ನಾಳೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

7

ನಾಳೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

Published:
Updated:

ಬೆಂಗಳೂರು: `ಆರನೇ ವೇತನ ಸಮಿತಿ ಶಿಫಾರಸುಗಳಲ್ಲಿ ಸರ್ಕಾರಿ ನೌಕರರಿಗೆ ಅನ್ಯಾಯವಾಗಿದೆ. ಇದನ್ನು ವಿರೋಧಿಸಿ ಶುಕ್ರವಾರ ಕಪ್ಪು ಪಟ್ಟಿ ಧರಿಸಿ  ಕಾರ್ಯ ನಿರ್ವಹಿಸಲಾಗುವುದು.  ಮಧ್ಯಾಹ್ನ 1.30ಕ್ಕೆ ಬಹುಮಹಡಿ ಕಟ್ಟಡದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ~ ಎಂದು ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಮಹದೇವಯ್ಯ ಮಠಪತಿ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯ ಸರ್ಕಾರಿ ನೌಕರರು ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರಿ  ನೌಕರರ ಮತ್ತು ಇತರೆ ನೆರ ರಾಜ್ಯಗಳ ನೌಕರರಂತೆ ಸಮಾನ ವೇತನವನ್ನು ನೀಡುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರಿ ನೌಕರರ 5 ನೇ ಮತ್ತು 6ನೇ ವೇತನ ಪರಿಷ್ಕರಣೆಗಳ ನಂತರ ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳಲ್ಲಿ ಅಗಾಧವಾದ ವ್ಯತ್ಯಾಸ ಉಂಟಾಗಿದೆ~ ಎಂದರು.`6ನೇ ವೇತನ ಸಮಿತಿಯ ಶಿಫಾರಸುಗಳು ಸರ್ಕಾರಿ ನೌಕರರಿಗೆ ಬಂಪರ್ ಲಾಭ ತಂದಿವೆ ಎಂಬುದು ಸುಳ್ಳಿನ ಕಂತೆಯಾಗಿದೆ. ಈಗ ಸರ್ಕಾರದ ಅಧಿಕಾರಿ ವೇತನ ಸಮಿತಿಯ ಶಿಫಾರಸಿನನ್ವಯ ರಾಜ್ಯ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ 9600 ರೂಪಾಯಿಯೆಂದು ನಿಗದಿಪಡಿಸಿದೆ. ಈ ಮೂಲ ವೇತನ ನಿಗದಿಪಡಿಸಲು ಇಲ್ಲಿಯವರೆಗಿನ ತುಟ್ಟಿ ಭತ್ಯೆಯನ್ನು ಪೂರ್ಣವಾಗಿ ವಿಲೀನಗೊಳಿಸಲಾಗಿದೆ.ಜತೆಗೆ ಈಗಾಗಲೇ ಪಡೆಯುತ್ತಿದ್ದ ಶೇ 15 ರ ಮಧ್ಯಂತರ ಪರಿಹಾರವನ್ನು ಕಳೆದರೆ ವೇತನ ಪರಿಷ್ಕರಣೆಯಿಂದ ವಾಸ್ತವ ವೇತನದಲ್ಲಿ ಕೇವಲ 400 ರೂಪಾಯಿ ಮಾತ್ರ ಹೆಚ್ಚಳವಾದಂತಾಗಿದೆ~ ಎಂದು ಅವರು ವಿವರಿಸಿದರು.`2010ರ ಏಪ್ರಿಲ್‌ನಿಂದಲೇ ಮೂಲವೇತನವನ್ನು ಕಾಲ್ಪನಿಕವಾಗಿ ನಿಗದಿಗೊಳಿಸಿ, 2011ರ ಏಪ್ರಿಲ್‌ನಿಂದ ವೇತನ ಬಾಕಿ ನೀಡಬೇಕು. ಎಲ್ಲ ವಿಶೇಷ ಭತ್ಯೆಗಳನ್ನು ಕನಿಷ್ಠ ರೂ 500 ಕಡಿಮೆ ಇಲ್ಲದಂತೆ ದ್ವಿಗುಣಗೊಳಿಸಬೇಕು~ ಎಂದು ಒತ್ತಾಯಿಸಿದರು.ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಸಿ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಜಿ.ಶ್ಯಾಮಲ, ಖಜಾಂಚಿ ಎ.ಟಿ.ಶ್ರೀನಿವಾಸ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry