ಗುರುವಾರ , ಜೂನ್ 17, 2021
26 °C

ನಾಳೆಯಿಂದ ರಾಷ್ಟ್ರೀಯ ವಿಚಾರಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಆಶ್ರಯದಲ್ಲಿ ಭೌತಶಾಸ್ತ್ರ, ಜೀವ ರಸಾಯನಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ ಈ ಮೂರು ವಿಭಾಗಗಳಲ್ಲಿ ಮಾರ್ಚ್ ತಿಂಗಳ ಅಂತ್ಯದಲ್ಲಿ ಮೂರು ರಾಷ್ಟ್ರೀಯ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ತಿಳಿಸಿದರು.



ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೌತಶಾಸ್ತ್ರ ವಿಭಾಗದಲ್ಲಿ  ಆಶ್ರಯದಲ್ಲಿ ಸೋಮವಾರದಿಂದ `ಅಡ್ವಾನ್ಸ್ಡ್ ಫಂಕ್ಶನಲ್ ಮಟಿರೀಯಲ್ಸ್~ ವಿಷಯ ಕುರಿತು ಎರಡು ದಿನಗಳ ಕಾಲ ರಾಷ್ಟ್ರೀಯ ವಿಚಾರ ಸಂಕಿರಣ ಜರುಗಲಿದೆ.



ಸೌರಶಕ್ತಿಯಿಂದ ಈಗಾಗಲೇ ಶೇ 40ರಿಂದ 50ರಷ್ಟು ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ವಿದ್ಯುತ್ ಉತ್ಪಾದಿಸುವುದಕ್ಕಾಗಿ ಅನೇಕ ಸಂಶೋಧನೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ರಾಮನ್ ಸಭಾಂಗಣದಲ್ಲಿ ನಡೆಯಲಿರುವ ವಿಚಾರ ಸಂಕಿರಣವನ್ನು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಯ್ಯ ಉದ್ಘಾಟಿಸುವರು.



ಖ್ಯಾತ ವಿಜ್ಞಾನಿಗಳಾದ ಪ್ರೊ. ಎಸ್.ಬಿ. ಕೃಪಾನಿಧಿ, ಜಿ.ಯು. ಕುಲಕರ್ಣಿ ಪ್ರಬಂಧ ಮಂಡಿಸಲಿದ್ದಾರೆ ಎಂದರು. ಮಂಗಳವಾರ ಜರುಗಲಿರುವ ಕಾರ್ಯಕ್ರಮಕ್ಕೆ ಎಚ್. ರಾಜಾಸಾಬ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಕಲಸಚಿವ ಪ್ರೊ. ಎಸ್.ಎಲ್. ಹಿರೇಮಠ ಅಧ್ಯಕ್ಷತೆ ವಹಿಲಿದ್ದು, ಈ ವಿಚಾರ ಸಂಕಿರಣದಲ್ಲಿ ಬೇರೆ ಬೇರೆ ರಾಜ್ಯದ ಸುಮಾರು 250 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.



ಮಾ. 20ರಂದು ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ `ನ್ಯಾನೋ ಟೆಕ್ನಾಲಜಿಯಲ್ಲಿ ಇತ್ತೀಚಿನ ಬೆಳವಣಿಗೆ ಕುರಿತು ಆಯೋಜಿಸಿರುವ ವಿಚಾರ ಸಂಕಿರಣವನ್ನು ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ  ವಿಶ್ರಾಂತ ಕುಲಪತಿ ಪ್ರೊ. ಗೀತಾಬಾಲಿ ಉದ್ಘಾಟಿಸಲಿದ್ದು, ಆರ್. ಹಂಚಿನಾಳ ಆಶಯ ಭಾಷಣ ಮಾಡಲಿದ್ದಾರೆ. ಸುಮಾರು 150 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.



ಮಾ. 27ರಿಂದ 29ರವರೆಗೆ ಸೂಕ್ಷ್ಮ ಜೀವಶಾಸ್ತ್ರ ವಿಭಾಗದಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ವಿಶೇಷ ಸರಣಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಾ.ಕೆ.ವಿ. ಮಜುಂದಾರ, ಪಿ.ಎಸ್.ಆರ್. ಕೃಷ್ಣ, ಎಂ.ವಿ. ಬಡಿಗೇರ, ಡಿ. ತ್ರಿಪಾಠಿ, ಪಿ.ಎನ್. ಅನಿಲಕುಮಾರ ಮುಂತಾದವರು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದರು.



ಕೊಲರಾಡೊ ವಿಶ್ವವಿದ್ಯಾಲಯದ ಡಾ. ಕರ್ಟ್‌ಸ್ ಸುಟ್ ಅವರು ಇದೇ ಸಂದರ್ಬದಲ್ಲಿ ವಿಶ್ವವಿದ್ಯಾಲಯಕ್ಕೆ ಆಗಮಿಸಿ ವಿಶ್ವವಿದ್ಯಾಲಯಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ ಪ್ರತ್ಯೇಕ ಪ್ಲಾಂಟ್ ನಿರ್ಮಿಸಿ ಅದರ ನಿರ್ವಹಣೆ ಕುರಿತು ತಿಳಿಸಿಕೊಡಲಿದ್ದಾರೆ ಎಂದು ತಿಳಿಸಿದರು. ಪ್ರೊ. ವಿ.ಎಂ. ಜಾಲಿ, ಪ್ರೊ. ಆರ್.ಡಿ. ಮಠದ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



ಶೀಘ್ರವೇ ಹುದ್ದೆಗಳ ಭರ್ತಿ

ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 88 ಅಧ್ಯಾಪಕರ ಹುದ್ದೆಗಳ ಭರ್ತಿಗಾಗಿ ಸರ್ಕಾರದಿಂದ ಅನುಮತಿ ದೊರಕಿದ್ದು, ಈ ಕುರಿತು ಏಪ್ರಿಲ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು. ಪರಿಸರ ವಿಜ್ಞಾನ, ವುಮೆನ್ಸ್ ಸ್ಟಡೀಸ್ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಕಾಯಂ ಅಧ್ಯಾಪಕರನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.