ಬುಧವಾರ, ಮೇ 19, 2021
24 °C

ನಾಳೆ ಧರಣಿಗೆ ಉಪನ್ಯಾಸಕರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೇತನ ತಾರತಮ್ಯವನ್ನು ಸರಿಪಡಿಸುವಂತೆ ಆಗ್ರಹಿಸಿ `ಶಿಕ್ಷಕರ ದಿನ~ವಾದ ಸೋಮವಾರ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲು ಪದವಿಪೂರ್ವ ಕಾಲೇಜು ಉಪನ್ಯಾಸಕರು ನಿರ್ಧರಿಸಿದ್ದಾರೆ.ನಾಲ್ಕನೇ ವೇತನ ಆಯೋಗ ಜಾರಿಯಾದಾಗಿನಿಂದ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ವೇತನ ನಿಗದಿಯಲ್ಲಿ ಅನ್ಯಾಯವಾಗಿದೆ. ಇದನ್ನು ಸರಿಪಡಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ, ಸರ್ಕಾರ ಸ್ಪಂದಿಸಿಲ್ಲ.

 

ಆದ್ದರಿಂದ `ಶಿಕ್ಷಕರ ದಿನಾಚರಣೆ~ಯನ್ನು ಬಹಿಷ್ಕರಿಸಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಎಚ್.ಎಸ್.ಪ್ರಕಾಶ್ ತಿಳಿಸಿದ್ದಾರೆ.ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಡಿಸೆಂಬರ್ 7ರಂದು ರ‌್ಯಾಲಿ ನಡೆಸಲಾಗಿತ್ತು. ಇದಾದ ನಂತರ ಏಪ್ರಿಲ್‌ನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಬಹಿಷ್ಕರಿಸಲಾಗಿತ್ತು. ಆಗ ತಾರತಮ್ಯ ನಿವಾರಣೆಗೆ ಸಮಿತಿ ರಚಿಸಲಾಯಿತು. ಆದರೆ ಈಗಾಗಲೇ ವರದಿ ನೀಡಿದ್ದರೂ, ಅದನ್ನು ಜಾರಿಗೊಳಿಸಿಲ್ಲ, ವರದಿಯಲ್ಲಿ ಏನಿದೆ ಎಂಬುದನ್ನೂ ಬಹಿರಂಗಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. `ಸದ್ಯ ರೂ 11,400 ಮೂಲ ವೇತನವಿದ್ದು ಅದನ್ನು ರೂ 14 ಸಾವಿರಕ್ಕೆ ಏರಿಸಬೇಕೆಂಬುದು ನಮ್ಮ ಆಗ್ರಹ. ಆದ್ದರಿಂದ ಸೆ.5ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಲಾಗುವುದು~ ಎಂದು ತಿಳಿಸಿದ್ದಾರೆ.ಬೇಡಿಕೆ ದಿನಾಚರಣೆ: ಶಿಕ್ಷಕರ ದಿನಾಚರಣೆ ಜೊತೆಗೆ ಸೆ.5ರಂದು `ಕಾಲೇಜು ಅಧ್ಯಾಪಕರ ಬೇಡಿಕೆಯ ದಿನ~ವನ್ನಾಗಿ ಆಚರಿಸಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.2006ರ ಜೂನ್ ಒಂದರಿಂದ ಬಾಕಿ ಇರುವ ವೇತನ ಬಿಡುಗಡೆ ಮಾಡಬೇಕು, ಅಧ್ಯಾಪಕರ ಭವಿಷ್ಯನಿಧಿ ಮಸೂದೆ, ಉನ್ನತ ಶಿಕ್ಷಣದ ವಾಣಿಜ್ಯೀಕರಣ ಮತ್ತು ಖಾಸಗೀಕರಣ ಮಸೂದೆಯನ್ನು ವಾಪಸ್ ಪಡೆಯಬೇಕು, ವೇತನ ಅನುಷ್ಠಾನದಲ್ಲಿ ಆಗಿರುವ ನ್ಯೂನತೆಗಳನ್ನು ಸರಿಪಡಿಸಬೇಕು ಎಂಬುದು ಸೇರಿದಂತೆ ಅಧ್ಯಾಪಕರ ಬೇಡಿಕೆಗಳನ್ನು ಈಡೇರಿಸುವಂತೆ ಒಕ್ಕೂಟದ ಅಧ್ಯಕ್ಷ ಪ್ರೊ. ಸಿ.ಎಚ್. ಮುರಿಗೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಪ್ರೊ. ಟಿ.ಎಂ. ಮಂಜುನಾಥ್ ಆಗ್ರಹಿಸಿದ್ದಾರೆ.ಸಚಿವರ ಮನವಿ: ಪದವಿಪೂರ್ವ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ತಾರತಮ್ಯಕ್ಕೆ ಸಂಬಂಧಿಸಿದಂತೆ ಸಮಿತಿ ಈಗಾಗಲೇ ವರದಿ ನೀಡಿದೆ. ಅದನ್ನು ಮುಖ್ಯಮಂತ್ರಿಗೆ ಸಲ್ಲಿಸಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಸಕಾರಾತ್ಮಕವಾಗಿ ಸ್ಪಂದಿಸುವಂತೆ ಕೋರಲಾಗುವುದು.

 

ಆದ್ದರಿಂದ ಶಿಕ್ಷಕರ ದಿನಾಚರಣೆಯಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ಕೈಬಿಡುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.