ನಾಳೆ ಕಿವೀಸ್- ಆಸೀಸ್ ಹಣಾಹಣಿ

7

ನಾಳೆ ಕಿವೀಸ್- ಆಸೀಸ್ ಹಣಾಹಣಿ

Published:
Updated:

ನಾಗಪುರ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಪರಸ್ಪರ ಪೈಪೋಟಿ ನಡೆಸಲು ಸಜ್ಜಾಗಿ ನಿಂತಿವೆ. ಜಾಮ್ತಾದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ‘ಎ’ ಗುಂಪಿನ ಪಂದ್ಯದಲ್ಲಿ ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಡೇನಿಯಲ್ ವೆಟೋರಿ ಬಳಗದ ಸವಾಲನ್ನು ಎದುರಿಸಲಿದೆ.ಅತ್ತ ತವರಿನಲ್ಲಿ ನಡೆದ ದುರಂತದ ಆಘಾತದಿಂದ ನ್ಯೂಜಿಲೆಂಡ್ ಆಟಗಾರರು ಹೊರಬಂದಿದ್ದಾರೆ. ಚೆನ್ನೈನಿಂದ ಮುಂಬೈ ಮಾರ್ಗವಾಗಿ ಬುಧವಾರ ಸಂಜೆ ನಾಗಪುರಕ್ಕೆ ಆಗಮಿಸಿದ ಕಿವೀಸ್ ಆಟಗಾರರ ‘ಬಾಡಿ ಲ್ಯಾಂಗ್ವೇಜ್’ ಎಲ್ಲವನ್ನೂ ಹೇಳುತಿತ್ತು. ಮುಂಬೈ- ನಾಗಪುರ ಪ್ರಯಾಣದ ವೇಳೆ ಕಿವೀಸ್ ಆಟಗಾರರು ವಿಮಾನದಲ್ಲಿ ತಮಾಷೆಯಲ್ಲೇ ಕಾಲ ಕಳೆದರು. ಬ್ರೆಂಡನ್ ಮೆಕ್ಲಮ್, ಟಿಮ್ ಸೌಥಿ ಹಾಗೂ ಸ್ಕಾಟ್ ಸ್ಟೈರಿಸ್ ಅವರಂತೂ ರಿಲ್ಯಾಕ್ಸ್ ಆಗಿದ್ದರು.ಮಂಗಳವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಭೂಕಂಪದಲ್ಲಿ ಹಲವರು ಬಲಿಯಾಗಿದ್ದರು. ಇದು ಕಿವೀಸ್ ಬಳಗದಲ್ಲಿ ಅಲ್ಪ ಆತಂಕ ಉಂಟುಮಾಡಿತ್ತು. ಆದರೆ ಆಟಗಾರರ ಹತ್ತಿರದ ಸಂಬಂಧಿಕರು ಮತ್ತು ಗೆಳೆಯರು ಭೂಕಂಪದಿಂದ ತೊಂದರೆ ಎದುರಿಸಿಲ್ಲ. ಇದರಿಂದ ಈ ಕಹಿ ಘಟನೆ ತಂಡದ ಪ್ರದರ್ಶನದ ಮೇಲೆ ಯಾವುದೇ ಪರಿಣಾಮ ಬೀರದು.ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡವೂ ಬುಧವಾರ ಸಂಜೆ ‘ಕಿತ್ತಳೆ ನಗರಿ’ಗೆ ಆಗಮಿಸಿತು. ಎರಡು ಬಲಿಷ್ಠ ತಂಡಗಳ ನಡುವಿನ ಪೈಪೋಟಿಯನ್ನು ನೋಡಲು ನಾಗಪುರದ ಜನರು ಉತ್ಸುಕರಾಗಿದ್ದಾರೆ. ಜೊತೆಗೆ ಉಭಯ ತಂಡಗಳ ಅಭಿಮಾನಿಗಳು ಸಹಸ್ರಾರು ಕಿ.ಮೀ. ದೂರದಿಂದ ಆಗಮಿಸಿದ್ದಾರೆ. ಅಹಮದಾಬಾದ್‌ನಲ್ಲಿ ಕೀನ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಬೆಂಬಲ ನೀಡಲು ಹಲವು ಅಭಿಮಾನಿಗಳು ಇದ್ದರು. ಈ ‘ಅಭಿಮಾನಿಗಳ ದಂಡು’ ಇದೀಗ ನಾಗಪುರಕ್ಕೆ ಬಂದಿಳಿದಿದೆ.ನಾಲ್ಕು ಬಾರಿಯ ಚಾಂಪಿಯನ್ ಆಸೀಸ್ ತಂಡ ಮೊದಲ ಪಂದ್ಯದಲ್ಲಿ ಪ್ರಭಾವಿ ಪ್ರದರ್ಶನ ನೀಡಿರಲಿಲ್ಲ. ಜಿಂಬಾಬ್ವೆ ವಿರುದ್ಧ ಪಾಂಟಿಂಗ್ ಬಳಗ ಬೃಹತ್ ಅಂತರದ ಗೆಲುವು ಪಡೆಯುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಜಿಂಬಾಬ್ವೆಯ ಸ್ಪಿನ್ ಬೌಲರ್‌ಗಳು ಆಸೀಸ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿರಲಿಲ್ಲ.ಮಂಗಳವಾರ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಇಂಗ್ಲೆಂಡ್- ಹಾಲೆಂಡ್ ತಂಡಗಳು ಪೈಪೋಟಿ ನಡೆಸಿದ್ದವು. ಬೃಹತ್ ಮೊತ್ತದ ಹೋರಾಟ ಕೊನೆಯವರೆಗೂ ಕುತೂಹಲ ಮೂಡಿಸಿತ್ತು. ಹಾಲೆಂಡ್ ತಂಡ ಸೋಲು ಅನುಭವಿಸುವ ಮುನ್ನ ಇಂಗ್ಲೆಂಡ್‌ಗೆ ನಡುಕ ಹುಟ್ಟಿಸಿತ್ತು. ಶುಕ್ರವಾರ ಕೂಡಾ ಅಂತಹದೇ ಹೋರಾಟವನ್ನು ನಿರೀಕ್ಷಿಸಲಾಗಿದೆ. ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಯೋಗ್ಯವಾಗಿರುವ ಕಾರಣ ಆಸೀಸ್ ಮತ್ತು ಕಿವೀಸ್ ತಂಡದ ಬ್ಯಾಟ್ಸ್‌ಮನ್‌ಗಳ ಮೊಗದಲ್ಲಿ ಈಗಾಗಲೇ ನಗು ಮೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry