ನಾಲ್ಕು ಲಕ್ಷ ಸಸಿ ನೆಡಲು ನಿರ್ಧಾರ

7

ನಾಲ್ಕು ಲಕ್ಷ ಸಸಿ ನೆಡಲು ನಿರ್ಧಾರ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅರಣ್ಯ ಇಲಾಖೆ ಹಾಗೂ ಬಿಡಿಎ ಸಹಭಾಗಿತ್ವದಲ್ಲಿ ಈ ವರ್ಷ ನಗರದಲ್ಲಿ ನಾಲ್ಕು ಲಕ್ಷ ಸಸಿಗಳನ್ನು ನೆಡಲು ನಿರ್ಧರಿಸಿದೆ.

ಪರಿಸರ ದಿನಾಚರಣೆ ಅಂಗವಾಗಿ ಜೂನ್ 5ರಂದು ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಬಿಬಿಎಂಪಿ, ಕೃಷಿ ವಿಶ್ವವಿದ್ಯಾಲಯ, ಅರಣ್ಯ, ರಕ್ಷಣಾ ಇಲಾಖೆಗಳ ಜಾಗ ಸೇರಿದಂತೆ ಐಟಿ-ಬಿಟಿ ಕಂಪೆನಿಗಳ ಜಾಗದಲ್ಲೂ ಸಸಿ ನೆಡಲು ಉದ್ದೇಶಿಸಲಾಗಿದೆ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ನಗರದಲ್ಲಿ ಮಳೆ ಬಿದ್ದ ಸಮಯದಲ್ಲಿ ಬೇರುಸಹಿತ ನೆಲಕ್ಕುರುಳಿದ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, `ನಗರದಲ್ಲಿ 60ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. ಇದು ಕೇವಲ ಬಿಬಿಎಂಪಿಗಷ್ಟೇ ಅಲ್ಲ, ನಾಗರಿಕರಿಗೂ ತಲೆನೋವು ತಂದಿದೆ. ಹೀಗಾಗಿ, ಗಟ್ಟಿಮುಟ್ಟಾದ ಮರಗಳನ್ನು ಉಳಿಸಿಕೊಂಡು ಅಪಾಯಕಾರಿ ಮರಗಳನ್ನು ತೆಗೆಯಲು ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳಿದರು.

`ಬಿಬಿಎಂಪಿಯು ಗಿಡಗಳನ್ನು ನೆಡುವುದರ ಜತೆಗೆ, ಸುತ್ತಲೂ ರಕ್ಷಾ ಕವಚಗಳನ್ನು ಅಳವಡಿಸಲಿದೆ. ಆದರೆ, ಅರಣ್ಯ ಇಲಾಖೆಯೇ ಈ ಗಿಡಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ. ಅದಕ್ಕಾಗಿ ಪಾಲಿಕೆಯು ಯಾವುದೇ ಅನುದಾನ ನೀಡುವುದಿಲ್ಲ~ ಎಂದು ಸ್ಪಷ್ಟಪಡಿಸಿದರು.

ಮರಗಳ ಸಮೀಕ್ಷೆ: ನಗರದಲ್ಲಿ ಎಷ್ಟು ಮರಗಳಿವೆ ಎಂಬುದನ್ನು ತಿಳಿಯಲು ಪಾಲಿಕೆ ಸಮೀಕ್ಷೆ ಕೈಗೊಂಡಿದೆ. ಪ್ರಸ್ತುತ ಹಂಪಿನಗರ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಈ ಸಮೀಕ್ಷಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ನಗರದಲ್ಲಿ ಈ ಸಮೀಕ್ಷೆಯನ್ನು ವಿಸ್ತರಿಸಲಾಗುವುದು. ಈ ಉದ್ದೇಶಕ್ಕಾಗಿ ಸುಮಾರು ಮೂರು ಕೋಟಿ ರೂಪಾಯಿ ಖರ್ಚಾಗಲಿದೆ. ಇದರಿಂದ ನಗರದಲ್ಲಿನ ಮರಗಳ ಸಂಖ್ಯೆ, ತಳಿ, ವಯಸ್ಸು ತಿಳಿಯಲು ಸಹಕಾರಿಯಾಗಲಿದೆ. ಅಲ್ಲದೆ, ಅಪಾಯಕಾರಿ ಮರಗಳನ್ನು ಪತ್ತೆ ಮಾಡಲು ಸಹಕಾರಿಯಾಗಲಿದೆ ಎಂದು ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಸಿದರು.

ನಗರದ ನಾಲ್ಕು ಕಡೆಗಳಲ್ಲಿ ತಲಾ 250 ಎಕರೆ ಪ್ರದೇಶದಲ್ಲಿ `ಟ್ರೀ ಪಾರ್ಕ್~ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಅಂದಾಜು 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದರು.

2010-11ನೇ ಸಾಲಿನಲ್ಲಿ ನಗರದಲ್ಲಿ 3.11 ಲಕ್ಷ ಸಸಿಗಳನ್ನು ನೆಡಲಾಗಿತ್ತು. ಈ ಪೈಕಿ ಶೇ 70ರಿಂದ 80ರಷ್ಟು ಗಿಡಗಳು ಬದುಕುಳಿದಿವೆ. ಹಾನಿಗೀಡಾದ ಕಡೆಗಳಲ್ಲಿ ಗಿಡಗಳ ಮರು ನಾಟಿ ಮಾಡಲಾಗುವುದು ಎಂದರು.

ಕೆರೆಗಳ ಅಭಿವೃದ್ಧಿಗೂ ಒತ್ತು: ಪಾಲಿಕೆ ವ್ಯಾಪ್ತಿಯಲ್ಲಿನ 55 ಕೆರೆಗಳ ಪೈಕಿ ಈಗಾಗಲೇ ಏಳೆಂಟು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಉಳಿದ ಕೆರೆಗಳ ಅಭಿವೃದ್ಧಿಗೂ ಸಮಗ್ರ ಯೋಜನಾ ವರದಿ ರೂಪಿಸಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಕೆರೆಗಳ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಒದಗಿಸಿದೆ. ಇದರ ಜತೆಗೆ, ಪಾಲಿಕೆ ಕೂಡ ಸ್ವಲ್ಪ ಹಣ ಖರ್ಚು ಮಾಡಿ ಕೆರೆಗಳ ಅಭಿವೃದ್ಧಿಗೆ ಕ್ರಮ ಜರುಗಿಸಲಿದೆ. ಈಗಾಗಲೇ ಕೆರೆಗಳ ಸುಮಾರು ನೂರು ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಲಾಗಿದೆ ಎಂದು ಮೇಯರ್ ತಿಳಿಸಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಕೆ. ವರ್ಮಾ, ಉಪ ಮೇಯರ್ ಎಲ್. ಶ್ರೀನಿವಾಸ್, ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, ಪಾಲಿಕೆಯ ಜೆಡಿಎಸ್ ಗುಂಪಿನ ನಾಯಕ ತಿಮ್ಮೇಗೌಡ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮರಗಳ ತಲೆ ಭಾರ ಇಳಿಸಲು ಕ್ರಮ

ನಗರದಲ್ಲಿ ಮಳೆ-ಗಾಳಿಗೆ ಸಿಲುಕಿ ಬೇರುಸಹಿತ ಮರಗಳು ನೆಲಕ್ಕುರುಳುತ್ತಿರುವ ಹಿನ್ನೆಲೆಯಲ್ಲಿ ಇಂತಹ ಮರಗಳ ತಲೆಭಾಗದ ರೆಂಬೆ-ಕೊಂಬೆಗಳನ್ನು ಕಡಿಯುವ ಮೂಲಕ ತಲೆ ಭಾರ ಇಳಿಸಲು ಪಾಲಿಕೆ ಮುಂದಾಗಿದೆ.

`ಬೇರುಸಹಿತ ಉರುಳುವಂತಹ ಅಪಾಯಕಾರಿ ಮರಗಳನ್ನು ವೈಜ್ಞಾನಿಕವಾಗಿ ಗುರುತಿಸುವುದು ಕಷ್ಟ. ಆದರೆ, ನಗರದಲ್ಲಿ ಮಳೆ ಸುರಿದ ಬಿದ್ದಂತಹ ಮರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಕಾಂಡದ ಭಾಗ ದಪ್ಪವಿರುವ ಹಾಗೂ ಬೇರುಗಳ ಬೆಳವಣಿಗೆಗೆ ಅವಕಾಶ ಇಲ್ಲದ ಕಡೆಗಳಲ್ಲಿ ಮರಗಳು ಬೇರುಸಹಿತ ಉರುಳಿ ಬಿದ್ದಿವೆ. ವಿಶೇಷವಾಗಿ ಗುಲ್‌ಮೊಹರ್, ಕಾಪರ್‌ಕಾಡ್, ಪೆಲ್ಟೊ ಫಾರಂನಂತಹ ಮರಗಳು ಹೆಚ್ಚಾಗಿ ನೆಲಕ್ಕುರುಳುತ್ತಿವೆ. ಇಂತಹ ಮರಗಳ ತಲೆಭಾಗದ ರೆಂಬೆ-ಕೊಂಬೆಗಳನ್ನು ಕಡಿಯುವ ಮೂಲಕ ಅದರ ಸಮತೋಲನ ಕಾಪಾಡಲು ಚಿಂತಿಸಲಾಗುವುದು~ ಎಂದು ಪಾಲಿಕೆಯ ದಕ್ಷಿಣ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

`ನಗರದಲ್ಲಿ ಈ ಹಿಂದೆ ಮರಗಳ ಬೇರುಗಳ ಬೆಳವಣಿಗೆಗೆ ಸಾಕಷ್ಟು ಅವಕಾಶವಿತ್ತು. ಆದರೆ, ಈಗ ಪಾದಚಾರಿ ಮಾರ್ಗಗಳೇ ಇಲ್ಲದಂತಾಗಿದೆ. ಇನ್ನೊಂದೆಡೆ ರಸ್ತೆ ವಿಸ್ತರಣೆ, ಡಾಂಬರೀಕರಣಕ್ಕಾಗಿ ಮರಗಳ ಬೇರುಗಳನ್ನು ಕತ್ತರಿಸಲಾಗುತ್ತಿದೆ. ಇದರಿಂದ ಬೇರುಗಳು ಸಡಿಲಗೊಂಡು ಗಾಳಿ ಬೀಸುವ ಸಂದರ್ಭದಲ್ಲಿ ದಪ್ಪ ಕಾಂಡದ ಮರಗಳು ಬೇರು ಸಹಿತ ಸುಲಭವಾಗಿ ನೆಲಕ್ಕುರುಳುತ್ತಿವೆ~ ಎಂದರು.

`ನಗರದಲ್ಲಿ ಮರಗಳ ಸಮೀಕ್ಷೆ ಮುಗಿದ ಬಳಿಕ ಪ್ರತಿಯೊಂದು ಮರಕ್ಕೂ ನಿರ್ದಿಷ್ಟ ಸಂಖ್ಯೆ ನೀಡಲಾಗುವುದು. ಮನೆಗಳಿಗೆ ನೀಡುವ ಪಿಐಡಿ ಸಂಖ್ಯೆಗಳನ್ನೂ ಮರಗಳ ಸಂಖ್ಯೆ ಜತೆಗೆ ಸಮೀಕರಿಸಲಾಗುವುದು. ಇದರಿಂದ ಸಾರ್ವಜನಿಕರು ದೂರು ನೀಡಿದ ತಕ್ಷಣ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಲು ಸಹಕಾರಿಯಾಗಲಿದೆ. ಅಲ್ಲದೆ, ಮರಗಳ ನಿರ್ವಹಣೆ ಮಾಡಲು ಅನುಕೂಲವಾಗಲಿದೆ~ ಎಂದ ಅವರು, `ಕಾಂಡಗಳು ಹಾಳಾದಂತಹ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು  ಕ್ರಮ ಕೈಗೊಳ್ಳಲಾಗುವುದು~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry