ಮಂಗಳವಾರ, ಮೇ 24, 2022
27 °C

ನಾಲ್ಕು ವರ್ಷಗಳಿಂದ ಸಂಬಳವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ನಾಲ್ಕು ವರ್ಷಗಳಿಂದ ಸಂಬಳವಿಲ್ಲದೇ ದುಡಿಯುತ್ತಿರುವ `ಡಿ~ ದರ್ಜೆ ನೌಕರನೊಬ್ಬ ಹಸಿವೆಯಿಂದ ನಿತ್ರಾಣನಾಗಿ ಮೇಲಿಂದ ಬಿದ್ದು ಆಸ್ಪತ್ರೆ ಸೇರಿದ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ನಡೆದಿದೆ.ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶಗೊಂಡು ನೌಕರರಿಗೆ ಬೆಂಬಲಿಸಲು ಜಯ ಕರ್ನಾಟಕ ಕಾರ್ಯಕರ್ತರು ಇದೇ 22, ಶನಿವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಐವರು `ಡಿ ~ದರ್ಜೆ ನೌಕರರು 2007, ಮಾರ್ಚ್ 31 ರಿಂದ ಸೇವೆಗೆ ಹಾಜರಾಗಿದ್ದಾರೆ. ಆಗ ಕೇವಲ ನಾಲ್ಕು ತಿಂಗಳು ಮಾತ್ರ ಸಂಬಳ ನೀಡಿದ್ದನ್ನು ಹೊರತುಪಡಿಸಿದರೆ ಈ ನಾಲ್ಕು ವರ್ಷಗಳಿಂದ ಅವರಿಗೆ ಸಂಬಳವಿಲ್ಲ.`ಸಾಹೇಬರೇ ನನ್ನೂರು ಹುನಗುಂದ ತಾಲ್ಲೂಕಿನ ಚಿನ್ನಾಪೂರ ಎಂಬ ಹಳ್ಳಿ. ತುಂಬಾ ಬಡವ. ಸರ್ಕಾರಿ ನೌಕರಿ ಸಿಗುತ್ತದೆ ಎಂಬ ಆಸೆಯಿಂದ ಸಾಲಾ ಮಾಡಿ ರೂ. 50 ಸಾವಿರ ಅಂದಿನ ಡಿ.ಎಚ್.ಒ ಗೋಟ್ಯಾಳ ಅವರಿಗೆ ಕೊಟ್ಟೆ. ಮದುವೆಯೂ ಆಯ್ತು. ಸಂಸಾರದ ಭಾರವೂ ಹೆಚ್ಚಾಯ್ತು. ಸಂಬಳವಿಲ್ಲದ ಕಾರಣ ಮನ ನೊಂದು ಹೆಂಡತಿಯೂ ಶಿವನ ಪಾದ ಸೇರಿದಳು. ತಂದೆಯೂ ಮೃತರಾದರು~ ಎಂದು `ಡಿ~ ದರ್ಜೆ ನೌಕರ ಕಮಲೇಶ ಚಲವಾದಿ ತನ್ನ ಕರುಣಾಜನಕ ಕಥೆಯನ್ನು  `ಪ್ರಜಾವಾಣಿ~ ಎದುರು ಹೇಳಿಕೊಂಡರು.`ಒಂದು ದಿನ ಒಪ್ಪತ್ತು ಊಟ ಮಾಡಲು ಯಾರಾದರೂ ಹಣ ನೀಡಿದರೆ ತುತ್ತಿನ ಚೀಲ ತುಂಬುತ್ತದೆ. ಇಲ್ಲಾ, ಉಪವಾಸವೇ ಗತಿ~ ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ಇದೇ ರೀತಿ ಇನ್ನೊಬ್ಬ ನೌಕರ ಕೊಲ್ಹಾರ ಗ್ರಾಮದ ರಾಜೂ ಕುದರಿಯ ನೀರು ತುಂಬಿಕೊಂಡ ಕಣ್ಣುಗಳೇ ಅವನಲ್ಲಿ ತುಂಬಿದ್ದ ದುಃಖ ವ್ಯಕ್ತಪಡಿಸಿದವು.ಸಚಿನ ಸುಣಗಾರ, ಖಾಜಪ್ಪ ವಗ್ಗರ, ಎಂ.ಕೆ.ಅಂತರಗಂಗಿ ಈ ನೌಕರರ ಸ್ಥಿತಿಯೂ ಭಿನ್ನವೇನೂ ಆಗಿರಲಿಲ್ಲ.

ಇವರು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕೊಟ್ಟ ಮನವಿಗಳಿಗೆ ಲೆಕ್ಕವೇ ಇಲ್ಲ. ಆದರೂ ಯಾವ ಅಧಿಕಾರಿಯೂ ಕ್ಯಾರೇ ಅಂದಿಲ್ಲ.ಪ್ರತಿಭಟನೆ

 ಹೀಗಾಗಿ ಶನಿವಾರ, ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಈ ನೌಕರರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಸಿಬ್ಬಂದಿ ಜೊತೆ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುವುದಾಗಿ ಯಲ್ಲೂ ಇಂಗಳಗಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.