ಶುಕ್ರವಾರ, ನವೆಂಬರ್ 15, 2019
22 °C

ನಾಲ್ಕು ನಾಮಪತ್ರಗಳು ತಿರಸ್ಕೃತ

Published:
Updated:

ಕಾರವಾರ: ವಿಧಾನಸಭಾ ಚುನಾವಣೆಗೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ 95 ಅಭ್ಯರ್ಥಿಗಳ ಪೈಕಿ ನಾಲ್ವರು ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದೆ.ಶಿರಸಿ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.ಶಿರಸಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಜೇಶ್ ದೇಶಭಾಗ ಅವರು ಫಾರಂ `ಎ' ಮತ್ತು `ಬಿ' ಸಲ್ಲಿಸದಿರುವ ಕಾರಣ ತಿರಸ್ಕರಿಸಲಾಗಿದೆ. ಒಬ್ಬರೇ ಅನುಮೋದಕರು ಇದ್ದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿಯೂ ಸ್ಪರ್ಧಿಸಲು ಅವಕಾಶ ನೀಡಲಾಗಿಲ್ಲ.ಇನ್ನೊಬ್ಬ ಅಭ್ಯರ್ಥಿ ಶ್ರೀಕೃಷ್ಣ ಗಣಪತಿಯಪ್ಪ (ಕರ್ನಾಟಕ ರಾಜ್ಯ ರೈತಸಂಘ) ಅವರು ಅನುಮೋದಕರ ಪಟ್ಟಿ ಮಾಹಿತಿ ಅಪೂರ್ಣ ಹಿನ್ನೆಲೆಯಲ್ಲಿ  ತಿರಸ್ಕರಿಸಲಾಗಿದೆ.ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಇನ್ನೊಬ್ಬ ಅಭ್ಯರ್ಥಿಯ ನಾಮಪತ್ರಗಳನ್ನು ತಾಂತ್ರಿಕ ಕಾರಣಗಳಿಗಾಗಿ ತಿರಸ್ಕರಿಸಲಾಗಿದೆ.ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಶೋಕ ಮಡಿವಾಳ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರ ನಾಮಪತ್ರಗಳ ಪರಿಶೀಲನೆ ಮುಂದೂಡಲಾಗಿದ್ದು ಶುಕ್ರವಾರ (ಏ.19) ನಡೆಯಲಿದೆ.

ಪ್ರತಿಕ್ರಿಯಿಸಿ (+)