ಮಂಗಳವಾರ, ಮೇ 11, 2021
25 °C
ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಬದಲಾವಣೆ

ನಾಳೆಯಿಂದ ಸಹಾಯವಾಣಿ ಕೇಂದ್ರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದ ಜವಹಾರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 5ರಿಂದ 23ರ ವರೆಗೆ (ಜೆಎನ್‌ಎನ್‌ಸಿಇ) ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಪ್ರಮಾಣಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ ಎಂದು ಸಿಇಟಿ ಮುಖ್ಯ ನೋಡೆಲ್ ಅಧಿಕಾರಿ ಡಾ.ನಾಗಮಣಿ ಹೇಳಿದರು.ಶಿವಮೊಗ್ಗ ವಿಭಾಗದ ಸಹಾಯವಾಣಿ ಕೇಂದ್ರದಲ್ಲಿ ಶಿವಮೊಗ್ಗ, ಹಾವೇರಿ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಿ ತಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಪೂರ್ಣಗೊಂಡ ನಂತರ ರಹಸ್ಯ ಕೋಡ್ ಸಂಖ್ಯೆ ನೀಡಲಾಗುವುದು. ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಈ ರಹಸ್ಯ ಕೋಡ್ ಸಂಖ್ಯೆ ಬಳಸಿ ಆನ್‌ಲೈನ್ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು ಎಂದರು. ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ

ಪ್ರಸಕ್ತ ವರ್ಷ ಸಿಇಟಿ ಆನ್‌ಲೈನ್ ಕೌನ್ಸೆಲಿಂಗ್‌ನಲ್ಲಿ ವ್ಯವಸ್ಥೆ ಬದಲಾಗಿದೆ. ಒಬ್ಬ ಅಭ್ಯರ್ಥಿಗೆ ಒಮ್ಮೆ ಮಾತ್ರ ತಮ್ಮ ಅಯ್ಕೆ ನಮೂದಿಸಬಹುದು. ಒಮ್ಮೆ ಆಯ್ಕೆ ಪ್ರಕ್ರಿಯೆ ಮಾಡಿದ ನಂತರ ಹೊಸ ಆಯ್ಕೆಗಳನ್ನು ನಮೂದಿಸಲು ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಆದರೆ, ಕಾಲೇಜು ಹಾಗೂ ಕೋರ್ಸ್‌ಗಳಿಗೆ ನೀಡಿದ ಆದ್ಯತೆಗಳನ್ನು ಪರಿಷ್ಕರಿಸಲು ಮಾತ್ರ ಅವಕಾಶ ಇರುತ್ತದೆ ಎಂದು ಹೇಳಿದರು.ಒದಗಿಸಬೇಕಾದ ದಾಖಲೆಗಳು

ಅಭ್ಯರ್ಥಿಗಳು ತಾವು ಅರ್ಜಿಯಲ್ಲಿ ನಮೂದಿಸಿದ ಮೀಸಲಾತಿ ದಾಖಲೆಗಳಾದ ಜಾತಿ ಮತ್ತು ಆದಾಯ ಪ್ರಮಾಣಪತ್ರ, ಅಂಕಪಟ್ಟಿಗಳು, ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರಗಳನ್ನು ತರಬೇಕು. ಮೂಲ ಪ್ರತಿಗಳ ಜತೆಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ಎರಡು ನಕಲು ಪ್ರತಿಗಳನ್ನು ತರಬೇಕು. ವಿದ್ಯಾರ್ಥಿಗಳು ಸಹಾಯವಾಣಿ ಕೇಂದ್ರದ ಮಾಹಿತಿಗೆ ದೂ. 08182-295456 ಸಂಪರ್ಕಿಸಬಹುದು ಎಂದು ತಿಳಿಸಿದರು. ಜೆಎನ್‌ಎನ್‌ಸಿಇ ಕಾಲೇಜು ಪ್ರಾಂಶುಪಾಲ ಡಾ.ಆರ್.ಶ್ರೀನಿವಾಸರಾವ್ ಕುಂಠೆ ಮಾತನಾಡಿ, ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಕಾಲೇಜಿನಿಂದ ಅಗತ್ಯ ಸ್ಥಳಾವಕಾಶ, ಕಂಪ್ಯೂಟರ್‌ಗಳು ಹಾಗೂ ಅಗತ್ಯ ಸಹಾಯಕ ಸಿಬ್ಬಂದಿ ನೆರವು ನೀಡಲಾಗುವುದು ಎಂದರು.ಸಹಾಯವಾಣಿ ಕೇಂದ್ರಕ್ಕೆ ಬಸ್ ವ್ಯವಸ್ಥೆ

ಸಹಾಯವಾಣಿ ಕೇಂದ್ರಕ್ಕೆ ದಾಖಲಾತಿಗಳ ಪರಿಶೀಲನೆಗೆ ಬೇರೆ-ಬೇರೆ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕೆ ನಗರದ ಮಹಾವೀರ ವೃತ್ತದಿಂದ ದಾಖಲೆ ಪ್ರತಿದಿನ ಬೆಳಿಗ್ಗೆ 7.30 ಕ್ಕೆ, 11.15 ಕ್ಕೆ ಮತ್ತು ಮಧ್ಯಾಹ್ನ 1ಕ್ಕೆ ಹಾಗೂ 3.15ಕ್ಕೆ ಕಾಲೇಜು ಬಸ್ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಿ.ಕೆ.ನಾಗರಾಜ್, ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್. ವಿ.ತಿಮ್ಮಯ್ಯ, ಸಹಾಯವಾಣಿ ಕೇಂದ್ರದ ಹೆಚ್ಚುವರಿ ನೋಡಲ್ ಅಧಿಕಾರಿ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.