ಶನಿವಾರ, ಮೇ 15, 2021
23 °C

ನಾಳೆ ನನ್ನದೇ...

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

“ಪಾಶ್ಚಿಮಾತ್ಯ ಶೈಲಿ ಉಡುಪು ಧರಿಸುತ್ತೇನೆ. ಆದರೆ, ಎಂದಿಗೂ ಕಡಿಮೆ ಬಟ್ಟೆ ಧರಿಸಿ ಮೈ ತೋರಿಸುವುದಿಲ್ಲ. ಗುರುತಿಸಿಕೊಂಡರೆ ವಿದ್ಯಾ ಬಾಲನ್‌ರ `ಡರ್ಟಿ ಪಿಕ್ಚರ್~ ರೀತಿಯಲ್ಲಿ ಗುರುತಿಸಿಕೊಳ್ಳಬೇಕು...`ನನಗಿನ್ನೂ 30 ವರ್ಷ ಆಗಿಲ್ಲ!~. ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವುದು ಅಪರೂಪವಾಗುತ್ತಿದೆ. ಅವಕಾಶಗಳು ಸಿಗುತ್ತಿಲ್ಲವೇ ಎಂದು ಕೇಳಿದಾಗ ನಟಿ ಶರ್ಮಿಳಾ ಮಾಂಡ್ರೆ ನೀಡಿದ ಪ್ರತಿಕ್ರಿಯೆ ಇದು. ನನ್ನದಿನ್ನೂ ಚಿಕ್ಕ ವಯಸ್ಸು. ಇನ್ನೂ ಹಲವು ವರ್ಷ ನಾಯಕಿ ಪಾತ್ರಗಳಲ್ಲಿ ನಟಿಸಬಹುದು. ಕಡಿಮೆ ಚಿತ್ರಗಳಲ್ಲಿ ನಟಿಸುತ್ತಿರುವುದರ ಮಾತ್ರಕ್ಕೆ ಅವಕಾಶಗಳು ದೊರಕುತ್ತಿಲ್ಲ ಎಂದರ್ಥವಲ್ಲ ಎಂಬ ತೀಕ್ಷ್ಣ ಉತ್ತರ ಅವರದು.`ಸಜನಿ~ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶರ್ಮಿಳಾ ಹೆಸರು ಮಾಡಿದರೂ ಕಳೆದ ಐದಾರು ವರ್ಷಗಳಲ್ಲಿ ನಟಿಸಿರುವುದು ಎಂಟು ಚಿತ್ರಗಳಲ್ಲಿ ಮಾತ್ರ. `ಧನ್ ಧನಾ ಧನ್~ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ.ಈ ನಡುವೆ ತಮಿಳಿಗೂ ಕಾಲಿಟ್ಟ ಅವರು ತೆಲುಗಿನ `ಧೀ~ ಚಿತ್ರದ ರೀಮೇಕ್ `ಮಿರತ್ತಲ್~ನಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದಿಂದ ಒಂದು ಹೆಜ್ಜೆ ಹೊರಗಿಟ್ಟಾಯಿತು. ಹಾಗಾದರೆ ಇಲ್ಲಿಂದ ದೂರ ಸರಿಯುವಿರಾ ಎಂದು ಕೇಳಿದರೆ ಖಂಡಿತಾ ಇಲ್ಲ ಎನ್ನುವ ಶರ್ಮಿಳಾ `ಸಿನಿಮಾ ರಂಜನೆ~ ಜೊತೆ ಮಾತುಗಳನ್ನು ಹಂಚಿಕೊಂಡರು.ಅವಕಾಶಗಳು ಇಲ್ಲವೆಂದಲ್ಲ. ಒಳ್ಳೆ ಕಥೆ, ಪಾತ್ರವಿರುವ ಚಿತ್ರಗಳು ಸಿಗುತ್ತಿಲ್ಲ. ಕಥೆ ಇಷ್ಟವಾಗದಿದ್ದರೆ ನಾನು ಒಪ್ಪಿಕೊಳ್ಳುವುದಿಲ್ಲ. ಇದು ಚಿತ್ರೋದ್ಯಮಕ್ಕೆ ಕಾಲಿಟ್ಟಾಗಿನಿಂದಲೂ ಪಾಲಿಸಿಕೊಂಡು ಬಂದ ನೀತಿ. ಒಪ್ಪಿಕೊಳ್ಳುವಾಗ ಅಳೆದು ತೂಗುತ್ತೇನೆ. ಕಥೆ ಮತ್ತು ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇರಬೇಕು.ಖಯಾಲಿಗಾಗಿ ಮಾಡುವುದಾದರೆ ಎಷ್ಟು ಬೇಕಾದರೂ ಸಿನಿಮಾ ಮಾಡಬಹುದು. ಹತ್ತು ಪ್ಲಾಫ್ ಸಿನಿಮಾಗಳಿಗಿಂತ ಒಂದು ಗೆದ್ದ ಸಿನಿಮಾದಲ್ಲಿ ನಟಿಸಿದರೆ ಜನ ನೆನಪಿಟ್ಟುಕೊಳ್ಳುತ್ತಾರೆ. ಇಲ್ಲಿ ನಟಿಸಿದ ಸಿನಿಮಾ ಪ್ರಮಾಣ ಮುಖ್ಯವಲ್ಲ.ನಿರ್ವಹಿಸಿದ ಪಾತ್ರದ ತೂಕ ಮುಖ್ಯ. ಹಾಗೆ ಒಂದು ವೇಳೆ ಅವಕಾಶ ಸಿಗದಿದ್ದರೆ, ಮನೆಯಲ್ಲಿ ಸುಮ್ಮನೆ ಕೂತರೂ ಬೇಸರಪಟ್ಟುಕೊಳ್ಳುವುದಿಲ್ಲ ಎಂಬ ದೃಢನಿರ್ಣಯ ಅವರದು. ಮನೆಯಲ್ಲಿದ್ದಾಗ ಯೋಗ, ಏರೋಬಿಕ್ಸ್, ಜಿಮ್‌ಗಳಲ್ಲಿ ಅವರು ತೊಡಗಿಕೊಳ್ಳುತ್ತಾರಂತೆ. ಸಿನಿಮಾ ನಟಿಯರಿಗೆ ಫಿಟ್‌ನೆಸ್ ಮುಖ್ಯ. ಮುಂಚೆ ಸ್ವಲ್ಪ ದಪ್ಪಗಿದ್ದೆ. ಹೀಗಾಗಿ ಹೆಚ್ಚಿನ ಸಮಯ ಯೋಗಕ್ಕೆ ಮೀಸಲಿಡುತ್ತೇನೆ ಎನ್ನುತ್ತಾರೆ ಶರ್ಮಿಳಾ.ತಮಿಳಿನ `ಮಿರತ್ತಲ್~ನಲ್ಲಿ ಅವರಿಗೆ ನಟನೆಗೆ ಸಾಕಷ್ಟು ಅವಕಾಶ ಸಿಕ್ಕಿದೆಯಂತೆ. ತಮ್ಮ ನಟನೆ ಎಲ್ಲರಿಗೂ ಹಿಡಿಸಿದೆ ಎಂಬ ಖುಷಿ ಅವರ ಧ್ವನಿಯಲ್ಲಿತ್ತು. ಮೇ ಅಂತ್ಯದಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಬಗ್ಗೆ ಅವರು ಭರವಸೆ ಇಟ್ಟುಕೊಂಡಿದ್ದಾರೆ. ತಮಿಳಿನ ಗಂಧಗಾಳಿಯೂ ಗೊತ್ತಿರಲಿಲ್ಲ. ಆದರೆ ಪಾತ್ರ ಇಷ್ಟವಾಯಿತು.ತುಂಬಾ ಸಂಭಾಷಣೆ ಇರುವ ಪಾತ್ರವದು. ನೀವೇ ಡಬ್ಬಿಂಗ್ ಮಾಡಬೇಕೆಂದು ಒತ್ತಾಯಿಸಿದರು. ಅದನ್ನೂ ಮಾಡಿದೆ. ಜೊತೆಗೆ ಕೆಲವು ಪದಗಳಷ್ಟು ತಮಿಳೂ ಕಲಿತಿದ್ದೇನೆ ಎನ್ನುತ್ತಾರೆ.ಇತರ ನಟಿಯರಂತೆ ಬಾಲಿವುಡ್‌ಗೆ ಹಾರುವ ಆಸೆ ಇದೆಯೇ ಎಂದರೆ `ಖಂಡಿತಾ~ ಎಂಬ ಉತ್ತರ ಅವರದು. ಹಿಂದಿ ಚಿತ್ರವೊಂದರ ಬಗ್ಗೆ ಮಾತುಕತೆ ನಡೆದಿದೆ. ಕನ್ನಡದಲ್ಲೂ ಒಂದು ಚಿತ್ರವಿದೆ. ಸದ್ಯಕ್ಕೆ ಇವುಗಳ ಬಗ್ಗೆ ಹೇಳಲಾರೆ ಎನ್ನುತ್ತಾರೆ. ಬೇರೆ ಭಾಷೆಗಳಲ್ಲಿ ಅವಕಾಶ ಬಂದರೂ ಕನ್ನಡ ಚಿತ್ರರಂಗ ಮಾತ್ರ ಬಿಡುವುದಿಲ್ಲ. ಹುಟ್ಟಿ ಬೆಳೆದ ಕನ್ನಡಕ್ಕೆ ಮೊದಲ ಆದ್ಯತೆ ನೀಡುತ್ತಾರಂತೆ.ಶರ್ಮಿಳಾ ಚಿತ್ರರಂಗ ಪ್ರವೇಶಿಸಿದ್ದು ತಮ್ಮದೇ ಬ್ಯಾನರ್ ನಿರ್ಮಿಸಿದ `ಸಜನಿ~ ಮೂಲಕ. ಈಗ ಹೋಮ್ ಬ್ಯಾನರ್‌ನ, ರಜನೀಕಾಂತ್ ನಟಿಸಿರುವ ತಮಿಳಿನ `ಕೋಚಡಿಯಾನ್~ ಚಿತ್ರ ನಿರ್ಮಾಣದಲ್ಲಿದೆ. ದೊಡ್ಡ ಬಜೆಟ್‌ನ ಚಿತ್ರವದು. ಆರು ತಿಂಗಳು ಬೇರೆ ಸಿನಿಮಾ ಮಾಡುವುದಿಲ್ಲ. ಹೀಗಾಗಿ ಸದ್ಯಕ್ಕಂತೂ ಸ್ವಂತ ಬ್ಯಾನರ್‌ನಲ್ಲಿ ತಮ್ಮ ಚಿತ್ರಗಳನ್ನು ನಿರ್ಮಿಸುವ ಇರಾದೆ ಇಲ್ಲ ಎನ್ನುತ್ತಾರೆ.`ಧನ್ ಧನಾ ಧನ್~ ಅವರಿಗೆ ತೀರಾ ನಿರಾಸೆ ಮೂಡಿಸಿದ ಚಿತ್ರ. ನಿರ್ಮಾಪಕರ ಜೊತೆ ಸಂಭಾವನೆ ವಿಚಾರದಲ್ಲಿ ಉಂಟಾದ ಸಮಸ್ಯೆಯಿಂದ ಶರ್ಮಿಳಾ ಚಿತ್ರದ ಪ್ರಚಾರಕ್ಕೆ ಹೋಗಲಿಲ್ಲ. ಚಿತ್ರನಿರ್ಮಾಣದ ಬಗ್ಗೆ ತಿಳಿವಳಿಕೆಯೇ ಇಲ್ಲದ ನಿರ್ಮಾಪಕರು ಅವರು.ಈ ತಗಾದೆಯಿಂದ ಬೇಸರವಾಗಿದ್ದಂತೂ ನಿಜ. ನಟ ಪ್ರೇಮ್ ಕೂಡ ಚಿತ್ರದ ಪ್ರಚಾರಕ್ಕೆ ಹೋಗಿರಲಿಲ್ಲ. ಇದರ ಘಟನೆ ಹೊರತು ಕನ್ನಡ ಚಿತ್ರರಂಗದಲ್ಲಿ ನನಗೆ ಯಾವುದೇ ತೊಂದರೆ, ಬೇಸರವಾಗಿಲ್ಲ ಎಂದು ಹೇಳುತ್ತಾರೆ.ಕಡಿಮೆ ಬಟ್ಟೆ ಹಾಕಿಕೊಳ್ಳುವುದು ಗ್ಲಾಮರ್ ಅಲ್ಲ. ನಾನು ಪಾಶ್ಚಿಮಾತ್ಯ ಶೈಲಿ ಉಡುಪುಗಳನ್ನು ಧರಿಸುತ್ತೇನೆಯೇ ಹೊರತು ಎಂದಿಗೂ ಕಡಿಮೆ ಬಟ್ಟೆ ಧರಿಸಿ ಮೈ ತೋರಿಸುವುದಿಲ್ಲ. ಎಲ್ಲಾ ರೀತಿಯ ಉಡುಪುಗಳಲ್ಲೂ ಗ್ಲಾಮರ್ ಆಗಿ ಕಾಣಬಹುದು ಎನ್ನುವುದು ತುಂಡುಡುಗೆ ಕುರಿತ ಅವರ ಖಡಕ್ ಮಾತು.ಯಾರೂ ಮಾಡದ ಸವಾಲಿನ ಪಾತ್ರಗಳನ್ನು ಮಾಡಬೇಕೆನ್ನುವುದು ಅವರ ಆಸೆ. ಅನುಕರಿಸುವ ಪಾತ್ರಗಳಿಂದ ಹೊಗಳಿಕೆ ಗಿಟ್ಟಿಸಿಕೊಂಡರೆ ಪ್ರಯೋಜನವಿಲ್ಲ. ಗುರುತಿಸಿಕೊಂಡರೆ ವಿದ್ಯಾ ಬಾಲನ್‌ರ `ಡರ್ಟಿ ಪಿಕ್ಚರ್~ ರೀತಿಯಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂದು ಬಯಕೆ ಅವರದು.ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಸಿನಿಮಾವೇ ನನ್ನ ಬದುಕು. ನಟನೆಗೆ ವಿದಾಯ ಹೇಳಿದರೂ ಖಂಡಿತವಾಗಿ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಳ್ಳುತ್ತೇನೆ. ಚಿತ್ರರಂಗದ ಸಂಪರ್ಕವಿರುವ ಕುಟುಂಬದಿಂದ ಬಂದ ನನಗೆ ಸಿನಿಮಾ ನಿರ್ಮಾಣದ ಪ್ರತಿ ವಿಚಾರಗಳ ಅರಿವಿದೆ ಎನ್ನುವ ಅವರು, ಭವಿಷ್ಯದ ದಿನಗಳ ಬಗ್ಗೆ ಈಗಲೇ ಚಿಂತಿಸುತ್ತಾ ಕೂರುವುದಿಲ್ಲ. ಇಂದು ಮತ್ತು ನಾಳೆಯ ಕುರಿತಷ್ಟೇ ನನ್ನ ಗಮನ ಎನ್ನುತ್ತಾರೆ.ಮದುವೆ ಮಾತೆತ್ತಿದರೆ, `ಅದಿನ್ನೂ ದೂರದ ಕನಸು~ ಎಂದು ನಗೆ ಬೀರುತ್ತಾರೆ ಶರ್ಮಿಳಾ. ಸಿನಿಮಾ ರಂಗದ ಬಗ್ಗೆ ಅರಿವಿರುವುದರಿಂದ ಮನೆಯಲ್ಲಿ ಮದುವೆ ಬಗ್ಗೆ ಒತ್ತಡವಿಲ್ಲ, ಯೋಚನೆಯೂ ಇಲ್ಲ ಎನ್ನುತ್ತಾರೆ.ಹಾಗಾದರೆ 30 ವರ್ಷವಾಗಬೇಕೆ? ಎಂದು ಕೆಣಕಿದರೆ, ಅವರು ಕೊಡುವ ಉತ್ತರ- `ಹಾಗೇನೂ ಗಡಿ ಹಾಕಿಕೊಂಡಿಲ್ಲ. ಮದುವೆ ಎನ್ನುವುದು ಅನಿಶ್ಚಿತ. ಅದು ಯಾವಾಗ ಬೇಕಾದರೂ ಎದುರಾಗಬಹುದು. ಅದನ್ನು ಊಹಿಸಲು ಸಾಧ್ಯವಿಲ್ಲ!~.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.