ನಾಳೆ ಕಾಮೆಡ್-ಕೆ ಪರೀಕ್ಷೆ; ಅನ್ಯರ ಪ್ರಾಬಲ್ಯ

7

ನಾಳೆ ಕಾಮೆಡ್-ಕೆ ಪರೀಕ್ಷೆ; ಅನ್ಯರ ಪ್ರಾಬಲ್ಯ

Published:
Updated:

ಬೆಂಗಳೂರು: ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳ (ಕಾಮೆಡ್-ಕೆ) ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಇದೇ 12ರಂದು ನಡೆಯುವ ಪರೀಕ್ಷೆಗೆ 18,418 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಇವರಲ್ಲಿ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆ 4,500 ಮಾತ್ರ. 14 ಸಾವಿರ ವಿದ್ಯಾರ್ಥಿಗಳು ಹೊರ ರಾಜ್ಯದವರು. 12,909 ವಿದ್ಯಾರ್ಥಿಗಳು ವೈದ್ಯಕೀಯ ಮತ್ತು 5,509 ವಿದ್ಯಾರ್ಥಿಗಳು ದಂತವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಬಯಸಿ ಪರೀಕ್ಷೆ ಬರೆಯಲಿದ್ದಾರೆ. ಭಾನುವಾರ ಮಧ್ಯಾಹ್ನ 2.30ರಿಂದ ಸಂಜೆ 5.30ರ ವರೆಗೆ ಪರೀಕ್ಷೆ ನಡೆಯಲಿದೆ. ಸರಿ ಉತ್ತರಗಳು ಕಾಮೆಡ್-ಕೆ ವೆಬ್‌ಸೈಟ್‌ನಲ್ಲಿ ಅದೇ ದಿನ ರಾತ್ರಿ 8.30ರ ವೇಳೆಗೆ ದೊರೆಯಲಿವೆ. ಇದೇ 29ರಂದು ರ‌್ಯಾಂಕ್ ಪಟ್ಟಿ ಪ್ರಕಟವಾಗಲಿದೆ.ಈ ಕುರಿತು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ `ಕಾಮೆಡ್-ಕೆ~ ಮುಖ್ಯ ಕಾರ್ಯನಿರ್ವಾಹಕ ಎ.ಎಸ್. ಶ್ರೀಕಾಂತ್ ಅವರು, `ಸರಿ ಉತ್ತರಗಳಿಗೆ ಆಕ್ಷೇಪಗಳಿದ್ದಲ್ಲಿ, ಅದನ್ನು ಇದೇ 16ರ ಒಳಗೆ ಸಲ್ಲಿಸಬೇಕು. ಬೆಂಗಳೂರಿನ 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ~ ಎಂದರು.`ಬಿಗಿ ಕ್ರಮ~: ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದವರ ನೋಂದಣಿ ಪತ್ರವನ್ನು ರದ್ದು ಮಾಡುವಂತೆ ಕೋರಿ ಭಾರತೀಯ ವೈದ್ಯಕೀಯ ಮಂಡಳಿಗೆ ಪತ್ರ ಬರೆಯಲಾಗುವುದು.ಅಂಥ ವಿದ್ಯಾರ್ಥಿಗಳ ಭಾವಚಿತ್ರವನ್ನು ಕಾಮೆಡ್-ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ, ಮುಂದೆ ಅವರಿಗೆ ಯಾವುದೇ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡದಂತೆ ಕೋರಿ ಎಲ್ಲ ಪರೀಕ್ಷಾ ಪ್ರಾಧಿಕಾರಗಳಿಗೆ ಪತ್ರ ಬರೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.ಪರೀಕ್ಷಾ ಅಕ್ರಮಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕರ್ನಾಟಕದಲ್ಲಿ ಸೂಕ್ತ ಕಾನೂನು ಇಲ್ಲ. ಆದರೆ ಹಿಮಾಚಲ ಪ್ರದೇಶದಲ್ಲಿ ಈ ಕುರಿತು ಪ್ರತ್ಯೇಕ ಕಾಯ್ದೆ ಜಾರಿಗೆ ತರಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್. ಪ್ರಭುದೇವ್ ಇತ್ತೀಚೆಗೆ 94 ಬಗೆಯ ಪರೀಕ್ಷಾ ಅಕ್ರಮಗಳ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry