ನಾಳೆಯಿಂದ ಮದ್ದೂರು ರೇಣುಕಾದೇವಿ ಉತ್ಸವ

7

ನಾಳೆಯಿಂದ ಮದ್ದೂರು ರೇಣುಕಾದೇವಿ ಉತ್ಸವ

Published:
Updated:

ಮದ್ದೂರು: ಪಟ್ಟಣದ ಶಕ್ತಿದೇವತೆ, ರಾಜ್ಯವ್ಯಾಪಿ ಭಕ್ತ ವರ್ಗವನ್ನು ಹೊಂದಿರುವ ಶ್ರೀರೇಣುಕಾ ಎಲ್ಲಮ್ಮ ದೇವಿಯವರ 40ನೇ ವಾರ್ಷಿಕ ಜಾತ್ರಾ ಮಹೋತ್ಸವ ಫೆ.6ರಂದು ಆರಂಭವಾಗಲಿದ್ದು, ಮೂರು ದಿನಗಳ ಉತ್ಸವಕ್ಕಾಗಿ ಪಟ್ಟಣದಲ್ಲಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.



ಉತ್ಸವದ ಪ್ರಮುಖ ಆಕರ್ಷಣೆಯಾದ ದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವವು ಫೆ.7ರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ನಡೆಯಲಿದ್ದು, 8ರಂದು ಜಾತ್ರೆಗೆ ತೆರೆ ಬೀಳಲಿದೆ. ಸವದತ್ತಿ ರೇಣುಕಾದೇವಿಯಷ್ಟೇ ಪ್ರಖ್ಯಾತಿ ಇರುವ ಮದ್ದೂರಿನ ಶ್ರೀರೇಣುಕಾದೇವಿ (ಎಲ್ಲಮ್ಮತಾಯಿ) ಭಕ್ತರ ಹರಕೆ-ಅಭೀಷ್ಟೆ ಈಡೇರಿಸುವ ಶಕ್ತಿದೇವತೆಯಾಗಿ ಪ್ರಸಿದ್ಧಿ ಪಡೆದಿದ್ದಾಳೆ. ಪ್ರತಿ ವರ್ಷದ ಫೆಬ್ರವರಿ ಮಾಸದ ವ್ಯಾಸ ಪೂರ್ಣಿಮೆ ದಿನ ಈ ಜಾತ್ರಾ ಮಹೋತ್ಸವ ನಡೆಯಲಿದೆ.

ದೇಗುಲದ ಸಂಸ್ಥಾಪಕರಾದ ಹೊಳೆಬೀದಿ ಡಿ.ತಮ್ಮಯ್ಯ ಅವರ ಮಗ ಧರ್ಮದರ್ಶಿ ಟಿ.ಶ್ರೀನಿವಾಸ್, ಡಿ.ವೆಂಕಟಪ್ಪನವರ ಮಗ ಧರ್ಮದರ್ಶಿ ವಿ.ಅಂಜನಪ್ಪ ಮಹೋತ್ಸವದ ನೇತೃತ್ವ ವಹಿಸಿದ್ದಾರೆ.



ಕಿರಣ್ ಪ್ಯಾಲೇಸ್‌ನ ಟಿ.ದಾಸಪ್ಪ, ಟಿ.ವೆಂಕಟೇಶ್, ಟಿ.ಎಂ. ಕೃಷ್ಣ, ಕೆ.ದೇವರಾಜು, ಶ್ರೀನಿಧಿ ಕೃಷ್ಣಪ್ಪ, ವಿ.ವೆಂಕಟೇಶ್,  ಎಂ.ಬಿ.ಕೃಷ್ಣ, ಎಂ.ಡಿ. ಕಿರಣ್‌ಪ್ರಸಾದ್, ಕೆಸ್ತೂರು ವೆಂಕಟೇಶ್, ಎಂ.ಎಲ್. ಮಂಜು,  ಪಿ.ಸುರೇಶ್, ನಿಡಘಟ್ಟ ಎ.ನಾರಾಯಣ ಸ್ವಾಮಿ, ಎಂ.ವಿ.ಸಂತೋಷ್, ಇ.ಮಹೇಶ್, ಕಳಿಂಗ ಶ್ರೀನಿವಾಸ್ ಅವರುಗಳು ಜಾತ್ರಾ ಮಹೋತ್ಸವದ ಯಶಸ್ಸಿಗೆ ಟೊಂಕ ಕಟ್ಟಿ ದುಡಿಯುತ್ತಿದ್ದಾರೆ.



ಇದೀಗ ದೇಗುಲಕ್ಕೆ ಸುಂದರ ವಿಮಾನ ಗೋಪುರ, ದಾಸೋಹ ಭವನ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಉಳ್ಳವರು ಉದಾರ ಧನ ಸಹಾಯ ಮಾಡುವ ಮೂಲಕ ಈ ಕಾರ್ಯ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಧರ್ಮದರ್ಶಿ ಮಂಡಳಿ ಭಕ್ತ ಸಮೂಹವನ್ನು ವಿನಂತಿಸಿದೆ.



ದೇವರ ಅನುಜ್ಞೆ: ಫೆ. 6ರಂದು ಮುಂಜಾನೆ ದೇಗುಲದ ಆವರಣದಲ್ಲಿ ಮೂಲದೇವರ ಅನುಜ್ಞೆ, ಗಣಪತಿಪೂಜೆ ಹಾಗೂ ಪಾರಾಯಣ ನಡೆಯಲಿದ್ದು, ಜಾತ್ರೆಗೆ  ವಿಧ್ಯುಕ್ತ ಚಾಲನೆ ದೊರಕಲಿದೆ. ಫೆ. 7ರಂದು ಬೆಳಿಗ್ಗೆ ನವಗ್ರಹ ಹೋಮ, ಶ್ರೀ ಸುದರ್ಶನ ಮಹಾಯಾಗ, ಚಂಡಿಕಾಹೋಮ ಕೈಕಂರ್ಯಗಳು ನಡೆಯಲಿವೆ. ಅದೇ ದಿನ ಮಧ್ಯಾಹ್ನ ಶ್ರೀ ರೇಣುಕಾದೇವಿ ಸೇವಾ ಟ್ರಸ್ಟ್ ಅನ್ನಸಂತರ್ಪಣೆ  ಏರ್ಪಡಿಸಿದೆ. ಲಡ್ಡು ಪ್ರಸಾದ ವಿನಿಯೋಗ ನಡೆಯಲಿದೆ.

ಪಲ್ಲಕ್ಕಿ ಉತ್ಸವ: ಸಂಜೆ ವಿಶೇಷ ಪೂಜಾರತಿಯೊಂದಿಗೆ ಅಮ್ಮನಿಗೆ ಹೆಂಗಳೆಯರು ತಂಬಿಟ್ಟಿನ ಆರತಿ ಹರಕೆ ಸಲ್ಲಿಸುವರು. ನಂತರ ರೇಣುಕಾ ದೇವಿಯವರ ಭವ್ಯ ಮುತ್ತಿನ ಪಲ್ಲಕ್ಕಿ ಉತ್ಸವವು ಶಿಂಷಾನದಿ ಹೊಳೆ ಆಂಜನೇಯಸ್ವಾಮಿ ದೇಗುಲದಿಂದ ಆರಂಭಗೊಳ್ಳುವುದು.



ಆಂಧ್ರಪ್ರದೇಶದ ತಿರುಮಲ ದೇಗುಲ ವಿದ್ವಾನ್ ಮಂಜು ಅವರ ನಾದಸ್ವರದ ಜೊತೆಗೆ ಈ ವರ್ಷ ಕೇರಳದ ಚಂಡೆ ವಾದ್ಯ, ತಮಿಳುನಾಡಿನ ನಾಯಂಡಿ ಕುಣಿತ, ಚೌಡಿಕೆ ಪದ ಸೇರಿ ಸ್ಥಳೀಯ ಮದ್ದೂರಮ್ಮ, ದಂಡಿನ ಮಾರಮ್ಮ, ನಗರಕೆರೆ ಪಟಲದಮ್ಮ, ಚಿಕ್ಕರಸಿನಕೆರೆ ಕಾಲ ಭೈರವೇಶ್ವರಸ್ವಾಮಿ  ಪೂಜಾ ಪಟಗಳು ಭಾಗವಹಿಸಲಿವೆ. ತಾಲ್ಲೂಕಿನ ಚಿಕ್ಕರಸಿನಕೆರೆ ಪುಣ್ಯ ಕ್ಷೇತ್ರ ಕಾಲಭೈರವೇಶ್ವರ ಸ್ವಾಮಿಯ ದೇವರ ಬಸವ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.  ಮಿನಿ ದಸರಾದಂತೆ ಗೋಚರಿಸುವ ಅಮ್ಮನ ಪಲ್ಲಕ್ಕಿ ಉತ್ಸವಕ್ಕೆ ಈ ಬಾರಿ ಬಾಣ ಬಿರುಸು ಪಟಾಕಿ ಹೆಚ್ಚಿನ ಮೆರುಗು ನೀಡಲಿದೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ಸಂಚರಿಸಲಿದ್ದು, ಇಡೀ ರಾತ್ರಿ ಪೂರ್ಣ ಜನರು ಕಾದು ದೇವಿಗೆ ಪೂಜೆ ಸಲ್ಲಿಸಲಿದ್ದಾರೆ.



ಫೆ.8 ರಂದು ಸಂಜೆ ವೇದಪಾರಾಯಣದೊಂದಿಗೆ ದೇವಿಗೆ ಕ್ಷೀರಾ ಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾ ರತಿ ನಡೆಯಲಿದೆ. ಆಗಮಿಸುವ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಶ್ರೀರೇಣುಕಾ ಎಲ್ಲಮ್ಮದೇವಿ ಉತ್ಸವಕ್ಕೆ ಅಂತಿಮ ತೆರೆ ಬೀಳಲಿದೆ.

 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry