ನಾಲ್ವರು ಸಾಧಕರಿಗೆ ಗೌರವ ಡಾಕ್ಟರೇಟ್‌

7

ನಾಲ್ವರು ಸಾಧಕರಿಗೆ ಗೌರವ ಡಾಕ್ಟರೇಟ್‌

Published:
Updated:

ತುಮಕೂರು: ತುಮಕೂರು ವಿಶ್ವವಿದ್ಯಾಲಯ ಈ ವರ್ಷ ಕೇವಲ 4 ಮಂದಿಗೆ ಮಾತ್ರ ಗೌರವ ಡಾಕ್ಟರೇಟ್‌ ನೀಡಿದೆ. ಸಮಾಜ ಸೇವೆ, ವಿಜ್ಞಾನ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದ ನಾಲ್ವರು ಸಾಧಕರು ಗೌರವ ಡಾಕ್ಟರೇಟ್‌ ಪದವಿ ಪುರಸ್ಕೃತರಾಗಿದ್ದಾರೆ.ಜಿಲ್ಲೆಯವರೇ ಆದ ಸೂಲಗಿತ್ತಿ ನರಸಮ್ಮ ಮತ್ತು ಉರ್ದು ಕವಿ ಶಾಯಿಸ್ತಾ ಯೂಸುಫ್, ಗಾಂಧಿವಾದಿ, ಮಾಜಿ ಸಚಿವ ಎಚ್.ಜಿ.­ಗೋವಿಂದೇಗೌಡ, ವೈದ್ಯ ಡಾ.ಪಿ.ಎಸ್.ಶಂಕರ್‌ ಗೌರವ ಡಾಕ್ಟರೇಟ್‌ ಪಡೆದವರು.ಕಳೆದ ವರ್ಷ 25 ಮಂದಿಗೆ ಗೌರವ ಡಾಕ್ಟ­ರೇಟ್‌ ನೀಡುವ ಮೂಲಕ ದಾಖಲೆ ಮಾಡ­ಲಾಗಿತ್ತು. ಅದರ ಹಿಂದಿನ ವರ್ಷ 12 ಮಂದಿಗೆ ನೀಡಲಾಗಿತ್ತು. ಗೌರವ ಡಾಕ್ಟರೇಟ್‌ ಪಡೆದವ­ರಲ್ಲಿ ಉದ್ಯಮಿಗಳು ಸಹ ಸೇರಿದ್ದರು. ಅಲ್ಲದೆ ಒಂದೇ ಸಮುದಾಯದವರಿಗೆ ಹೆಚ್ಚು ಗೌರವ ಡಾಕ್ಟರೇಟ್ ನೀಡಿದ ಕುಖ್ಯಾತಿಗೂ ವಿ.ವಿ. ಪಾತ್ರವಾಗಿತ್ತು.ಗೌರವ ಡಾಕ್ಟರೇಟ್ ಪಡೆದವರು

ನರಸಮ್ಮ:
ಪಾವಗಡ ತಾಲ್ಲೂಕಿನ ನರಸಮ್ಮ ಸೂಲಗಿತ್ತಿ ನರಸಮ್ಮ ಎಂದೇ ಪ್ರಸಿದ್ಧರು. ಗ್ರಾಮೀಣ ಪ್ರದೇಶದ ಸಾವಿರಾರು ಮಹಿಳೆಯರಿಗೆ ಸುಸೂತ್ರ ಹೆರಿಗೆ ಮಾಡಿಸಿ ಸಾವಿರಾರು ಮಕ್ಕಳ ತಾಯಿ ಎಂದು ಬಿರುದು ಪಡೆದವರು. 22ನೇ ವಯಸ್ಸಿನಿಂದ ಪ್ರಸೂತಿ ಮಾಡಿಸಿದ ನರಸಮ್ಮ ಅವರಿಗೆ ಈಗ 93 ವರ್ಷ. ಕೇಂದ್ರ ಸರ್ಕಾರದ ವಯೋ ಶ್ರೇಷ್ಠ ಸನ್ಮಾನ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದೇವರಾಜು ಅರಸು ಪ್ರಶಸ್ತಿ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಇಂದಿರಾ ಗಾಂಧಿ ಪ್ರಶಸ್ತಿ ಪಡೆದಿದ್ದಾರೆ.ಡಾ.ಪಿ.ಎಸ್.ಶಂಕರ್: ಹಾವೇರಿ ಜಿಲ್ಲೆಯವ­ರಾದ ಡಾ.ಪಿ.ಎಸ್.ಶಂಕರ್ ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ, ವೈದ್ಯರಾಗಿ ಕೆಲಸ ಮಾಡಿದ್ದಾರೆ. ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಅನೇಕ ಪುಸ್ತಕ ಬರೆದಿದ್ದಾರೆ. 80ರ ದಶಕದಲ್ಲಿಯೇ ಎಚ್‌ಐವಿ ಕುರಿತು ಕನ್ನಡದಲ್ಲಿ ಪುಸ್ತಕ ರಚಿಸಿದ್ದು, ವೈದ್ಯಕೀಯ ಶಾಸ್ತ್ರವನ್ನು ಜನಸಾಮಾನ್ಯರ ದೃಷ್ಟಿಕೋನದಿಂದ ಅಧ್ಯಯನ ಮಾಡಿದವರು.ಎಚ್.ಜಿ.ಗೋವಿಂದೇಗೌಡ: ಕ್ವಿಟ್‌ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದು, ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಗಾಂಧೀ­ವಾದಿ­ಯಾಗಿ, ಕಡಿದಾಳ್ ಮಂಜಪ್ಪ ಅವರಿಂದ ರಾಜಕೀಯ ದೀಕ್ಷೆ ಪಡೆದ ಗೌಡರು  ಮಲೆನಾಡ ಗಾಂಧಿ  ಎಂದು ಪ್ರಸಿದ್ಧರು. ಪ್ರಾಮಾಣಿಕ ಮತ್ತು ನಿಷ್ಕಳಂಕ ರಾಜಕಾರಣಿ. ಪ್ರಾಥಮಿಕ ಶಿಕ್ಷಣ ಸಚಿವರಾಗಿ ಉತ್ತಮ ಸಾಧನೆ ಮಾಡಿದವರು. ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಜಾರಿಗೆ ತರುವ ಮೂಲಕ ಸುಮಾರು 2 ಲಕ್ಷ  ಶಿಕ್ಷಕರನ್ನು ನೇಮಕ ಮಾಡಿದ್ದರು.  ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ಶಿಕ್ಷಣ ಸಂಸ್ಥೆಗಳನ್ನೂ ಸಮಗ್ರ ಶಿಕ್ಷಣ ಮಸೂದೆ ವ್ಯಾಪ್ತಿಗೆ ಒಳಪಡಿಸಿದ್ದರು.ಶಾಯಿಸ್ತಾ ಯೂಸುಫ್: ತುಮಕೂರಿನ ಶಾಯಿಸ್ತಾ ಯೂಸುಫ್‌ ಉರ್ದು ಕವಯತ್ರಿ. ಅಕ್ಕಮಹಾದೇವಿ ವಚನಗಳನ್ನು ಉರ್ದುವಿಗೆ ಭಾಷಾಂತರಿಸಿದ್ದಾರೆ. ತತ್ತ್ವಜ್ಞಾನ ಮತ್ತು ಉರ್ದು ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು. ಗಜಲ್, ಶಾಯರಿ ರಚನೆ ಮಾಡಿದ್ದಾರೆ. ಗುಲ್-ಇ-ಖುದ್ರು, ಸೂನಿ ಪರ್ಚಿಯನ್, ಮೊಹಮೂದ್‌ ಆಯಾಜ್ ಕೃತಿಗಳನ್ನು ಬರೆದಿದ್ದಾರೆ. ಶ್ರೇಷ್ಠ ಕತೆಗಾರ ಸಾದಾತ್ ಹಸನ್ ಮಾಂಟೋ ನಿಕಟವರ್ತಿ ಮತ್ತು ಮಾಂಟೋ ಸಾಹಿತ್ಯ ಅಧ್ಯಯನ ಮಾಡಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅನೇಕ ಮಹತ್ತ್ವದ ಕೆಲಸ ನಿರ್ವಹಿಸಿದ್ದಾರೆ. ಸೂಫಿ ಇಂಟರ್‌ ನ್ಯಾಷನಲ್ ಸಂಸ್ಥೆ ಮೂಲಕ ಜಾತ್ಯತೀತ ಪರಂಪರೆ ಎತ್ತಿ ಹಿಡಿಯುವ ಕೆಲಸದಲ್ಲಿ ತೊಡಗಿದ್ದಾರೆ. ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಪ್ರಶಸ್ತಿ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry