ನಾಳೆಯಿಂದ ಬೀದಿಗಿಳಿದು ಹೋರಾಟ

7

ನಾಳೆಯಿಂದ ಬೀದಿಗಿಳಿದು ಹೋರಾಟ

Published:
Updated:
ನಾಳೆಯಿಂದ ಬೀದಿಗಿಳಿದು ಹೋರಾಟ

ಚಡಚಣ: ಕಳೆದ ಸಾಲಿನಲ್ಲಿ ಬಾಕಿ ಉಳಿಸಿಕೊಂಡ ಬಿಲ್ ಬಿಡುಗಡೆ ಮಾಡಬೇಕು ಹಾಗೂ ಪ್ರಸಕ್ತ 2011-12ನೇ ಸಾಲಿನಲ್ಲಿ ರಾಜ್ಯದ ಎಲ್ಲ ಕಾರ್ಖಾನೆಗಳು ನಿಗದಿ ಮಾಡಿದ ಬೆಲೆ ಕೊಡುವದಾಗಿ ಘೋಷಣೆ ಮಾಡುವಂತೆ ಆಗ್ರಹಿಸಿ ಸಮೀಪದ ಇಂಡಿಯನ್ ಸಕ್ಕರೆ ಕಾರ್ಖಾನೆ ಎದಿರು ಚಡಚಣ ಭಾಗದ ನೂರಾರು ರೈತರು ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ನಾಲ್ಕನೇ ದಿನವಾದ ಮಂಗಳವಾರವೂ ಮುಂದುವರಿಯಿತು.ಮಂಗಳವಾರ ಬೆಳಗ್ಗೆ ಇಂಡಿಯನ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ ನೂರಾರು ರೈತರು ಕಾರ್ಖಾನೆ ಆಡಳಿತ ಮಂಡಳಿ ತಮ್ಮ ಬೇಡಿಕೆಗೆ ಸ್ಪಂದಿಸುವಂತೆ ಆಗ್ರಹಿಸಿದರು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಸಿದ್ದಣ್ಣ ಬಿರಾದಾರ, ಕಳೆದ ಸಾಲಿನಲ್ಲಿ ಇಂಡಿಯನ್ ಶುಗರ್ ಕಾರ್ಖಾನೆ ರಾಜ್ಯದ ಎಲ್ಲ ಕಾರ್ಖಾನೆಗಳು ನೀಡುವ ಬೆಲೆಗಿಂತ 25 ರೂಪಾಯಿ ಹೆಚ್ಚಿನ ಬೇಲೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ರಾಜ್ಯದ ಬಹುತೇಕ ಎಲ್ಲ ಕಾರ್ಖಾನೆಗಳು ಕಳೆದ ಸಾಲಿನ ಕಬ್ಬಿಗೆ 2100 ರೂಪಾಯಿ ಬೆಲೆ ನೀಡಿವೆ. ಆದರೆ ಈ ಕಾರ್ಖಾನೆ ಮಾತ್ರ ಕೇವಲ ಪ್ರತಿ ಟನ್‌ಗೆ 1700 ರೂಪಾಯಿ ಬೆಲೆ ನೀಡಿ ರೈತರಿಗೆ ಅನ್ಯಾಯ ಮಾಡಿದೆ. ಬಾಕಿ ಉಳಿಸಿಕೊಂಡಿರುವ 425 ರೂಪಾಯಿ ಬಿಲ್ ತಕ್ಷಣ ಪಾವತಿಸಬೇಕು. ಕಳೆದ ಸಾಲಿನಲ್ಲಿ ಪ್ರತಿ 40 ಟನ್‌ಗೆ 5 ಸಾವಿರ ರೂಪಾಯಿಗಳಷ್ಟು ಹಿಡಿದುಕೊಂಡಿರುವ ಠೇವಣಿ ತಕ್ಷಣ ರೈತರಿಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ರೈತರೊಂದಿಗೆ ತಾವೂ ಉಗ್ರ ಹೋರಾಟಕ್ಕೆ ಬದ್ಧರಾಗಿರುವೆ ಎಂದರು.ಕಾರ್ಖಾನೆ ಆಡಳಿತ ಮಂಡಳಿ ರೈತರ ಬೇಡಿಕೆಗೆ ಸ್ಪಂದಿಸಬೇಕು. ರೈತರ ಬೇಡಿಕೆಯಂತೆ ಬಾಕಿ ಉಳಿಸಿಕೊಂಡಿರುವ 425 ರೂಪಾಯಿಗಳನ್ನು ತಕ್ಷಣ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದು ಕೂಡಲೇ ರೈತರ ಸಮಸ್ಯೆ ಇತ್ಯರ್ಥ ಪಡಿಸುವಂತೆ ಒತ್ತಾಯಿಸಿದ್ದಾಗಿ ತಿಳಿಸಿದರು.ಕಾರ್ಖಾನೆ ಆಡಳಿತ ಮಂಡಳಿಯವರು ರೈತರ ಬೇಡಿಕೆಗೆ ಸ್ಪಂದಿಸದ ಕಾರಣ ಸತ್ಯಾಗ್ರಹವನ್ನು ಬೇಡಿಕೆ ಈಡೇರುವವರೆಗೆ ಮುಂದುವರೆಸುವುದಾಗಿ ಸಿದ್ದಣ್ಣ ಬಿರಾದಾರ  ತಿಳಿಸಿದರು.  ರಸ್ತೆ ತಡೆ: ಇದೇ 3ರಿಂದ ಉಮರಾಣಿ ರಸ್ತೆ ತಡೆ ನಡೆಸಿ ಪ್ರತಿಭಟಿಸುವುದಾಗಿ ಪ್ರತಿಭಟನಾಕಾರರು ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಮಂಗಳವಾರದ ಸತ್ಯಾಗ್ರಹದಲ್ಲಿ ರೈತ ಮುಖಂಡರಾದ ಅಪ್ಪುಗೌಡ ಪಾಟೀಲ (ಗೋಳಗಿ), ತಾಲ್ಲೂಕು ಪಂಚಾಯಿತಿ ಸದಸ್ಯ ಸುರಯ್ಯಾ ಮಠಪತಿ, ಸಿದ್ದಣ್ಣ ಬಿರಾದಾರ, ಶ್ರೀಮಂತ ಉಮರಾಣಿ, ಶ್ರೀಶೈಲಗೌಡ ಬಿರಾದಾರ ,ಭಿಮರಾಯ ಲೋಣಿ, ಶಿವಾನಂದ ಭೈರಗೊಂಡ, ಶ್ರೀಶೈಲ ಡೋಣಿ, ವಿಠ್ಠಲ ವಡಗಾಂವ, ಅಶೊಕ ಬೋರಗಿ, ಸೋಮನಿಂಗ ದೇವರಾಯ, ಕಲ್ಲಪ್ಪ ಪರಗೊಂಡ, ರಾಜು ಕ್ಷತ್ರಿ, ಶ್ರೀಶೈಲ ಅಂಜುಟಗಿ, ಭೀಮರಾಯ ಖಡೆಖಡೆ, ಮಲ್ಲಯ್ಯಾ ಸ್ವಾಮಿ ಮಠಪತಿ, ರಮೇಶ ಬಿರಾದಾರ (ಹತ್ತಳ್ಳಿ) ಶ್ರೀಕಾಂತ ಉಮರಾಣಿ ಸೇರಿದಂತೆ ಉಮರಜ, ದಸೂರ, ಉಮರಾಣಿ, ಹೋಳೆ ಸಂಖ, ಹತ್ತಳ್ಳಿ, ನೀವರಗಿ, ಹಾವಿನಾಳ, ಚಡಚಣ, ದೇವರ ನಿಂಬರಗಿ ಮುಂತಾದ ಗ್ರಾಮಗಳಿಂದ ನೂರಾರು ರೈತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry