ನಾಳೆ ಬೇಡ, ಇಂದೇ ಹೋಗಿ

7

ನಾಳೆ ಬೇಡ, ಇಂದೇ ಹೋಗಿ

Published:
Updated:
ನಾಳೆ ಬೇಡ, ಇಂದೇ ಹೋಗಿ

ಬೆಂಗಳೂರು: `ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಸಿದ್ಧಾಂತಕ್ಕೆ ಬೆಲೆ ಕೊಡದೆ ಪಕ್ಷ ತ್ಯಜಿಸುತ್ತೇವೆ ಎನ್ನುವವರು ನಾಳೆಯ ಬದಲು ಇಂದೇ ಪಕ್ಷ ತೊರೆಯಲಿ~ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರಿಗೆ ತಿರುಗೇಟು ನೀಡಿದರು.`ಬಿಜೆಪಿ ನೇತೃತ್ವದ ಸರ್ಕಾರ ಯಾರೊಬ್ಬರ ಸ್ವತ್ತಲ್ಲ. ಯಾವುದೇ ಜಾತಿ, ಸಮುದಾಯದ ಆಸ್ತಿಯೂ ಅಲ್ಲ. ಜಾತಿ ಆಧಾರದ ಮೇಲೆ  ಪಕ್ಷ ಬೆಳೆದಿಲ್ಲ. ಜಾತಿಗೆ ನಾವು ಮನ್ನಣೆಯನ್ನೂ ನೀಡುವುದಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕೆ, ನಾಯಕರಿಗೆ ಸಿದ್ಧಾಂತವೇ ಮುಖ್ಯ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಅಶಿಸ್ತು ಸಹಿಸುವುದಿಲ್ಲ. ಬಂಡಾಯದ ರಾಜಕೀಯ ಮಾಡಬೇಡಿ~ ಎಂದು ನಾಯಕತ್ವ ಬದಲಾವಣೆಗೆ ಒತ್ತಡ ಹೇರುತ್ತಿರುವ ಭಿನ್ನಮತೀಯರ ಗುಂಪಿಗೆ ಎಚ್ಚರಿಕೆ ನೀಡಿದರು.ಶುಕ್ರವಾರ ಇಲ್ಲಿ ನಡೆದ `ಚಿಂತನ-ಮಂಥನ~ ಶಿಬಿರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಗಣಿ ಹಗರಣ ಹಾಗೂ ಅಕ್ರಮಗಳಿಂದ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರ ಆಗಿದೆ. ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಕೆಲವು ಪ್ರಮುಖರ ಹೆಸರು ಪ್ರಸ್ತಾಪವಾಗಿರುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.`ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಉತ್ತಮ ಆಡಳಿತ ನೀಡುತ್ತೇವೆ ಎಂಬ ನಿರೀಕ್ಷೆ ಜನರಲ್ಲಿ ಇತ್ತು. ಆದರೆ ನಾಯಕರ ಒಳಜಗಳ, ಹಗರಣಗಳಿಂದ ಪಕ್ಷದ ಬಗ್ಗೆ ಕೆಟ್ಟ ಭಾವನೆ ಮೂಡಿದೆ.ಆರೋಪಮುಕ್ತಿಗೆ ಕಾಯದೆ ಅಧಿಕಾರಕ್ಕಾಗಿ ಹಾತೊರೆಯುವುದು ಸರಿಯಲ್ಲ~ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಚಾಟಿ ಬೀಸಿದರು. ಇದರ ಬೆನ್ನಿಗೇ `ಮುಂದಿನ ವಾರ ದೆಹಲಿಗೆ ಬನ್ನಿ, ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚಿಸೋಣ~ ಎಂದು ಆಹ್ವಾನ ನೀಡುವ ಮೂಲಕ ಮಾತುಕತೆಯ ಬಾಗಿಲು ತೆರೆದಿಟ್ಟರು.`ಕರ್ನಾಟಕದಲ್ಲಿನ ಆಡಳಿತ, ದಕ್ಷಿಣದ ಉಳಿದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೆರವಾಗಬೇಕಿತ್ತು. ಆದರೆ ಇಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಂದ ಬಿಜೆಪಿ ಆಡಳಿತ ಇರುವ ಇತರೆ ರಾಜ್ಯಗಳಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಇರಿಸುಮುರಿಸಾಗಿದೆ. ಎಲ್ಲರೂ ಇಲ್ಲಿನ ತಪ್ಪುಗಳತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿ~ ಎಂದು ಸಲಹೆ ಮಾಡಿದರು.`ಹಿಂದೆ ಸಾಮಾನ್ಯ ಕಾರ್ಯಕರ್ತನಾಗಿದ್ದ ನಾನು ಈಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿದ್ದೇನೆ. ನಮಗೆ ವ್ಯಕ್ತಿಗಿಂತ ಕಾರ್ಯಕರ್ತರು ಮುಖ್ಯ. ಶಾಸಕರಾಗಬೇಕು, ಸಚಿವರಾಗಬೇಕು, ಮುಖ್ಯಮಂತ್ರಿಯಾಗಬೇಕು ಎಂದು ಆಸೆ ಇರುವುದು ಸಹಜ. ಆದರೆ ಅದಕ್ಕಾಗಿ ವಾಮಮಾರ್ಗ ಹಿಡಿಯದೆ ತಾಳ್ಮೆಯಿಂದ ಕಾಯಬೇಕು. ಎಲ್ಲರಿಗೂ ಅವಕಾಶಗಳು ಸಿಗುತ್ತವೆ~ ಎಂದು ಕಿವಿಮಾತು ಹೇಳಿದರು.ಅಸಾಧ್ಯ: ಚಿಂತನ ಶಿಬಿರದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗಡ್ಕರಿ, ಸದಾನಂದ ಗೌಡ ನೇತೃತ್ವದ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆ ಮಾಡುವುದಿಲ್ಲ. ಆರೋಪ ಮುಕ್ತರಾಗುವವರೆಗೂ ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದರು.`ಯಡಿಯೂರಪ್ಪ ಪಕ್ಷದ ಜನಪ್ರಿಯ ನಾಯಕ ಎಂಬುದು ನಿಜ. ಆದರೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿಯಲ್ಲಿ ಅವರ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬೇಕಾಯಿತು.ಲೋಕಾಯುಕ್ತರ ವರದಿ, ರಾಜ್ಯಪಾಲರ ಕ್ರಮವನ್ನು ನಾವು ಪ್ರಶ್ನಿಸುವುದಿಲ್ಲ. ಆದಷ್ಟು ಬೇಗ ಯಡಿಯೂರಪ್ಪ ಆರೋಪ ಮುಕ್ತರಾಗುವ ವಿಶ್ವಾಸವಿದೆ. ಆಗ ಪಕ್ಷ ಅವರನ್ನು ಗೌರವಿಸುತ್ತದೆ. ಚಿಂತನ ಸಭೆಯಲ್ಲಿ ಭಾಗವಹಿಸಲು ನಾನು ಬಂದಿದ್ದೇನೆಯೇ ಹೊರತು, ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚಿಸಲು ಅಲ್ಲ~ ಎಂದು ಸ್ಪಷ್ಟಪಡಿಸಿದರು.ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿಲ್ಲ. ಪಕ್ಷ ಒಗ್ಗಟ್ಟಾಗಿದೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ನಿಜ. ಬಹುಶಃ ಮಾರ್ಚ್ 3ರಂದು ನವದೆಹಲಿಯಲ್ಲಿ ರಾಜ್ಯ ಬಿಜೆಪಿಯ `ಕೋರ್ ಕಮಿಟಿ~ ಸಭೆ ನಡೆಯಲಿದ್ದು, ಆ ಸಂದರ್ಭದಲ್ಲಿ ಗೊಂದಲಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿದೆ. ಈಗ ಸದಾನಂದಗೌಡ ನೇತೃತ್ವದ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ. ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ಯಾವುದೇ ಗಡುವು ನೀಡಿಲ್ಲ ಎಂದು ಉತ್ತರಿಸಿದರು.ಅತ್ಯಂತ ಮಹತ್ವದ ಉತ್ತರ ಪ್ರದೇಶ ಚುನಾವಣೆ ನಡೆಯುತ್ತಿದೆ. ಇದಾದ ನಂತರ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಎಲ್ಲ ನಾಯಕರು ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಈಗಿನಿಂದಲೇ ಪ್ರಚಾರದಲ್ಲಿ ತೊಡಗುವಂತೆ ಸೂಚಿಸಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು.ಪಕ್ಷದ  ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಹೆಚ್ಚಿನ ಒತ್ತು ನೀಡಿ ಎಂದು ಹೇಳಿದ್ದಾರೆ. ನಾಯಕತ್ವದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಉಪಚುನಾವಣೆ ನಂತರ ಗಡ್ಕರಿ ಅವರು ಎರಡು ದಿನಗಳ ಕಾಲ ರಾಜ್ಯಕ್ಕೆ ಮತ್ತೊಮ್ಮೆ ಭೇಟಿ ನೀಡಿ ಎಲ್ಲ ಮುಖಂಡರೊಂದಿಗೆ ಚರ್ಚಿಸುತ್ತಾರೆ ಎಂದರು.ಈಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಗಡ್ಕರಿ ಸುಮಾರು ಒಂದೂವರೆ ಗಂಟೆ ಮಾತನಾಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಧರ್ಮೇಂದ್ರ ಪ್ರಧಾನ್ ಮೊದಲಾದವರು ಮಾತನಾಡಲಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry