ನಾಲ್ವರುಬಾಲ ಕಾರ್ಮಿಕರ ರಕ್ಷಣೆ

7

ನಾಲ್ವರುಬಾಲ ಕಾರ್ಮಿಕರ ರಕ್ಷಣೆ

Published:
Updated:

ಕೊಪ್ಪಳ: ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಜಂಟಿಯಾಗಿ  ನಗರದಲ್ಲಿ ಗುರುವಾರ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ಕು ಜನ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.ಅಲ್ಲದೇ, ಸದರಿ ಮಕ್ಕಳನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ಮುಂದೆ ಹಾಜರುಪಡಿಸಿದ ನಂತರ ಬಾಲ ಮಂದಿರಗಳಿಗೆ ಸೇರಿಸಲಾಯಿತು.ಹೊಸಪೇಟೆ ರಸ್ತೆಯಲ್ಲಿರುವ ರಿಹಾನ್ ಆಟೋ ವರ್ಕ್ಸ್‌ನಲ್ಲಿ ಅಭಿಷೇಕ ಪ್ರಕಾಶ ಸುಳ್ಳೇಶ್ವರ (13) ಎಂಬ ಬಾಲಕನನ್ನು ಪತ್ತೆ ಮಾಡಲಾಯಿತು.ನಂತರ ನಗರದ ತಹಸೀಲ್ದಾರ ಕಚೇರಿ ಸಮೀಪದಲ್ಲಿ ಡೊಂಬರಾಟದ ತಂಡದಲ್ಲಿದ್ದ ವೆಂಕಟೇಶ ಶೇಖರಾಜ ಪವಾರ (7), ಶಿಲ್ಪಾ ಯಮನಪ್ಪ ಪವಾರ (4) ಹಾಗೂ ನೀಲಾ ಶಂಕರ ಪವಾರ (12) ಎಂಬ ಮಕ್ಕಳನ್ನು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಕ್ಷೇತ್ರಾಧಿಕಾರಿ ಮಾರುತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತ ರವಿ ಪವಾರ, ಔಟ್‌ರೀಚ್ ವರ್ಕರ್ ರವಿಕುಮಾರ ಬಡಿಗೇರ  ಗುರುತಿಸಿದ್ದಾರೆ.ನಂತರ ಈ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾಜಶೇಖರ ಎಂ. ಹಾಗೂ ಇತರ ಸದಸ್ಯರ ಮುಂದೆ ಹಾಜರುಪಡಿಸಲಾಯಿತಲ್ಲದೇ, ಪುನರ್ವಸತಿಗಾಗಿ ಬಾಲಕರ ಬಾಲ ಮಂದಿರ ಹಾಗೂ ಬಾಲಕಿಯರ ಬಾಲ ಮಂದಿರಕ್ಕೆ ಸೇರಿಸಲಾಯಿತು.ಆದರೆ ಡೊಂಬರಾಟ ಆಡುವಾಗ ಸಿಕ್ಕ ಮಕ್ಕಳನ್ನು ಬಿಟ್ಟು ಹೋಗಲು ಅವರ ಪಾಲಕರು ಒಪ್ಪಲಿಲ್ಲ. ಹೀಗಾಗಿ  ಮಕ್ಕಳು ಹಾಗೂ ಪಾಲಕರನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರ ಮುಂದೆ ಹಾಜರುಪಡಿಸಲಾಯಿತು.  ಪಾಲಕ ಶೇಖರಾಜ ಪವಾರ ಅವರಿಂದ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಮದ್ದಿನೇನಿ ಅವರು, ಶೇಖರಾಜ ಅವರು ಅಂಗವಿಕಲರಾಗಿವ ಹಿನ್ನೆಲೆಯಲ್ಲಿ ಅಂಗವಿಕಲ ವೇತನ ಕೊಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಶೇಖರಾಜ ಪತ್ನಿ ಸೋನಾ ಪವಾರಗೆ ಹೈನುಗಾರಿಕೆ ಮಾಡಲು ಯೋಜನೆಯಡಿ ಹಸು ನೀಡಿ, ತರಬೇತಿ ಕೊಡಿಸಲಾಗುವುದು. ಪಾಲಕರ ಭದ್ರತೆಗೆ ಸರ್ಕಾರದಿಂದ ಲಭ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ  ಭರವಸೆ ನೀಡಿದ ನಂತರ ಮಕ್ಕಳನ್ನು ಬಾಲ ಮಂದಿರಕ್ಕೆ ಸೇರಿಸಲು ಪಾಲಕರು ಒಪ್ಪಿದರು ಎಂದು ಸಂಘದ ಮೂಲಗಳು ತಿಳಿಸಿವೆ.ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡರ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಶಾಂತ ರೆಡ್ಡಿ, ಸುಮಲತಾ ಸಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಇವೇ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry