ನಾಳೆ ಯುವ ಚೇತನ ಸಮಾವೇಶ

7

ನಾಳೆ ಯುವ ಚೇತನ ಸಮಾವೇಶ

Published:
Updated:

ರಾಯಚೂರು: ಯುವಕರಲ್ಲಿ ಜಾಗೃತಿ ಮೂಡಿಸುವ ದಿಶೆಯಲ್ಲಿ ಜಾತ್ಯತೀತ ಜನತಾ ದಳ ಪಕ್ಷವು `ಯುವ ಚೇತನ ಕಾರ್ಯಕ್ರಮ~ ಈಗಾಗಲೇ ರಾಜ್ಯವ್ಯಾಪಿ ಆರಂಭಿಸಿದ್ದು, ಇದೇ 23ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಎಂ.ಪವನಕುಮಾರ ಅವರು ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದಿಂದ ಯುವಕರಿಗೆ ಆಗುತ್ತಿರುವ ಅನ್ಯಾಯ ಹಾಗೂ ವಂಚನೆ ಕುರಿತು ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಯುವ ಚೇತನ ಕಾರ್ಯಕ್ರಮ ಹೊಂದಿದೆ ಎಂದು ತಿಳಿಸಿದರು.ಜಾತ್ಯತೀತ ಜನತಾದಳದ ರಾಜ್ಯಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಚಿತ್ರನಟಿ ಪೂಜಾ ಗಾಂಧಿ, ಕಾಯಾಧ್ಯಕ್ಷ ಚಂದ್ರಶೇಖರ, ಪ್ರಧಾನ ಕಾರ್ಯದರ್ಶಿ ಶ್ರಿನಿವಾಸ ಆಗಮಿಸಲಿದ್ದಾರೆ. ನಗರದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಜೆಡಿಎಸ್ ಯುವ ಘಟಕದ ಸಮಾವೇಶದಲ್ಲಿ 3 ಸಾವಿರ ಯುವಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನಗರದ ಉದ್ಯಮಿ ಈ ಆಂಜನೇಯ ಅವರ  ಸಹೋದರರಾದ ಈ ಗಣೇಶ ಹಾಗೂ ಈ ಶ್ರಿನಿವಾಸ ಅವರು ತಮ್ಮ ಬೆಂಬಲಿಗರೊಂದಿಗೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹಾಗೂ ಇತರ ಮುಖಂಡರು ಯಾದಗಿರಿ ಜಿಲ್ಲೆಯಿಂದ ಆಗಮಿಸಲಿದ್ದಾರೆ. ನಗರದ ಒಪೆಕ್ ಆಸ್ಪತ್ರೆಯಿಂದ ಸ್ವಾಗತಿಸಿ ಬೈಕ್ ರ‌್ಯಾಲಿ ಮೂಲಕ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರಕ್ಕೆ ಕರೆತರಲಾಗುವುದು ಎಂದು ಹೇಳಿದರು.ಪಕ್ಷದಲ್ಲಿ ಗೊಂದಲಗಳಿಲ್ಲ- ಮಾರ್ಚ್ 6ರೊಳಗೆ ಜಿಲ್ಲಾಧ್ಯಕ್ಷರ ನೇಮಕ: ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿ, ಜಿಲ್ಲಾ ಘಟಕದ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮಾರ್ಚ್ 6ರೊಳಗಾಗಿ ಪೂರ್ಣಗೊಳ್ಳಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ  ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರು ಭರವಸೆಯನ್ನು ನೀಡಿದ್ದಾರೆ.ಮಾರ್ಚ್ ತಿಂಗಳಲ್ಲಿ ನಡೆಯುವ ಜನಚೇತನ ಯಾತ್ರೆ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸುವ ಮುಖಂಡರು ಚರ್ಚೆ ನಡೆಸಿ ಅಂತಿಮವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿದ್ದಾರೆ.ಜೆಡಿಎಸ್ ಪಕ್ಷದಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಯಾವುದೇ ಅನ್ಯಾಯವಾಗಿಲ್ಲ. ಈಗಾಗಲೇ ಪಕ್ಷದಲ್ಲಿರುವ ಬಸವರಾಜ  ಪಾಟೀಲ್ ಯತ್ನಾಳ, ಬಸವರಾಜ ಹೊರಟ್ಟಿ ಹಾಗೂ ತಮ್ಮಂಥ ಹಲವು ಜನರಿದ್ದಾರೆ. ಯಾವುದೇ ರೀತಿಯಲ್ಲಿ ಸಮಸ್ಯೆಯಾಗಿಲ್ಲ ಎಂದು ವಿವರಿಸಿದರು.ಶಾಸಕ ಶಿವನಗೌಡ ನಾಯಕ ಅವರು ಪಕ್ಷಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಗೆ ಜೆಡಿಎಸ್‌ನಿಂದ ಆಯ್ಕೆಗೊಂಡ ಆರು ಸದಸ್ಯರಲ್ಲಿ ಮೂರು ಜನ ಸದಸ್ಯರು ಜೆಡಿಎಸ್ ಪಕ್ಷದಲ್ಲಿದ್ದಾರೆ. ಇನ್ನೂಳಿದ ಮೂರು ಸದಸ್ಯರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು  ರಾಜ್ಯ ಅಧ್ಯಕ್ಷರಿಗೆ ನೀಡಲಾಗಿದೆ. ಅವರೇ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.ಪ್ರಧಾನ ಕಾರ್ಯದರ್ಶಿ ಎನ್.ಶಿವಶಂಕರ ವಕೀಲ ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಆಚರಣೆ ಮಾಡುತ್ತಿದೆ. ಆದರೆ, ಬಿಜೆಪಿ ಪಕ್ಷ ಯುವಕರಿಗೆ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಮರೆತಿದೆ. ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿದರು.ಯುವಚೇತನ ಸಂಚಲನ ಮಿಲನ ದಾವಣಗೆರೆಯಲ್ಲಿ ಎಂಬ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರು ರೂಪಿಸಿದ ಘೋಷಣೆ ಹಿನ್ನೆಲೆಯಲ್ಲಿ  ರಾಜ್ಯ ಮಟ್ಟದ ಯುವ ಚೇತನ ಸಮಾವೇಶವನ್ನು ದಾವಣಗೆರೆಯಲ್ಲಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.ಜಿಲ್ಲಾ ವಕ್ತಾರ ಎಂ.ವಿರುಪಾಕ್ಷಿ, ನಗರ ಘಟಕದ ಅಧ್ಯಕ್ಷ ಬಿ.ತಿಮ್ಮಾರೆಡ್ಡಿ, ನಗರಸಭೆ ವಿರೋಧ ಪಕ್ಷದ ನಾಯಕ ಯುಸೂಫ್ ಖಾನ್, ನಗರಸಭೆ ಸದಸ್ಯರಾದ ತಿಮ್ಮಪ್ಪ ಪಿರಂಗಿ, ಪಿ.ಯಲ್ಲಪ್ಪ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry