ಗುರುವಾರ , ಅಕ್ಟೋಬರ್ 17, 2019
21 °C

ನಾಳೆ ರಾಷ್ಟ್ರೀಯ ಯುವಜನೋತ್ಸವ

Published:
Updated:

ಮಂಗಳೂರು: ಹದಿನೇಳನೇ ರಾಷ್ಟ್ರೀಯ ಯುವಜನೋತ್ಸವ ಗುರುವಾರ ಆರಂಭವಾಗಲಿದ್ದು, ಮಂಗಳವಾರ ಸಂಜೆ ವೇಳೆಗೆ 13 ರಾಜ್ಯಗಳಿಂದ 912 ಮಂದಿ ಯುವ ಕಲಾವಿದರು ನಗರಕ್ಕೆ ಆಗಮಿಸಿದ್ದಾರೆ.ಸಿಕ್ಕಿಂ ರಾಜ್ಯದ ಮೊದಲ ತಂಡ ಸೋಮವಾರ ಸಂಜೆ ಆಗಮಿಸಿದ್ದರೆ, ಮಂಗಳವಾರ ಬೆಳಿಗ್ಗೆಯಿಂದಲೇ ರೈಲುಗಳಲ್ಲಿ ಹಲವು ರಾಜ್ಯಗಳಿಂದ ಯುವ ಕಲಾವಿದರು ಆಗಮಿಸಿ ಕೊಡಿಯಾಲ್‌ಬೈಲ್‌ನ ಟಿಎಂಎ ಪೈ ಹಾಲ್‌ಗೆ ಬಂದರು.ಪ್ರತಿಯೊಬ್ಬರ ಭಾವಚಿತ್ರ ತೆಗೆಸಿ ಅವರಿಗೆ ಗುರುತಿನ ಚೀಟಿ ನೀಡುವ ಹಾಗೂ ಅವರೆಲ್ಲರಿಗೆ ಸುರತ್ಕಲ್‌ನ ಎನ್‌ಐಟಿಕೆ ವಸತಿ ನಿಲಯ, ವಾಮಂಜೂರಿನ ವಸತಿ ನಿಲಯ ಸಹಿತ ಹಲವು ವಸತಿ ಸ್ಥಳಗಳಿಗೆ ಬಸ್‌ಗಳಲ್ಲಿ ಕರೆದೊಯ್ಯುವ ಕಾರ್ಯ ದಿನವಿಡೀ ನಡೆಯಿತು.ಯುವ ಕಲಾವಿದರು ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಿಂದ ಬರುವ ಎಲ್ಲಾ ಸಿಬ್ಬಂದಿಗೂ ಟಿಎಂಎ ಪೈ ಹಾಲ್‌ನಲ್ಲೇ ಮೂರೂ ಹೊತ್ತು ಊಟ-ತಿಂಡಿ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಅವರೆಲ್ಲರನ್ನೂ ಕರೆತರಲು ಮತ್ತು ಕರೆದೊಯ್ಯಲು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.ನಿಗದಿಯಂತೆ ಬುಧವಾರ ಸಂಜೆಯೊಳಗೆ ಇವರೆಲ್ಲ ಇಲ್ಲಿಗೆ ಆಗಮಿಸಬೇಕಿತ್ತು. ಆದರೆ ಉತ್ತರ ಭಾರತ ಮತ್ತು ಈಶಾನ್ಯ ಭಾರತದಿಂದ ಮಂಗಳೂರಿಗೆ ನೇರ ರೈಲು ಸಂಚಾರ ಕಡಿಮೆ ಇರುವುದರಿಂದ ಆ ಭಾಗದ ಪ್ರತಿನಿಧಿಗಳು ಎರಡು ದಿನ ಮುಂಚಿತವಾಗಿಯೇ ಆಗಮಿಸಿದ್ದಾರೆ.ಮಣಿಪುರ, ಬಿಹಾರ, ಜಾರ್ಖಂಡ್, ಗುಜರಾತ್, ಒಡಿಶಾ, ಹಿಮಾಚಲ ಪ್ರದೇಶ, ರಾಜಸ್ತಾನ, ಪಂಜಾಬ್, ಬಿಹಾರ, ಜಮ್ಮು ಮತ್ತು ಕಾಶ್ಮೀರ, ರಾಜಸ್ತಾನದವರು ಸದ್ಯ ಆಗಮಿಸಿದ್ದಾರೆ. ತಮಿಳುನಾಡಿನ ಪ್ರತಿನಿಧಿಗಳೂ ಸೇರಿದಂತೆ ಒಟ್ಟು 912 ಮಂದಿ ಮಂಗಳವಾರದ ವೇಳೆಗೆ ಆಗಮಿಸಿದ್ದಾರೆ. ಯುವಜನೋತ್ಸವದಲ್ಲಿ 2800 ಯುವ ಕಲಾವಿದರು ಮತ್ತು ಇತರೆ ಸಿಬ್ಬಂದಿ ಸೇರಿ 5 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ.ಚಿನ್ನಪ್ಪಗೆ ರಾಷ್ಟ್ರೀಯ ಯುವ ಪ್ರಶಸ್ತಿ: ಗುರುವಾರ ಉದ್ಘಾಟನಾ ಸಮಾರಂಭದ ವೇಳೆ 19 ರಾಜ್ಯಗಳ 28 ಯುವಕರಿಗೆ ~ರಾಷ್ಟ್ರೀಯ ಯವ ಪ್ರಶಸ್ತಿ~ ನೀಡಲಾಗುವುದು. ಕರ್ನಾಟಕದ ವೈ.ಚಿನ್ನಪ್ಪ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.60 ಸಾವಿರ ನಗದು ಪ್ರಶಸ್ತಿ: ಯುವಜನೋತ್ಸವದಲ್ಲಿ ಸಮೂಹ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ 60 ಸಾವಿರ ರೂಪಾಯಿ, ದ್ವಿತೀಯ 40 ಸಾವಿರ ಹಾಗೂ ತೃತೀಯ 20 ಸಾವಿರ ರೂಪಾಯಿ ನಗದು ಬಹುಮಾನವಿದೆ.ಸಮೂಹ ಗಾಯನ ಸ್ಪರ್ಧಾ ವಿಜೇತರಿಗೆ ರೂ. 30 ಸಾವಿರ, 20 ಮತ್ತು 10 ಸಾವಿರ ರೂಪಾಯಿ ಬಹುಮಾನ ಇರುತ್ತದೆ. ಸಿತಾರ್, ಕೊಳಲು, ಗಿಟಾರ್‌ನಂತಹ ವೈಯಕ್ತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ 10 ಸಾವಿರ, 7,500 ಮತ್ತು 5 ಸಾವಿರ ರೂಪಾಯಿ ಬಹುಮಾನ ಇರುತ್ತದೆ.ಪ್ರಥಮ ಸ್ಥಾನ ಪಡೆಯುವ ಯುವ ಕಲಾವಿದರಿಗೆ ಅಂತರರಾಷ್ಟ್ರೀಯ ಸಾಸ್ಕೃತಿಕ ವಿನಿಮಯ ಕಾರ್ಯಕ್ರಮ ಸಹಿತ ಇತರೆ ಪ್ರಮುಖ ವೇದಿಕೆಗಳಲ್ಲಿ ಪ್ರದರ್ಶನ ನೀಡುವುದಕ್ಕೆ ಅವಕಾಶ ಲಭಿಸಲಿದೆ ಎಂದು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಮೂಲಗಳು ತಿಳಿಸಿವೆ.

Post Comments (+)