ಶನಿವಾರ, ಮೇ 8, 2021
26 °C

ನಾಳೆಯಿಂದ ಸಂಗೀತೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಗಾಯನ ಸಮಾಜ ವರ್ಷದುದ್ದಕ್ಕೂ ವಿವಿಧ ಯೋಜನೆಗಳ ಮೂಲಕ ನಾದಝರಿ ಹರಿಸುತ್ತಿದೆ. ಅಂತೆಯೇ ಜೂನ್ 9ರಿಂದ 16ರವರೆಗೆ ನಡೆಸಲಿರುವ ಯುವ ಸಂಗೀತೋತ್ಸವದಲ್ಲಿ ರಾಜ್ಯದ ಹಾಗೂ ನೆರೆಯ ರಾಜ್ಯಗಳ 40 ಉದಯೋನ್ಮುಖ ಕಲಾವಿದರು ತಮ್ಮ ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ. ಗಾಯನವಲ್ಲದೆ ವೀಣೆ, ಕೊಳಲು, ಸ್ಯಾಕ್ಸೊಫೋನ್ ವಾದ್ಯ ಕಛೇರಿಗಳೂ ನಡೆಯಲಿವೆ. ಪ್ರತಿದಿನ ಸಂಜೆ 6ರಿಂದ 8-30ರವರೆಗೆ ನಡೆಯಲಿರುವ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ.ಯುವ ಕಲಾವಿದರ ಕಿರು ಪರಿಚಯ

ಜೂನ್ 9ರಂದು ಸ್ಯಾಕ್ಸೋಫೋನ್ ನುಡಿಸಲಿರುವ ಹರೀಶ್, ವಿದ್ವಾನ್ ಎಸ್. ಮಹದೇವಪ್ಪ, ಕೆ.ಎನ್. ಕಷ್ಣಮೂರ್ತಿ, ಗಾಯತ್ರಿ ಸತ್ಯನಾರಾಯಣ ಅವರಲ್ಲಿ ಸಂಗೀತ ಕಲಿತು, ನಾಲ್ಕಾರು ಕಡೆ ನುಡಿಸಿ, ಆಕಾಶವಾಣಿ ರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವರಲ್ಲದೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ. ಇವರೊಂದಿಗೆ ಪಕ್ಕವಾದ್ಯಗಳಲ್ಲಿ ಮೃದಂಗ- ಡಿ.ಆರ್. ಚೇತನ್‌ಕುಮಾರ್ ಮತ್ತು ಮೋರ್ಚಿಂಗ್- ಚಿದಾನಂದ.ಜೂನ್ 10, ಸೋಮವಾರ ಗಾಯನ ಕಛೇರಿ ಮಾಡಲಿರುವ ಸ್ವಾತಿ ಶ್ರೀನಾಥ್ ಅವರು ಶ್ರೀವಿದ್ಯಾ ರಾಮನಾಥ್ ಹಾಗೂ ಎಚ್.ಎಸ್. ಸುಧೀಂದ್ರ ಅವರ ಶಿಷ್ಯೆ. ಸೀನಿಯರ್ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಗಳಿಸಿರುವರಲ್ಲದೆ ಶಿಷ್ಯವೇತನವನ್ನೂ ಪಡೆದಿದ್ದಾರೆ. ಈ ಕಛೇರಿಯಲ್ಲಿ ಇವರಿಗೆ ಪಕ್ಕವಾದ್ಯ: ಪಿಟೀಲು- ಎಸ್. ಸುಘೋಷ್ ಪವನ್, ಮೃದಂಗ- ಫಣೀಂದ್ರ ಭಾಸ್ಕರ್, ಘಟ- ಬಿ.ಎಸ್. ರಘುನಂದನ್.ಜೂನ್ 11ರಂದು ಹಾಡುಗಾರಿಕೆ ಪ್ರಸ್ತುತ ಪಡಿಸಲಿರುವ ಉಮಾಕುಮಾರ್ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆ. ನಾಗಮಣಿ ಶ್ರೀನಾಥ್ ಅವರ ಶಿಷ್ಯೆಯಲ್ಲದೆ ಮಹತಿ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕಿ. ಅನೇಕ ಬಹುಮಾನಗಳ ವಿಜೇತೆ. ಬಾನುಲಿಯಲ್ಲೂ ಹಾಡುತ್ತಿದ್ದಾರೆ. ಕಾರ್ಯಕ್ರಮದ ಪಕ್ಕವಾದ್ಯ: ಪಿಟೀಲು- ಸಿಂಧು ಸುಚೇತನ್, ಮೃದಂಗ- ಎಸ್. ಅನಿರುದ್ಧ ಭಟ್ ಮತ್ತು ಮೋರ್ಚಿಂಗ್- ಜಿ. ಲಕ್ಷ್ಮೀನಾರಾಯಣ.ಜೂನ್ 12, ಬುಧವಾರ ಕೊಳಲು ನುಡಿಸಲಿರುವ ವಾರಿಜಾಶ್ರೀ ಗಾಯನ-ಕೊಳಲು ಎರಡನ್ನೂ ಅಭ್ಯಾಸ ಮಾಡಿದ್ದಾರೆ. ತಂದೆ ಎಚ್.ಎಸ್. ವೇಣುಗೋಪಾಲ್, ಎಚ್. ಗೀತಾ, ಸೇಲಂ ಪಿ. ಸುಂದರೇಶನ್ ಮುಂತಾದವರಲ್ಲಿ ಕಲಿತು ರಾಜ್ಯದ ಒಳ ಹೊರಗೆ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸಂಗೀತದ ವಿವಿಧ ಮಾಧ್ಯಮಗಳಲ್ಲಿ ದನಿಗೂಡಿಸಿದ್ದಾರೆ. ಕಛೇರಿಯಲ್ಲಿ ಪಕ್ಕವಾದ್ಯ: ಪಿಟೀಲು- ವಿಠಲರಂಗನ್, ಮೃದಂಗ- ಆನೂರು ವಿನೋದ್ ಶರ್ಮ ಮತ್ತು ಖಂಜರಿ- ಆರ್. ಕಾರ್ತೀಕ್.ಜೂನ್ 13ಗಾಯನ ಕಛೇರಿ ಮಾಡಲಿರುವ ಬಿ.ಎಂ. ಅರ್ಜುನ್ ಶ್ರೀವಾತ್ಸವ್ ಅವರು ಸುಧಾ ವಿ. ಮೂರ್ತಿ ಅವರಲ್ಲಿ ಪ್ರಾರಂಭಿಸಿ, ಎಸ್. ಶಂಕರ್, ಸೇತುಮಾಧವನ್, ವಿ.ಆರ್. ಚಂದ್ರಶೇಖರ್ ಅವರಲ್ಲಿ ಅಭ್ಯಸಿಸಿ ಹಾಡುಗಾರಿಕೆ ಮತ್ತು ಮೃದಂಗಗಳೆರಡರಲ್ಲೂ ಸಾಧನೆ ಮಾಡುತ್ತಿದ್ದಾರೆ. ಪಕ್ಕವಾದ್ಯ: ಪಿಟೀಲು- ಆನಂದ್ ವಿಶ್ವನಾಥನ್, ಮೃದಂಗ- ವಿನಯ ನಾಗರಾಜನ್ ಮತ್ತು ಖಂಜರಿ- ಬಿ.ಜೆ. ಕಿರಣಕುಮಾರ್.ಜೂನ್ 16ರಂದು ಕೇಳುಗರಿಗೆ ಈಗಾಗಲೇ ಪರಿಚಿತರಾಗುತ್ತಿರುವ ಯುವ ಕಲಾವಿದೆ ಪ್ರಿಯಾಂಕ ಸಿ. ಪ್ರಕಾಶ್ ಅವರ ಕಛೇರಿ ಇದೆ. ನೀಲಾ ರಾಂಗೋಪಾಲ್ ಶಿಷ್ಯೆ ಇವರು. ರಾಜ್ಯ ಹಾಗೂ ವಿದೇಶಗಳಲ್ಲೂ ಹಾಡಿರುವ ಈ ಗಾಯಕಿ ಉತ್ತಮ ವಾಗ್ಮಿ ಹಾಗೂ ಬರಹಗಾರ್ತಿ. ಪ್ರತಿಷ್ಠಿತ ಸಭೆಗಳಿಂದ ಬಹುಮಾನ ವಿಜೇತೆ. ಇವರೊಂದಿಗೆ ಪಿಟೀಲು- ಎಂ.ಪಿ. ಆದಿತ್ಯ, ಮೃದಂಗ- ಸುನೀಲ್ ಸುಬ್ರಹ್ಮಣ್ಯ, ಮೋರ್ಚಿಂಗ್- ಎನ್. ಅಮೃತ ಕುಮಾರ್.

