ನಾಲ್ಕೊ ಸಿಎಂಡಿ ಅಮಾನತು, ದಂಪತಿ ಐದು ದಿನಗಳ ಪೊಲೀಸ್ ವಶಕ್ಕೆ

7

ನಾಲ್ಕೊ ಸಿಎಂಡಿ ಅಮಾನತು, ದಂಪತಿ ಐದು ದಿನಗಳ ಪೊಲೀಸ್ ವಶಕ್ಕೆ

Published:
Updated:

ನವದೆಹಲಿ (ಐಎಎನ್‌ಎಸ್, ಪಿಟಿಐ): ಲಂಚ ಪಡೆದ ಆರೋಪದ ಮೇಲೆ ಸಿಬಿಐನಿಂದ ಬಂಧಿತರಾಗಿರುವ ರಾಷ್ಟ್ರೀಯ ಅಲ್ಯೂಮಿನಿಯಂ ಕಂಪೆನಿಯ (ನಾಲ್ಕೊ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ.ಕೆ.ಶ್ರೀವಾತ್ಸವ ಅವರನ್ನು ಕೇಂದ್ರ ಗಣಿ ಇಲಾಖೆ ಶನಿವಾರ ಅಮಾನತು ಮಾಡಿದೆ.ಕಂಪೆನಿಯ ಹಣಕಾಸು ನಿರ್ದೇಶಕ ಬಿ.ಎಲ್.ಬಾಗ್ರಾ ಅವರನ್ನು ಹಂಗಾಮಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.ಇದೇ ವೇಳೆ ಶ್ರೀವಾತ್ಸವ ಹಾಗೂ ಅವರ ಪತ್ನಿಯನ್ನು ವಿಶೇಷ ನ್ಯಾಯಾಲಯ ಮಾರ್ಚ್ 3ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ. ಶ್ರೀ ವಾತ್ಸವ, ಅವರ ಪತ್ನಿ ಚಾಂದನಿ ಶ್ರೀ ವಾತ್ಸವ, ಇಬ್ಬರು ಮಧ್ಯವರ್ತಿಗಳಾದ ಭೂಷಣ್‌ಲಾಲ್ ಬಜಾಜ್ ಮತ್ತು ಅನಿತಾ ಬಜಾಜ್ ಅವರನ್ನು ತನಿಖಾ ಸಂಸ್ಥೆಯ ಅಧಿಕಾರಿಗಳು ಶುಕ್ರವಾರ ರಾತ್ರಿ ಬಂಧಿಸಿದ್ದರು.ಚಾಂದನಿ ಅವರು ಭೂಷಣ್‌ಲಾಲ್ ಅವರ ಪತ್ನಿ ಅನಿತಾ ಅವರಿಂದ ತಲಾ ಒಂದು ಕೆ.ಜಿ. ತೂಕದ ಮೂರು ಚಿನ್ನದ ಗಟ್ಟಿಗಳನ್ನು ಪಡೆದು ಬ್ಯಾಂಕ್ ಆಫ್ ಮಹಾರಾಷ್ಟ್ರದ ಲಾಕರ್‌ನಲ್ಲಿ ಇಟ್ಟ ಸ್ವಲ್ಪ ಸಮಯದಲ್ಲೇ ಅಧಿಕಾರಿಗಳು ದಾಳಿ ಮಾಡಿ ನಾಲ್ವರನ್ನೂ ವಶಕ್ಕೆ ತೆಗೆದುಕೊಂಡರು.ಮಧ್ಯಪ್ರದೇಶದ ಖಾಸಗಿ ಕಂಪೆನಿಯ ಪರವಾಗಿ ಬಜಾಜ್ ದಂಪತಿ ವ್ಯವಹಾರ ಕುದುರಿಸಿ ಚಿನ್ನದ ಗಟ್ಟಿಗಳು ಮತ್ತು ನಗದನ್ನು ನೀಡಿದ್ದರು. ಈ ವ್ಯವಹಾರದ ಸುಳಿವು ಪಡೆದ ಸಿಬಿಐ ಅಧಿಕಾರಿಗಳು ದಾಳಿಗೆ ಮುಂದಾದರು.ನಂತರ ಬ್ಯಾಂಕ್ ಲಾಕರನ್ನು ಶೋಧಿಸಿದಾಗ ಒಂದು ಕೆ.ಜಿ. ತೂಕದ ಏಳು ಚಿನ್ನದ ಗಟ್ಟಿಗಳು, 188 ಗ್ರಾಂ ತೂಕದ ಚಿನ್ನದ ಆಭರಣ ಮತ್ತು 9.5 ಲಕ್ಷ ರೂಪಾಯಿ ನಗದು ಪತ್ತೆಯಾಯಿತು.ಇದಲ್ಲದೆ ಚಾಂದನಿ ಅವರ ಕೈಚೀಲದಲ್ಲಿ 5 ಲಕ್ಷ ರೂಪಾಯಿ ಮತ್ತು ಅನಿತಾ ಬಜಾಜ್ ಅವರ ಹೆಸರಿನಲ್ಲಿರುವ ಇನ್ನೊಂದು ಬ್ಯಾಂಕ್ ಲಾಕರ್‌ನ ಕೀಲಿಕೈ ದೊರೆತಿದೆ. ಒಟ್ಟಾರೆ ಆರೋಪಿಗಳಿಂದ 2.13 ಕೋಟಿ ರೂಪಾಯಿ ಮೌಲ್ಯದ ಸುಮಾರು 10 ಕೆ.ಜಿ ಚಿನ್ನದ ಗಟ್ಟಿಗಳು ಮತ್ತು 30 ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry