ಗುರುವಾರ , ಜೂನ್ 24, 2021
21 °C
ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ

ನಾಳೆಯಿಂದ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ರಾಜ್ಯದ 28 ಲೋಕ­ಸಭಾ ಕ್ಷೇತ್ರಗಳಿಗೆ ಏಪ್ರಿಲ್‌ 17ರಂದು ನಡೆಯುವ ಚುನಾವಣೆಗೆ ಬುಧವಾರ­ದಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ.ಈಗಾಗಲೇ ಪ್ರಕಟವಾಗಿರುವ ವೇಳಾ­ಪಟ್ಟಿ ಪ್ರಕಾರ ಬುಧವಾರ ಚುನಾವಣಾ ಅಧಿಸೂಚನೆ ಹೊರ­ಬೀಳಲಿದೆ. ಅಂದಿನಿಂದಲೇ ನಾಮಪತ್ರ ಸಲ್ಲಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಅನಿಲ್‌­ಕುಮಾರ್ ಝಾ ಸೋಮವಾರ ಪತ್ರಿಕಾ­ಗೋಷ್ಠಿಯಲ್ಲಿ ತಿಳಿಸಿದರು.

ಇದೇ 19ರಿಂದ 26ರವರೆಗೆ ನಾಮ­ಪತ್ರ ಸಲ್ಲಿಸಲು ಅವಕಾಶ ಇದೆ. 27ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್‌ ಪಡೆಯಲು ಮಾ.29 ಕೊನೆಯ ದಿನ.ಮತದಾನ: ಏ.17ರಂದು ಬೆಳಿಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಹಾಗೆ ಈ ಬಾರಿಯೂ ಒಟ್ಟು 11 ಗಂಟೆ ಕಾಲ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಿಂದೆಲ್ಲ ಸಂಜೆ 5ಕ್ಕೆ ಮತದಾನ ಮುಕ್ತಾಯವಾಗುತ್ತಿತ್ತು. ಆದರೆ, ಬಿಸಿಲು ಹೆಚ್ಚಾಗಿರುವ ಕಾರಣ ಮತ­ದಾನದ ಅವಧಿ ವಿಸ್ತರಿಸಬೇಕು ಎಂಬ ಬೇಡಿಕೆ ಕಳೆದ ಬಾರಿ ರಾಜಕೀಯ ಪಕ್ಷಗಳ ಕಡೆಯಿಂದ ಬಂದಿತ್ತು.ಇದಕ್ಕೆ ಸ್ಪಂದಿಸಿದ ಆಯೋಗ ಸಂಜೆ 6ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು. ಈ ಬಾರಿಯೂ ಆ ಅವಧಿಯನ್ನೇ ಉಳಿಸಿಕೊಳ್ಳಲಾಗಿದೆ.ಅಭ್ಯರ್ಥಿ ವೆಚ್ಚ ಗಣನೆಗೆ: ನಾಮಪತ್ರ ಸಲ್ಲಿಸಿದ ದಿನದಿಂದ ಅಭ್ಯರ್ಥಿಗಳು ಮಾಡುವ ವೆಚ್ಚವನ್ನು ಗಣನೆಗೆ ತೆಗೆದು­ಕೊಳ್ಳಲಾಗುತ್ತದೆ. ಅದಕ್ಕೂ ಮುಂಚೆ ಮಾಡುವ ವೆಚ್ಚ ಪಕ್ಷದ ಲೆಕ್ಕಕ್ಕೆ ಹೋಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯು ₨ 70 ಲಕ್ಷ ವೆಚ್ಚ ಮಾಡಬಹುದು ಎಂದು ವಿವರಿಸಿದರು.

13.90 ಲಕ್ಷ ಅರ್ಜಿ: ಮತದಾರರ ಪಟ್ಟಿ­ಯಲ್ಲಿ ಹೊಸ­ದಾಗಿ ಹೆಸರು ಸೇರಿಸಲು ಫೆಬ್ರುವರಿಯಿಂದ ಮಾ.16­ರವರೆಗೆ 13.90 ಲಕ್ಷ ಅರ್ಜಿಗಳು ಬಂದಿವೆ. ಈ ಪೈಕಿ 79,831 ಅರ್ಜಿ­ಗಳು ಇಂಟರ್‌ನೆಟ್‌ ಮೂಲಕ ಬಂದಿವೆ. ಬೆಂಗಳೂರಿನಲ್ಲಿ ಒಟ್ಟು 1,38,157 ಅರ್ಜಿಗಳು ಬಂದಿವೆ ಎಂದು ವಿವರಿಸಿದರು.ಭಾನುವಾರ (ಮಾ.16) ಒಂದೇ ದಿನ 2.5 ಲಕ್ಷ ಅರ್ಜಿಗಳು ಬಂದಿವೆ. ಸ್ಥಳ ಪರಿಶೀಲನೆ ನಂತರ ಅರ್ಹರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾ­ಗುತ್ತದೆ. ಇದೇ 28 ಅಥವಾ 29ರಂದು ಮತದಾರರ ಪಟ್ಟಿಯ ಅಂತಿಮ ಚಿತ್ರಣ ಸಿಗಲಿದೆ ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ನಂತರ ಗುರುತಿನ ಚೀಟಿ ನೀಡಲಾಗುವುದು ಎಂದರು.ಪರಿಶೀಲನೆ: ಚುನಾವಣೆಗೆ ನಡೆದಿರುವ ಸಿದ್ಧತೆಗಳ ಬಗ್ಗೆ ಉಪ ಮುಖ್ಯಚುನಾವಣಾ ಆಯುಕ್ತ ಅಲೋಕ್‌ ಶುಕ್ಲಾ ಅವರು ಮಂಗಳವಾರ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು. ಗೃಹ, ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು, ಚುನಾವಣಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ಸಮೀಕ್ಷೆಗಳ ಮೇಲೆ ನಿರ್ಬಂಧ ಹೇರಲು ಈಗ ಅವಕಾಶ ಇಲ್ಲ. ಆದರೆ, ಮತದಾನಕ್ಕೂ ಹಿಂದಿನ 48 ಗಂಟೆಗಳಲ್ಲಿ ಸಮೀಕ್ಷೆಗಳನ್ನು ಪ್ರಕಟಿಸಲು, ಪ್ರಸಾರ ಮಾಡುವಂತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಚಾಯ್‌ ಪೇ ಚರ್ಚಾ’ ಕಾರ್ಯಕ್ರಮ ನಡೆಸಲು ಅಡ್ಡಿಯಿಲ್ಲ. ಆದರೆ, ಇದರ ಹೆಸರಿನಲ್ಲಿ ಮತದಾ­ರರಿಗೆ ಯಾವುದೇ ಆಮಿಷ­ವೊಡ್ಡುವಂತಿಲ್ಲ. ಕಾಣಿಕೆಗಳನ್ನು ನೀಡುವಂತಿಲ್ಲ. ಟೀ ಶರ್ಟ್‌, ಗಡಿಯಾರ ಇತ್ಯಾದಿಗಳನ್ನು ಹಂಚಿಕೆ ಮಾಡುವಂತಿಲ್ಲ. ಊಟದ ವ್ಯವಸ್ಥೆ ಮಾಡಲು ಅವಕಾಶ ಇಲ್ಲ ಎಂದರು.ಪರಿಹಾರ ನೀಡಲು ಅನುಮತಿ: ಆಲಿಕಲ್ಲು ಮಳೆಯಿಂದಾಗಿ 4–5 ಜಿಲ್ಲೆಗಳಲ್ಲಿ ಜೀವ ಹಾನಿಯಾಗಿದೆ. ಜಾನುವಾರುಗಳು ಸತ್ತಿವೆ ಎಂಬ ವರದಿ ಬಂದಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು. ಬೆಳೆ ಹಾನಿ ಬಗ್ಗೆ ಸರ್ವೆ ಮಾಡಿ ಎಲ್ಲೆಲ್ಲಿ ಎಷ್ಟು ಪರಿಹಾರ ನೀಡುವ ಅಗತ್ಯವಿದೆ ಎಂಬ ಬಗ್ಗೆ ಸರ್ಕಾರದಿಂದ ವರದಿ ಬಂದಿದೆ. ಅದನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ಅನುಮತಿ ದೊರೆತ ನಂತರ ಪರಿಹಾರ ನೀಡಬಹುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.