ಬುಧವಾರ, ನವೆಂಬರ್ 20, 2019
27 °C
ಬೆಳಕೋಟಾ: ಘತ್ತರಗಿ ಪಾದಯಾತ್ರಿಗಳಿಗೆ ಬಸ್ ಡಿಕ್ಕಿ

ನಾಲ್ಕು ಸಾವು: 5 ಮಂದಿಗೆ ಗಾಯ

Published:
Updated:

ಕಮಲಾಪುರ: ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ತೆರಳುತ್ತಿದ್ದ ಪಾದಯಾತ್ರಿಗಳಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಜನ ಸಾವನ್ನಪ್ಪಿ, ಐದು ಮಂದಿ ಗಾಯಗೊಂಡ ಘಟನೆ ಶುಕ್ರವಾರ ನಸುಕಿನ ಜಾವ ಬೆಳಕೋಟಾ ಕ್ರಾಸ್ ಬಳಿ ನಡೆದಿದೆ.ಬೀದರ್ ಜಿಲ್ಲೆಯ ಹುಡಗಿ ಗ್ರಾಮದ ಚಂದ್ರಕಲಾ ರಮೇಶ (35), ಗುಲ್ಬರ್ಗ ಜಿಲ್ಲೆಯ ಮುಡಬಿಯ ರಾಮಣ್ಣ ಶರಣಪ್ಪ ಭಂಗಿ (40), ಕಾಶೆಂಪುರದ ಬಸಮ್ಮ ಶರಣಪ್ಪ ಗುಮಾಸ್ತೆ (55) ಮತ್ತು ಕಾಶೀಬಾಯಿ ಭೀಮಶಾ ಹುಡಗಿ (60) ಮೃತಪಟ್ಟವರು.ಶಶಿಕಲಾ ರಾಜಕುಮಾರ ಕಾಶೆಂಪುರ, ಅಂಬಿಕಾ ರಮೇಶ ಕಾಶೆಂಪುರ, ಅನ್ನಪೂರ್ಣ ಅಂಬರೀಷ ಕಾಶೆಂಪುರ, ಜಗದೇವಿ, ಲಕ್ಷ್ಮಿ ರಾಮಣ್ಣ ಭಂಗಿ ಮುಡಬಿ ಗಂಭೀರ ಗಾಯಗೊಂಡವರು. ಅವರನ್ನು ಗುಲ್ಬರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ: ಬೀದರ್ ಮತ್ತು ಗುಲ್ಬರ್ಗ ಮೂಲದ ಇಪ್ಪತ್ತು ಜನ ಸಂಬಂಧಿಕರು ಹಾಗೂ ಸ್ನೇಹಿತರು ಸೇರಿಕೊಂಡು ಘತ್ತರಗಿ ಭಾಗ್ಯವಂತಿ ದೇವಿ ದರ್ಶನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದರು. ಅವರು ಸೋಮವಾರ ಸಂಜೆ ಕಮಲಾಪುರ ಬಸ್‌ನಿಲ್ದಾಣದಲ್ಲಿ ಉಳಿದುಕೊಂಡಿದ್ದರು. ಮಂಗಳವಾರ ಎದ್ದು ನಸುಕಿನ ಮೂರು ಗಂಟೆಗೆ ಹೊರಟಿದ್ದರು.ಶ್ರೀರಂಗಪಟ್ಟಣ- ಬೀದರ್ ರಾಷ್ಟ್ರೀಯ ಹೆದ್ದಾರಿ 218ರ ಗುಲ್ಬರ್ಗ ಸಮೀಪದ ಬೆಳಕೋಟಾ ಬಳಿ ಸುಮಾರು ನಾಲ್ಕು ಗಂಟೆಗೆ ಹೋಗುತ್ತಿದ್ದಾಗ ಹೈದರಾಬಾದ್‌ನಿಂದ ಗುಲ್ಬರ್ಗಕ್ಕೆ ಆಗಮಿಸುತ್ತಿದ್ದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ನಾಲ್ಕು ಜನ ಸ್ಥಳದಲ್ಲೇ ಅಸುನೀಗಿದರೆ, ಉಳಿದವರು ಗಾಯಗೊಂಡಿದ್ದಾರೆ.ಅಪಾಯ: ದೇವಸ್ಥಾನಕ್ಕೆ ತೆರಳುವ ಪಾದಯಾತ್ರಿಗಳು ಡಾಮರು ರಸ್ತೆಯಲ್ಲೇ ನಡೆದುಕೊಂಡು ಹೋಗುವುದು, ಬೆಳಕು ಮೂಡುವ ಮೊದಲೇ ಪ್ರಯಾಣ ಆರಂಭಿಸುವುದು, ರಸ್ತೆ ಮಗ್ಗುಲಲ್ಲಿ ಕುಳಿತುಕೊಳ್ಳುವುದು ಅಥವಾ ವಿಶ್ರಮಿಸುವುದು ತೀವ್ರ ಅಪಾಯಕಾರಿ ಆಗಿದೆ. ಆದರೆ ಕಳೆದ ವರ್ಷವೂ ಇಂತಹ ನಿರ್ಲಕ್ಷ್ಯದಿಂದ ಅವಘಡಗಳು ಸಂಭವಿಸಿವೆ.`ಹೆದ್ದಾರಿಯಲ್ಲಿ ಹಲವಾರು ಅವಘಡಗಳು ಸಂಭವಿಸುತ್ತವೆ; ನೀವು ಬೆಳಗ್ಗೆ ಪ್ರಯಾಣ ಮಾಡಿರಿ' ಎಂದು ತಡರಾತ್ರಿಯಲ್ಲಿ ತೆರಳುತ್ತಿದ್ದ ಪಾದಚಾರಿಗಳಿಗೆ ಕಮಲಾಪುರ ಪೊಲೀಸ್ ಚಂದ್ರಕಾಂತ ಎಂಬವರು ಹೇಳಿದ್ದರು.ಆದರೆ, ದೇವಿಯ ಮೊರೆ ಹೋದ ಭಕ್ತರು ಎಚ್ಚರಿಕೆಯ ಮಾತಿಗೆ ಕಿವಿಗೊಡಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಡಿಎಸ್‌ಪಿ ತಿಮ್ಮಪ್ಪ, ಗ್ರಾಮೀಣ ವೃತ್ತ ನಿರೀಕ್ಷಕ ಕೆ.ಎಂ. ಸತೀಶ, ಕಮಲಾಪುರ ಸಬ್ ಇನ್‌ಸ್ಪೆಕ್ಟರ್ ಎನ್.ಬಿ. ಶಿವೂರ ಮತ್ತು ಸಿಬ್ಬಂದಿ ಭೇಟಿ ನೀಡಿದರು. ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)