ಶನಿವಾರ, ಮೇ 28, 2022
25 °C

ನಾಲ್ಕು ಮದುವೆ: ಗುಮಾಸ್ತ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |
ಬಾಗಲಕೋಟೆ: ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದಿರುವ ಆರೋಪದ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆಯ ಸಹಾಯಕ ಮಹಾಂತೇಶ ವಿ.ನಿಡಸನೂರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಮಹಾಂತೇಶ ನಿಡಸನೂರ ತಮ್ಮ ಮಗಳನ್ನು ಪುಸಲಾಯಿಸಿ ಕಾನೂನುಬಾಹಿರವಾಗಿ ಮದುವೆಯಾಗಿದ್ದಾರೆ ಎಂದು ನಗರದ ರೈಲ್ವೆ ನಿಲ್ದಾಣದ ಬಳಿಯ ನಿವಾಸಿ ಜುಬೇದಾ ನೂರಸಾಬ್ ನದಾಫ್ ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

ಜುಬೇದಾ ಸಲ್ಲಿಸಿದ ದೂರು ಹಾಗೂ ಮದುವೆಯ ಛಾಯಾಚಿತ್ರಗಳನ್ನು ಪರಿಶೀಲಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಬಿ.ಚೌಧರಿ ಅವರು, ಆರೋಪ ಮೇಲ್ನೋಟಕ್ಕೆ ಸಾಬೀತಾದ ಕಾರಣಕ್ಕೆ ಫೆ.5ರಂದು ಅಮಾನತು ಆದೇಶ ಹೊರಡಿಸಿದ್ದಾರೆ.

ಒಂದಕ್ಕಿಂತ ಹೆಚ್ಚು ಮದುವೆಯಾದ ಆರೋಪದ ಮೇರೆ ಅಮಾನತುಗೊಂಡಿರುವ ಮಹಾಂತೇಶ ನಿಡಸನೂರ ಮೂಲತಃ ಕೃಷಿ ಇಲಾಖೆಯ ಸಿಬ್ಬಂದಿಯಾಗಿದ್ದು, ನಿಯೋಜನೆ ಮೇರೆಗೆ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಡಾ.ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೈನಾಜ್ ನದಾಫ ಅವರನ್ನು ಮೂರ್ನಾಲ್ಕು ತಿಂಗಳ ಹಿಂದೆಯೇ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು.

ನಾಲ್ಕು ಹೆಂಡತಿಯರು: ಅಮಾನತುಗೊಂಡಿರುವ ಕ್ಲರ್ಕ್ ಮಹಾಂತೇಶ ನಿಡಸನೂರ ಈಗಾಗಲೇ ಮೂರು ಮದುವೆಯಾಗಿದ್ದು, ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ತಮ್ಮ ಮಗಳು ಶಹನಾಜಳನ್ನು ಪುಸಲಾಯಿಸಿ ನಾಲ್ಕನೇ ಮದುವೆಯಾಗಿದ್ದಾರೆ ಎಂದು ಜುಬೇದಾ ನದಾಫ ಆರೋಪಿಸಿದ್ದಾರೆ. ಆರೋಪಿಯು ಶಿವಲೀಲಾ ಶಿವಪ್ಪ ರೋಣದ, ಅನಸೂಯಾ ಪಾಟೀಲ, ಗಿರಿಜಾ ಬಂಡಿ ಎಂಬುವರನ್ನು ಮೊದಲೇ ಮದುವೆಯಾಗಿದ್ದು, ತಾನು ಅನಾಥ ಎಂದು ನಂಬಿಸಿ ತಮ್ಮ ಮಗಳನ್ನು ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾನೆ ಎಂದು ಲಿಖಿತವಾಗಿ ತಿಳಿಸಿದ್ದಾರೆ.

ಮಗಳ ತಲೆಕೆಡಿಸಿ ಮದುವೆಯಾಗಿದ್ದಲ್ಲದೇ ಕಳೆದ ನಾಲ್ಕು ತಿಂಗಳಿನಿಂದ ಆಕೆಯನ್ನು ರಹಸ್ಯ ಸ್ಥಳದಲ್ಲಿರಿಸಲಾಗಿದೆ ಎಂದು ಜುಬೇದಾ ನದಾಫ ದೂರಿದ್ದಾರೆ.

ಮಹಾಂತೇಶ ವಿ.ನಿಡಸನೂರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.