ಗುರುವಾರ , ಮೇ 19, 2022
20 °C

ನಾಳೆಯಿಂದ ಲಾರಿ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಮರಳು ಸಾಗಣೆ ಲಾರಿಗಳ ಮಾಲೀಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅ.26ರ ಮಧ್ಯರಾತ್ರಿಯಿಂದ ರಾಜ್ಯ ವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ್‌ಗಳ ಸಂಸ್ಥೆಗಳ ಒಕ್ಕೂಟ ತಿಳಿಸಿದೆ.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ, `ರಾಜ್ಯದ 389 ಪ್ರದೇಶಗಳಲ್ಲಿ ಮರಳು ತೆಗೆಯಲು ಸರ್ಕಾರ ಅವಕಾಶ ನೀಡಿದೆ. ಆದರೆ ಮರಳು ಸಾಗಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ~ ಎಂದು ದೂರಿದರು.`ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಅ.28ರಂದು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಪಷ್ಟ ಮರಳು ಸಾಗಣೆ ನೀತಿ ಜಾರಿಗೊಳಿಸಿದ್ದರು. ಈ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುತ್ತದೆ~ ಎಂದರು.`ದಿನವೊಂದಕ್ಕೆ ಬೆಂಗಳೂರು ನಗರದಲ್ಲಿ ಮೂರು ಸಾವಿರ ಹಾಗೂ ರಾಜ್ಯದಲ್ಲಿ 15 ಸಾವಿರ ಲೋಡ್ ಮರಳು ಅಗತ್ಯವಿದೆ. ಮೆಟ್ರೊ ರೈಲು ಕಾಮಗಾರಿ, ಮೇಲು ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಮರಳು ಬೇಕಿದೆ. ಆದರೆ ಮರಳು ಸಾಗಣೆಗೆ ಲಂಚ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ವಿಫಲಗೊಂಡಿದೆ~ ಎಂದು ಆರೋಪಿಸಿದರು.`ಸರ್ಕಾರ ಮರಳು ಸಾಗಣೆಯನ್ನು ಸಕ್ರಮಗೊಳಿಸಿದ್ದರೆ ಸಾರ್ವಜನಿಕರಿಗೆ 10 ಸಾವಿರ ರೂಪಾಯಿಗೆ ಒಂದು ಲಾರಿ ಲೋಡ್ ಮರಳು ಸಿಗುತ್ತಿತ್ತು. ಆದರೆ ಸರ್ಕಾರದ ಬೇಜವಾಬ್ದಾರಿ ನೀತಿಯಿಂದಾಗಿ ಒಂದು ಲೋಡ್ ಮರಳಿಗೆ 40 ಸಾವಿರ ರೂಪಾಯಿ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಮಿಳುನಾಡು ಮಾದರಿಯಲ್ಲಿ ಮರಳು ನೀತಿ ಜಾರಿಗೊಳಿಸುವುದಾಗಿ ಸರ್ಕಾರ ಮೂರು ವರ್ಷಗಳ ಹಿಂದೆ ಭರವಸೆ ನೀಡಿತ್ತು. ಆದರೆ ಆ ಭರವಸೆ ಈವರೆಗೂ ಈಡೇರಿಲ್ಲ~ ಎಂದರು.`ರಾಜ್ಯದ ವಿವಿಧೆಡೆ ಮರಳು ಪ್ರದೇಶವಿದ್ದರೂ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಲಾಬಿಗೆ ಮಣಿದು ಸರ್ಕಾರ ಮರಳು ತೆಗೆಯಲು ಅವಕಾಶ ನೀಡುತ್ತಿಲ್ಲ. ಇದರಿಂದ ಅಕ್ರಮ ಮರಳು ಸಾಗಣೆ ದಂದೆ ಸೃಷ್ಟಿಯಾಗಿದೆ. ಆದ್ದರಿಂದ ಮರಳು ಸಾಗಣೆಗೆ ಪರವಾನಗಿ ನೀಡಬೇಕು ಮತ್ತು ಸ್ಪಷ್ಟ ಮರಳು ಸಾಗಣೆ ನೀತಿ ರೂಪಿಸಬೇಕು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಲಾರಿಗಳೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ~ ಎಂದರು. ಒಕ್ಕೂಟದ ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.