ಜೂನ್ 15ರ ಶನಿವಾರ ವೀಣಾವಾದಕಿ ಎಂ.ಬಿ. ರಮ್ಯ ಬರುವ ವೀಣೆ ನುಡಿಸಲಿದ್ದಾರೆ. ಅವರು ಪದ್ಮಾವತಿ ಅನಂತಗೋಪಾಲನ್ ಅವರಲ್ಲಿ ಕಲಿತು, ಕೇಂದ್ರ ಸರ್ಕಾರದ ಶಿಷ್ಯ ವೇತನವನ್ನೂ ಪಡೆದು, ಸಾಧನೆ ಮುಂದುವರಿಸಿದ್ದಾರೆ. ಹಾಡುಗಾರಿಕೆಯನ್ನೂ ಅಭ್ಯಾಸ ಮಾಡಿದ್ದಾರೆ.ಜೂನ್ 16ರಂದು ಯುವ ಸಂಗೀತೋತ್ಸವದ ಸಮಾರೋಪ ಕಛೇರಿ. ಅಂದು ಕಛೇರಿ ಮಾಡಲಿರುವ ಋತ್ವಿಕ್ ರಾಜಾ, ಟಿ.ಎಂ.ಕೃಷ್ಣ ಅವರ ಶಿಷ್ಯ. ಅನೇಕ ಕಡೆ ಹಾಡಿರುವ ಋತ್ವಿಕ್ ಮ್ಯೂಸಿಕ್ ಅಕಾಡೆಮಿ ಸೇರಿದಂತೆ ಅನೇಕ ಸಭೆಗಳಿಂದ ಬಹುಮಾನ ಗಳಿಸಿದ್ದಾರೆ. `ಸ್ವಾನುಭವ' ಉತ್ಸವದ ನೇತಾರ.

ಒಟ್ಟಿನಲ್ಲಿ ಕರ್ನಾಟಕ ಸಂಗೀತದ ಪ್ರತಿಭಾನ್ವೇಷಣೆಯಂತಿರುವ `ಯುವ ಸಂಗೀತೋತ್ಸವ' ಸಂಗೀತದ ನಾಳೆಗಳ ದಿಕ್ಸೂಚಿ ಆಗಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.