ಬುಧವಾರ, ನವೆಂಬರ್ 20, 2019
20 °C

ನಾಳೆ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಮಹಿಮ

Published:
Updated:
ನಾಳೆ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಮಹಿಮ

ಚನ್ನಗಿರಿ: ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಈ ಬಾರಿ ಟಿಕೆಟ್ ನೀಡದೇ ಇರುವುದಕ್ಕೆ ಮನಸ್ಸಿಗೆ ನೋವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಏ. 9ರಂದು ಪಟ್ಟಣದಲ್ಲಿ ನಡೆಯುವ ಬೆಂಬಲಿಗರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಮಹಿಮ ಪಟೇಲ್ ತಿಳಿಸಿದರು.ಪಟ್ಟಣದ ರಾಮ ಮನೋಹರ್ ಲೋಹಿಯಾ ಭವನದಲ್ಲಿ ಭಾನುವಾರ ನಡೆದ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.

`ನನಗೆ ಒಳ್ಳೆಯದಾಗಲಿ ಎಂದು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲಾ ಜನಾಂಗದವರಿಗೂ ಒಳ್ಳೆಯದಾಗಬೇಕು ಎಂಬುದು ನನ್ನ ಆಲೋಚನೆಯಾಗಿದೆ. ಅಧಿಕಾರ ಇಲ್ಲದಿದ್ದರೂ ಸಂತೋಷವಾಗಿ ಇರಬಲ್ಲೆ. ಕಾಂಗ್ರೆಸ್‌ನ ಟಿಕೆಟ್ ಪಡೆದ ರಾಜಣ್ಣ ಅವರ ಬೆಂಬಲಿಗರ  ಕಾಂಗ್ರೆಸ್ ಕಾರ್ಯಕರ್ತರು, ನನ್ನ ಬೆಂಬಲಿಗರ ಮನೆಗಳ ಮುಂದೆಯೇ ಪಟಾಕಿ ಒಡೆದು ಸಂಭ್ರಮಪಟ್ಟಿರುವುದು ಉತ್ತಮ ಲಕ್ಷಣವಲ್ಲ. ಇದರಿಂದ ಕಾರ್ಯಕರ್ತರ ಮನಸ್ಸಿಗೆ ನೋವಾಗಿದ್ದು, ಪಕ್ಷಕ್ಕೆ ಹಾನಿಯಾಗಲಿದೆ. ದುಡುಕಿನಿಂದ ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ ಎಂದರು.`ಇಂದು ರಾಜಕೀಯ ವ್ಯವಸ್ಥೆ ಹಾಗೂ ಚುನಾವಣಾ ವ್ಯವಸ್ಥೆ ತುಂಬಾ ಕೆಟ್ಟಿದೆ. ರಾಜಕಾರಣ ಎಂಬುದು ಸರಿಯಾಗಬೇಕಿದೆ. ರಾಜಕೀಯ ಪರಿವರ್ತನೆಗಾಗಿ ಉಪವಾಸ ಹಾಗೂ ಪಾದಯಾತ್ರೆ ಮಾಡಿದೆ. ಆದರೆ, ಈಗ ಎಲ್ಲವೂ ಬದಲಾಗಿದೆ. ನಾನು ಇಂದು ಪಕ್ಕಾ ರಾಜಕಾರಣಿಯಾಗಬೇಕಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಕಾರ್ಯಕರ್ತರು ಒಪ್ಪುವಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ' ಎಂದು ಹೇಳಿದರು.ರಾಜ್ಯ ಕಬ್ಬು ಬೆಳೆಗಾರ ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ಮಹಿಮ ಪಟೇಲ್ ಅವರು ಯಾವುದೇ ನಿರ್ಧಾರವನ್ನು ಆತುರವಾಗಿ ತೆಗೆದುಕೊಳ್ಳುವುದಿಲ್ಲ. ಹಾಗೆಯೇ, ಯಾರ ಮಾತನ್ನೂ ಕೇಳುವುದಿಲ್ಲ. ಒಟ್ಟಾರೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬುದು ನಮ್ಮೆಲ್ಲರ ಇಚ್ಛೆಯಾಗಿದೆ. ಆ ನಿಟ್ಟಿನಲ್ಲಿ ಅವರೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಅನಸೂಯಮ್ಮ, ಮುಖಂಡರಾದ ಪ್ರವೀಣ್‌ಕುಮಾರ್ ಜೈನ್, ಸಿ.ಕೆ.ಎಚ್. ಮಹೇಶ್ವರಪ್ಪ, ತ್ರಿಶೂಲ್ ಪಾಣಿ ಪಟೇಲ್, ಅಮಾನುಲ್ಲಾ, ಪಿ. ಲೋಹಿತ್‌ಕುಮಾರ್, ಎಂ. ಮಲ್ಲೇಶಪ್ಪ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)