ಬುಧವಾರ, ಮೇ 25, 2022
24 °C

ನಾಳೆ ಜಿಲ್ಲಾ ಸಾಹಿತ್ಯ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಳೆ ಜಿಲ್ಲಾ ಸಾಹಿತ್ಯ ಸಮ್ಮೇಳನ

ವಿಜಯಪುರ: ಇದೇ ತಿಂಗಳ 22 ರಂದು ವಿಜಯಪುರದ ಗಾಂಧಿಚೌಕದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ತಾಲ್ಲೂಕು ತಹಶೀಲ್ದಾರ್ ಎಲ್.ಸಿ.ನಾಗರಾಜು ಅವರನ್ನು ಆಯ್ಕೆ ಮಾಡಲಾಗಿದ್ದು, ಇತ್ತೀಚೆಗೆ ತಾಲ್ಲೂಕು ಕಚೇರಿಗೆ ತೆರಳಿ ಅಧ್ಯಕ್ಷರನ್ನು ಕಸಾಪ ಸದಸ್ಯರು ಅಧಿಕೃತವಾಗಿ ಸಮ್ಮೇಳನಕ್ಕೆ ಆಹ್ವಾನಿಸಿದರು.ಅಂದು ಬೆಳಿಗ್ಗೆ 9.30 ಗಂಟೆಗೆ ರಂಗಕಲಾವಿದ ಅರಸು ವೇದಿಕೆಯ ಬಳಿ ತಾಲ್ಲೂಕುಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಆಂಜಿನಪ್ಪ ಅವರು ರಾಷ್ಟ್ರಧ್ವಜಾರೋಹಣ, ಜಿಲ್ಲಾ ಕಸಾಪ ಉಪಾಧ್ಯಕ್ಷ ಹನುಮಂತಪ್ಪ ಕಸಾಪ ಪರಿಷತ್ತಿನ ಧ್ವಜಾರೋಹಣ, ಪುರಸಭಾ ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್ ಅವರು ಕನ್ನಡದ ಧ್ವಜಾರೋಹಣ ನೆರವೇರಿಸುವರು.ಬೆಳಿಗ್ಗೆ 10.30 ಗಂಟೆಗೆ ಅಂಕತಟ್ಟಿ ನಂಜುಂಡಪ್ಪ ಸರ್ಕಲ್‌ನಿಂದ ಹೊರಡುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ವೀರಣ್ಣ ಚಾಲನೆ ನೀಡಲಿದ್ದಾರೆ. ನಂದಿಧ್ವಜ, ಡೊಳ್ಳುಕುಣಿತ, ವೀರಭದ್ರನಕುಣಿತ, ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಅರಸುವೇದಿಕೆಗೆ ಕರೆತರಲಾಗುವುದು. ನಂತರ ಸಮ್ಮೇಳನ ಉದ್ಘಾಟನೆ. ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿಕಾರಿ ಸಂಧ್ಯಾಶರ್ಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ.ರಾಜು ಕಾರ್ಯಕ್ರಮ ಉದ್ಘಾಟಿಸುವರು. ಡಿಡಿಪಿಐ ಎಚ್.ವಿ.ವೆಂಕಟೇಶಯ್ಯ ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಲಿದ್ದು, ಕ್ಷೇತ್ರಶಿಕ್ಷಣಾಧಿಕಾರಿ ಹನುಮಂತಪ್ಪ ಅವರು ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಕಾರ್ಯದರ್ಶಿ ಸಂಗಮೇಶ್ವರ ಬಾದವಾಡಗಿ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.ಡಾ.ಬಿ.ಸಿದ್ಧಗಂಗಯ್ಯ ಕಂಬಾಳ, ತಹಶೀಲ್ದಾರ್‌ಗಳಾದ ನೆಲಮಂಗಲ ಅನಿಲ್‌ಕುಮಾರ್, ದೊಡ್ಡಬಳ್ಳಾಪುರ ಬಿ.ಸಂಪತ್‌ಕುಮಾರ್, ಹೊಸಕೋಟೆ ಬಿ.ಮಲ್ಲಿಕಾರ್ಜುನ್, ಕನ್ನಡ ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಸುಧೀಂದ್ರ, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಮತ್ತಿತರರು ಭಾಗವಹಿಸುವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಇದೇ ವೇದಿಕೆಯಲ್ಲಿ ಸನ್ಮಾನಿಸಲಾಗುವುದು.ಮಧ್ಯಾಹ್ನ 2 ಗಂಟೆಗೆ ಎಚ್.ಗವಿಸಿದ್ಧಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯಗೋಷ್ಠಿಯಲ್ಲಿ `ವಚನಗಳಲ್ಲಿ ಸಮಜಿಕ ಮೌಲ್ಯಗಳು~, ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ~ ಕುರಿತ ವಿಷಯ ಮಂಡನೆ ನಡೆಯಲಿದೆ. ಸಾಹಿತಿ ಎಸ್.ವೆಂಕಟೇಶಪ್ಪ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ. ಕೇಂದ್ರ ಬೆಂಗಳೂರು ಗ್ರಾಮಂತರ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಹುಲಿಕಲ್ ನಟರಾಜು ಅಧ್ಯಕ್ಷತೆ ವಹಿಸುವರು. ಕೋಶಾಧಿಕಾರಿ ಯಾ.ಚಿ.ದೊಡ್ಡಯ್ಯ ಸಮಾರೋಪ ಭಾಷಣ ಮಾಡುವರು. ಜಿಲ್ಲೆಯ ಎಲ್ಲಾ ತಾಲ್ಲೂಕು ಘಟಕಗಳ ಕಸಾಪ ಅಧ್ಯಕ್ಷರು ಪಾಲ್ಗೊಳ್ಳುವರು.

 

ಸಮ್ಮೇಳನಾಧ್ಯಕ್ಷರ ಪರಿಚಯ

ವಿಜಯಪುರ: ಇಲ್ಲಿನ ಗಾಂಧಿಚೌಕದಲ್ಲಿ ಇದೇ ತಿಂಗಳ 22 ರಂದು ನಡೆಯಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ತಾಲ್ಲೂಕು ದಂಡಾಧಿಕಾರಿ ಎಲ್.ಸಿ.ನಾಗರಾಜು ಆಯ್ಕೆಯಾಗಿದ್ದಾರೆ.ಮೂಲತ: ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿಕ್ಕಮಾಲೂರು ಗ್ರಾಮ ಎಲ್.ಸಿ.ನಾಗರಾಜು ಅವರು ಮಧುಗಿರಿಯಲ್ಲಿ ಶಾಲಾ ಕಾಲೇಜುದಿನಗಳನ್ನು ಪೂರೈಸಿದರು. ಬೆಂಗಳೂರು ವಿವಿಯಿಂದ ಎಂ.ಎ ಪದವಿ ಪಡೆದಿದ್ದಾರೆ. ಕಾನೂನು ಶಿಕ್ಷಣ, ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ 1998ರ ಕೆಎಎಸ್ ಆಯ್ಕೆ ಶ್ರೇಣಿಯಲ್ಲಿ ಆಯ್ಕೆಯಾಗಿದ್ದಾರೆ.ಪ್ರಾರಂಭದಲ್ಲಿ ತೂಕ ಮತ್ತು ಅಳತೆಮಾಪನ ಇಲಾಖೆಯಲ್ಲಿ ಸಹಾಯಕ ಕಂಟ್ರೋಲರ್ ಆಗಿ ಅರಸೀಕೆರೆ, ನೆಲಮಂಗಲ ತಾಲ್ಲೂಕುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಂತರ ಗುಬ್ಬಿ, ಚಿಕ್ಕಬಳ್ಳಾಪುರ ತಾಲ್ಲೂಕುಗಳಲ್ಲಿ ತಾಲ್ಲೂಕು ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. 2009 ರಿಂದ ದೇವನಹಳ್ಳಿ ತಾಲ್ಲೂಕು ದಂಡಾಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಲಾ ಮತ್ತು ಸಾಹಿತ್ಯ ಕೃಷಿ:  ನಾಗರಾಜು ಅವರು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸಾಹಿತ್ಯ ಸೇವೆ ಮಾಡಿದ್ದಾರೆ. ಅರೆಕಾಲಿಕ ಉಪನ್ಯಾಸಕರಾಗಿ ಬೆಂಗಳೂರಿನ ಹೆಸರಾಂತ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ ಮೂಲಕ ರಂಗಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.