾಕೃತಿಯಾಗಿ ಸಾಮಾಜಿಕ ಜೀವನ ಲಕ್ಷಣಗಳ ಜೊತೆಗೆ ಎದುರಾಗುತ್ತದೆ. ಕನ್ನಡದಲ್ಲಿ ಪ್ರೊ.ಜಿ.ಎಚ್.ನಾಯಕ್, ಡಾ.ಡಿ.ಎ. ಶಂಕರ್, ಗಿರಡ್ಡಿ ಗೋವಿಂದರಾಜ, ಡಾ.ಬಿ.ದಾಮೋದರ ರಾವ್ ಇದೇ ವಿಮರ್ಶಾ ಪರಂಪರೆಯ ವಿಭಿನ್ನ ಪ್ರಯೋಗಗಳನ್ನು ನಡೆಸಿದವರು ಎಂಬುದನ್ನೂ ನಾವು ನೆನಪಿಡಬೇಕು.

ಜಿ.ಎನ್.ಆರ್. ಅವರನ್ನು ಪ್ರಭಾವಿಸಿದ ಇನ್ನೊಂದು ಸಾಹಿತ್ಯ ಪರಿಕಲ್ಪನೆ ಎಂದರೆ ಕವಿ ಅಡಿಗರು ಪ್ರತಿಪಾದಿಸಿದ ‘ಸಾವಯವ ಶಿಲ್ಪದ ಸಮಗ್ರೀಕರಣ’ ತತ್ವ. ಆದರೆ ಈ ತತ್ವ ಕೇವಲ ಆಕೃತಿಗೆ ಮಾತ್ರ ಸಂಬಂಧಿಸಿದ ವಿಚಾರವಲ್ಲ, ಆ ಕಲ್ಪನೆಗೆ ಕಲಾಕೃತಿಯ ಅಂತಃಸತ್ವದ ಸೃಜನಶೀಲ ವಿಮರ್ಶಾ ಪ್ರತಿಸೃಷ್ಟಿ ತತ್ವವನ್ನು ಜಿ.ಎನ್.ಆರ್. ಸೇರಿಸುತ್ತಾರೆ.

ಅದು ಅವರು ವಿಮರ್ಶೆಯನ್ನು ಬೆಳೆಸಿದ ಕ್ರಮ. ಆದ್ದರಿಂದ, ಕೃತಿ, ಆಕೃತಿಗಳಲ್ಲಿ ಸಾಮಾಜಿಕ ಬದುಕನ್ನು ಪುನರ್ ಸೃಷ್ಟಿಸುವುದರ ಮೂಲಕ ಏಕಕಾಲದಲ್ಲಿ ತಿಳಿವಳಿಕೆಯನ್ನೂ, ಪ್ರಜ್ಞಾದೀಪ್ತಿಯನ್ನೂ, ರಸಾಸ್ವಾದನೆಯನ್ನೂ, ಸೌಂದರ್ಯಾನುಭೂತಿಯನ್ನೂ ಉದ್ದೀಪನಗೊಳಿಸುವಲ್ಲಿ ಸಾಹಿತ್ಯ ಸೃಷ್ಟಿಯ ಸಾರ್ಥಕತೆ ಇದೆ ಎಂದು ಅವರು ತಿಳಿಯುತ್ತಾರೆ.

ಅದನ್ನು ಗುರುತಿಸುವಲ್ಲಿ ವಿಮರ್ಶೆಯ ಕಾಳಜಿ ಜೀವಪರವಾಗಿರಬೇಕಾಗುತ್ತದೆ. ಅದೇ ಲೀವಿಸ್‌ನ ಔಜ್ಛಿಛಿ ಜಜಿಜ್ಞಿಜ - ‘ಜೀವಪರ ತತ್ವ’ ಎಂದು ಜಿ.ಎನ್.ಆರ್. ನಂಬುತ್ತಾರೆ.ಕನ್ನಡ ವಿಮರ್ಶಾ ಕ್ಷೇತ್ರದ ಆಳ ಅಗಲಗಳನ್ನು ಸ್ವಲ್ಪವಾದರೂ ವಿಸ್ತರಿಸಿದವರು ಜಿ.ಎನ್.ಆರ್. ಎಂಬ ನಂಬುಗೆ ಯಾರಿಗಾದರೂ ಈ ಕೃತಿಯನ್ನು ಓದಿದಾಗ ಉಂಟಾಗುತ್ತದೆ.ಇದು ಯಾವ ಅಕಡೆಮಿಕ್ ಕ್ಷೇತ್ರದ ದೊಡ್ಡ ವ್ಯಕ್ತಿಯೊಬ್ಬನ ಸಾಧನೆಗೂ ಕಮ್ಮಿಯಿಲ್ಲದ ಕೊಡುಗೆ. ಆದರೂ, ‘ವಿಮರ್ಶೆಯ ಮಾತು ಬಂದಾಗ ಅಕಾಡೆಮಿ, ವಿಶ್ವವಿದ್ಯಾನಿಲಯ ಮೊದಲಾದ ಅಕಡೆಮಿಕ್ ವಲಯಗಳಲ್ಲಿ ನಾನು ಅಸ್ಪೃಶ್ಯ’ ಎಂದು  ಜಿ.ಎನ್.ಆರ್. ಹೇಳಿಕೊಳ್ಳಬೇಕಾದರೆ ಅದು ಅವರಿಗಾಗಿರುವ ಹಿಂಸೆಯನ್ನು ಸೂಚಿಸುತ್ತದೆ. ಇವತ್ತು ಕನ್ನಡದ ಅನೇಕ ಮುಖ್ಯ ಬರಹಗಾರರೂ, ಕೆಲವರಾದರೂ ಗಮನ ಸೆಳೆಯಬಲ್ಲ ವಿಮರ್ಶಕರು ಸಾಹಿತ್ಯದ ಅಕಡೆಮಿಕ್ ಕ್ಷೇತ್ರದಿಂದ ಹೊರಗಿದ್ದಾರೆ.

ನಾವು ಹೆಸರಿಸಬಹುದಾದಂತಹ ವಿದ್ವಾಂಸರ ಸಂಖ್ಯೆ ವಿಶ್ವವಿದ್ಯಾನಿಲಯಗಳಲ್ಲಿ ಕಡಿಮೆಯಾಗುತ್ತಿದೆ. ಸಾಹಿತ್ಯ ಅಕಡೆಮಿಕ್ ಅಥವಾ ಇನ್ನಿತರ ಅಧಿಕಾರದ ಅಲಗಿನಲ್ಲಿ ನಡೆಯುವಂತಾಗಬಾರದು. ರುಚಿ ಹಾಗೂ ಆಳವಾದ ಅಧ್ಯಯನಗಳ ಮಿಳಿತದಿಂದ ಅದು ಬೆಳೆಯಬೇಕು. ಒಳನೋಟಗಳಿಂದ ಪುಷ್ಟಿಗೊಳ್ಳಬೇಕು.

ಈ ದೃಷ್ಟಿಯಿಂದ ವಿಶ್ವವಿದ್ಯಾನಿಲಯದ ಅಕಡೆಮಿಕ್ ಗುರುಗಳು ಗುರುತಿಸಲಿ, ಬಿಡಲಿ- ಜಿ.ಎನ್.ಆರ್. ಅವರದು ಬಹುಮುಖ್ಯ ಸಂವೇದನಾಶೀಲ ಅಧ್ಯಯನ ನಿರತ ಮನಸ್ಸು ಎಂಬುದನ್ನು ‘ಸಮುಚ್ಛಯ’ ಸಾಬೀತು ಪಡಿಸುತ್ತವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.