ನಾಳೆ ಕಡಲೆಕಾಯಿ ಪರಿಷೆ

7

ನಾಳೆ ಕಡಲೆಕಾಯಿ ಪರಿಷೆ

Published:
Updated:
ನಾಳೆ ಕಡಲೆಕಾಯಿ ಪರಿಷೆ

ನೆಲಮಂಗಲದ ಸೊಂಡೆಕೊಪ್ಪ ರಸ್ತೆಯಲ್ಲಿರುವ ಬಯಲು ಉದ್ಭವ ಗಣಪತಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ಇದೇ ಶುಕ್ರವಾರ (ಡಿ. 28) ಮಧ್ಯಾಹ್ನ 12.30ರಿಂದ ನಡೆಯಲಿದೆ. ಇಂದಿನಿಂದಲೇ (ಗುರುವಾರ) ಧಾರ್ಮಿಕ ವಿಧಿ ವಿಧಾನಗಳು ವಿನಾಯಕ ಸ್ವಾಮಿಯ ಕಲ್ಯಾಣೋತ್ಸವದೊಂದಿಗೆ ಪ್ರಾರಂಭವಾಗಲಿವೆ.ಗಣೇಶನ ದೇವಸ್ಥಾನ ಇರುವ ಸ್ಥಳ ಬೆಟ್ಟಗುಡ್ಡಗಳಿಂದ ಕೂಡಿತ್ತು. ಅಲ್ಲಿಗೆ ನೆಲಮಂಗಲ ಸುತ್ತಮುತ್ತಲ ಗ್ರಾಮಸ್ಥರು ದನ, ಕುರಿಗಳನ್ನು ಮೇಯಿಸಲು ಹೋಗುತ್ತಿದ್ದರು. ಅಲ್ಲೇ ಒಂದು ಬಂಡೆಯ ಹತ್ತಿರ ನಾಗರ ಹಾವೊಂದು ಸುಳಿದಾಡುವುದನ್ನು ದನ ಮೇಯಿಸುತ್ತಿದ್ದ ಹುಡುಗರು ಕಂಡರು.

ಪ್ರತಿ ನಿತ್ಯವೂ ಹಾವು ಅಲ್ಲೆ ಸುಳಿದಾಡುತ್ತಿದ್ದುದನ್ನು ಕಂಡ ಹುಡುಗರು ಅಲ್ಲೇನೊ ಇರಬಹುದು ಎಂದು ಕುತೂಹಲದಿಂದ ಬೇಲಿಯ ಗಿಡಗಂಟಿಗಳು ಮುಚ್ಚಿಕೊಂಡಿದ್ದ ಹಳ್ಳದಲ್ಲಿ ನೋಡಿದಾಗ ಗಣೇಶನ ಆಕೃತಿ ಇರುವ ಬಂಡೆ ಕಂಡರು. ಇದನ್ನು ಊರ ಹಿರಿಯರಿಗೆ ತಿಳಿಸಿದರು.

ಹಿರಿಯರು ಹುಡುಗರ ಮಾತನ್ನು ನಂಬದೆ ತಮಾಷೆ ಮಾಡುತ್ತಿರಬಹುದು ಎಂದು ಸುಮ್ಮನಾದರು. ಆದರೆ ಹುಡುಗರು ಗಣೇಶನ ಆಕೃತಿ ಇರುವ ಬಂಡೆಯ ಸುತ್ತಮುತ್ತ ಇದ್ದ ಗಿಡ ಗಂಟೆಗಳನ್ನು ತೆಗೆದು ಸ್ವಚ್ಛಗೊಳಿಸಿ ದಿನವೂ ಜಾನುವಾರುಗಳನ್ನು ಮೇಯಿಸಲು ಬಂದಾಗ ಪೂಜಿಸಲು ಪ್ರಾರಂಭಿಸಿದರು. ದಿನ ಕಳೆದಂತೆ ಗಣೇಶನ ಆಕೃತಿ ಇರುವ ಬಂಡೆ ದೊಡ್ಡದಾಗುತ್ತ ಬಂತು. ಇದನ್ನು ಕಂಡ ಊರಿನ ಹಿರಿಯರು ಸಣ್ಣ ಗುಡಿ ಕಟ್ಟಿದರು. ದಿನ ಕಳೆದಂತೆ ನೆಲಮಂಗಲ ಸುತ್ತಮುತ್ತಲ ಗ್ರಾಮಸ್ಥರ ಪೂಜಿಸುವ ಬಯಲು ಉದ್ಭವ ಗಣೇಶನಾದ ಎಂಬುದು ಪ್ರತೀತಿ.ಹಿರಿಯರು ವರ್ಷಕ್ಕೊಮ್ಮೆ ರಥೋತ್ಸವ ಮತ್ತು ಜಾತ್ರೆಯನ್ನು ಆಚರಿಸಲು ಪ್ರಾರಂಭಿಸಿದರು. ಈ ಭಾಗದ ರೈತರು ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ರಥೋತ್ಸವದಂದು ತಾವು ಬೆಳೆದ ಕಡಲೆಕಾಯಿ ಫಸಲಿನ ಒಂದು ಭಾಗವನ್ನು ಉಚಿತವಾಗಿ ಭಕ್ತಾದಿಗಳಿಗೆ ಹಂಚಲು ಪ್ರಾರಂಭಿಸಿದರು. ಬಸವನಗುಡಿಯ ಕಡಲೆಕಾಯಿ ಪರಿಷೆ ಮಾದರಿಯಲ್ಲೆ ಉದ್ಭವ ಗಣಪತಿಯ ಕಡಲೆ ಕಾಯಿ ಪರಿಷೆ ಎಂದು ನಾಮಕರಣ ಮಾಡಿದರು.ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ಸಾವಿರಾರು ಭಕ್ತ ಸಮ್ಮುಖದಲ್ಲಿ ನಡೆಯುತ್ತದೆ. ಜನಪದ ಕಲಾ ತಂಡಗಳ ಪ್ರದರ್ಶನ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry