ಗುರುವಾರ , ಜೂನ್ 24, 2021
23 °C

ನಾಳೆ ನಾಲೆಗಳಿಗೆ ಪುನಃ ನೀರು: ವಜ್ಜಲ ಪ್ರಕಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ನಿರ್ಣಯಗಳು ರೈತರಿಗೆ ವಿರೋಧವಾಗಿವೆ. ನಾರಾಯಣಪುರ ಅಚ್ಚುಕಟ್ಟು ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಬಾಡಿ ಹೋಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ ಎಂದು ರೈತರು ಮಾಡುತ್ತಿರುವ  ಹೋರಾಟಕ್ಕೆ ಸ್ಪಂದಿಸಿದ ಶಾಸಕ ಮಾನಪ್ಪ ವಜ್ಜಲ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಪುನಃ ಸೋಮವಾರ ನಾಲೆಗಳಿಗೆ ನೀರು ಹರಿಸುವುದಾಗಿ ಪ್ರಕಟಿಸಿದರು.ಮಾ.10ರಂದು ನಾರಾಯಣಪುರ ಬಲದಂಡೆ ನಾಲೆ ಮತ್ತು ಜಡಿಶಂಕರಲಿಂದ ಏತ ನೀರಾವರಿ ಯೋಜನೆ ವ್ಯಾಪ್ತಿ ಪ್ರದೇಶಗಳಿಗೆ ನೀರು ಹರಿಸುವುದನ್ನು ಅಣೆಕಟ್ಟೆ ವಿಭಾಗ ಸ್ಥಗಿತಗೊಳಿಸಿದೆ. ಇದರಿಂದ ಆತಂಕಗೊಂಡ ರೈತರು ಶುಕ್ರವಾರದಿಂದ ಹೋರಾಟ ಆರಂಭಿಸಿ, ಶಾಸಕರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಂತೆ ಶಾಸಕ ವಜ್ಜಲ ಸರ್ಕಾರ ನೀರು ಬಿಡದಿದ್ದರೆ ಬೀದಿಗಳಿದು ಹೋರಾಟ ಮಾಡುವ ಭರವಸೆ ನೀಡಿದ್ದರು.ಭಾನುವಾರ ಪೊಲೀಸ್ ಸರ್ಕಲ್ ಇನ್ಸ್‌ಸ್ಪೆಕ್ಟರ್ ಶಿವಮೂರ್ತಿ, ಸಹಾಯಕ ಆಯುಕ್ತ ಟಿ. ಯೊಗೇಶ ಅವರು ಶಾಸಕ ಮಾನಪ್ಪ ವಜ್ಜಲ ಅಧ್ಯಕ್ಷತೆಯಲ್ಲಿ ರೈತ ಮುಖಂಡರು ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಸಭೆ ನಡೆಸಿ ಸಂಧಾನ ಮಾಡುವಲ್ಲಿ ಯಶಸ್ವಿಯಾದರು.ಆದರೆ, ರೈತರು ನೀರು ಬಿಡಿಸಿಕೊಳ್ಳುವ ವಿಷಯದಲ್ಲಿ ಪಟ್ಟು ಹಿಡಿದರು. ಸರ್ಕಾರದ ಮಟ್ಟದಲ್ಲಿ ಸಂಪರ್ಕದಲ್ಲಿದ್ದ ಶಾಸಕ ವಜ್ಜಲರು ದೂರವಾಣಿ ಮೂಲಕ ಮಾತನಾಡಿ ವಾಸ್ತವ ಸತ್ಯ ಮನವರಿಕೆ ಮಾಡುತ್ತಿದ್ದಂತೆ ಲಭ್ಯತೆ ಆಧರಿಸಿ ನೀರು ಹರಿಸುವ ಸೂಚನೆ ದೊರೆಯಿತು.ಶಾಸಕ ಮಾನಪ್ಪ ವಜ್ಜಲ ಮಾತನಾಡಿ, ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇವೆ. ಅಣೆಕಟ್ಟೆ ಮೇಲ್ಭಾಗದ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುಂಜಾಗ್ರತೆ ವಹಿಸಿ ಲಭ್ಯತೆ ಆಧರಿಸಿ ಒಂದೆರಡು ದಿನ ನೀರು ಹರಿಸುವ ಭರವಸೆಗೆ ಒಪ್ಪಿಗೆ ದೊರೆತಿದೆ. ನಾಳೆ ನೀರು ಹರಿಸುವಲ್ಲಿ ವಿಫಲವಾದರೆ ರೈತರೊಂದಿಗೆ ಬೀದಿಗಿಳಿಯಲು ಸಿದ್ಧ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಟಿ. ಯೊಗೇಶ, ಕೆಬಿಜೆಎನ್‌ಎಲ್ ಅಧೀಕ್ಷಕ ಎಂಜಿನಿಯರ್ ಬೋಜಾ ನಾಯ್ಕ, ಕಾರ್ಯನಿರ್ವಾಹಕ ಎಂಜಿನಿಯರ್ ಸಜ್ಜನ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ. ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಮುರಾರಿ. ರೈತ ಮುಖಂಡರಾದ ಅಮರಣ್ಣ ಗುಡಿಹಾಳ, ಅಮೀನಪಾಷ ದಿದ್ಗಿ, ಶರಣಪ್ಪ ಮಳ್ಳಿ, ಹನುಮಪ್ಪ ಯಡಹಳ್ಳಿ, ದುರುಗಪ್ಪ ಕಡದರಗಡ್ಡಿ, ಲಾಲಪ್ಪ ರಾಠೋಡ, ಹನುಮಗೌಡ, ಶರಣಪ್ಪ ಕಟಗಿ, ಶಿವನಗೌಡ ನಂದಿಹಾಳ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.