ಶುಕ್ರವಾರ, ನವೆಂಬರ್ 15, 2019
21 °C

ನಾಳೆ ವೆಂಕಟಪ್ಪ ಪ್ರಶಸ್ತಿ ಪ್ರದಾನ

Published:
Updated:

 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಶುಕ್ರವಾರ ಕಲಾವಿದರಾದ ಡಾ. ವಿ.ಜಿ. ಅಂದಾನಿ ಮತ್ತು ಕೆ. ಚಂದ್ರನಾಥ ಆಚಾರ್ಯ ಅವರಿಗೆ ಸಚಿವ ಗೋವಿಂದ ಎಂ. ಕಾರಜೋಳ ಅವರಿಂದ 2009 ಮತ್ತು 2010ನೇ ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪ್ರದಾನ.ಅತಿಥಿಗಳು: ಡಾ. ಜೆ.ಎಸ್. ಖಂಡೇರಾವ್, ಯುಸೂಫ್ ಅರಕ್ಕಲ್. ಅಧ್ಯಕ್ಷತೆ: ಶಾಸಕ ಡಾ.ಡಿ. ಹೇಮಚಂದ್ರ ಸಾಗರ.ನಾಡಿನ ಹೆಮ್ಮೆಯ ಕಲಾವಿದ ವರ್ಣಶಿಲ್ಪಿ ಕೆ. ವೆಂಕಟಪ್ಪ ಅವರ ಹೆಸರಿನಲ್ಲಿ 1993ರಿಂದ ಸ್ಥಾಪಿತವಾಗಿರುವ ಈ ಪ್ರಶಸ್ತಿಯು ಪುತ್ಥಳಿ, ಸನ್ಮಾನ ಫಲಕ ಹಾಗೂ ಮೂರು ಲಕ್ಷ ರೂಪಾಯಿ ನಗದು ಒಳಗೊಂಡಿದೆ.2009ನೇ ಸಾಲಿನ ವೆಂಕಟಪ್ಪ ಪ್ರಶಸ್ತಿಗೆ ಭಾಜನರಾದ ಡಾ. ವಿ.ಜಿ. ಅಂದಾನಿ ಅವರನ್ನು ಕಲಾವಿದ ಅನ್ನುವುದಕ್ಕಿಂತ ಕಲಾ ಚಳವಳಿಗಾರ ಎಂದು ವರ್ಗೀಕರಿಸುವುದು ಹೆಚ್ಚು ಸೂಕ್ತ. ಕಲಾಸೃಷ್ಟಿ ಅವರ ವೈಯಕ್ತಿಕ ಪ್ರತಿಭೆಯ ಅಭಿವ್ಯಕ್ತಿ. ಕಲಾ ಚಳವಳಿಯ ಮೂಲಕ ಅವರು ಗುಲ್ಬರ್ಗದಂತಹ ಪ್ರದೇಶದಲ್ಲಿ ಒಂದು ಸಮೂಹವನ್ನೇ ಪೋಷಿಸಿ, ಬೆಳೆಸಿ ಉಳಿಸಿದವರು.1947ರಲ್ಲಿ ಗುಲ್ಬರ್ಗ ಜಿಲ್ಲೆಯ ಹೊನ್ನಕಿರಣಗಿಯಲ್ಲಿ ಜನಿಸಿದ ಅವರು ಅದೇ ಗುಲ್ಬರ್ಗದಲ್ಲಿ ಕಲಾ ಶಿಕ್ಷಣದ ಡಿಪ್ಲೊಮಾ ಪಡೆದರು. ತಾವು ಕಲಿತ ಕಲಾಶಾಲೆಯಲ್ಲಿಯೇ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದು ಅವರ ಸಾಧನೆ.ಗುಲ್ಬರ್ಗದಲ್ಲಿಯೇ ದೃಶ್ಯಕಲಾ ಶಾಲೆಯೊಂದನ್ನು ಸ್ಥಾಪಿಸಿ ದೇಶ, ವಿದೇಶದ ಕಲಾವಿದರನ್ನು ಅಲ್ಲಿಗೆ ಕರೆತಂದು ಕಲೆಯ ಕುರಿತು ಸಂವಾದ, ಕಲಾ ಶಿಬಿರ ಏರ್ಪಡಿಸುತ್ತಿದ್ದಾರೆ. ಅಲ್ಲಿಯೇ ಕಲಾ ಸಂಗ್ರಹಾಲಯ ನಿರ್ಮಿಸಿದ್ದಾರೆ.ದಿನಕ್ಕೊಂದರಂತೆ ಕಡ್ಡಾಯವಾಗಿ ರೇಖಾಚಿತ್ರ ರಚಿಸುತ್ತಿರುವ ಅಂದಾನಿ, ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ಯುವ ಪೀಳಿಗೆಯ ಕಲಾವಿದರೊಂದಿಗೆ ಸದಾ ಓಡಾಡುತ್ತ ಅವರ ವ್ಯಕ್ತಿತ್ವ ರೂಪಿಸುವ, ಕಲೆಗೆ, ಕಲಾವಿದರಿಗೆ ಎಲ್ಲೆಡೆ ಇರಬಹುದಾದ ಅವಕಾಶಗಳನ್ನು ತಮ್ಮ ಶಿಷ್ಯರು ಮತ್ತು ಸಹೋದ್ಯೋಗಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.55 ಏಕವ್ಯಕ್ತಿ ಮತ್ತು ಸಮೂಹ ಪ್ರದರ್ಶನದಲ್ಲಿ ಪಾಲ್ಗೊಂಡಿರುವ ಅವರು, ಅಷ್ಟೇ ಸಂಖ್ಯೆಯ ಕಲಾ ಶಿಬಿರಗಳಲ್ಲಿಯೂ ಭಾಗವಹಿಸಿದ್ದಾರೆ.  ಕಲಾ ಸಾಧನೆಗಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ  2010ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.ಕೇಂದ್ರ ಹಾಗೂ ರಾಜ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದ ಅವರು, 1994ರಿಂದ 97ರ ಅವಧಿಯಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು.ಆಚಾರ್ಯ: 2010ನೇ ಸಾಲಿನ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರಾದ ಕೆ. ಚಂದ್ರನಾಥ ಆಚಾರ್ಯ ತಮ್ಮದೇ ವಿಶಿಷ್ಟ ಶೈಲಿಯ ವರ್ಣಚಿತ್ರ ಮತ್ತು ಸಾಂದರ್ಭಿಕ ಚಿತ್ರಗಳ ಮೂಲಕ ಕಲಾ ಜಗತ್ತಿನಲ್ಲಿ ಪ್ರಖ್ಯಾತರಾದವರು.25 ವರ್ಷಗಳಿಗೂ ಹೆಚ್ಚು ಕಾಲ ಪ್ರಜಾವಾಣಿ ಬಳಗದ ಕಲಾವಿದರಾಗಿ `ಸುಧಾ~ ಮತ್ತು `ಮಯೂರ~ಗಳಲ್ಲಿ ನವ್ಯದ ಜೊತೆಗೆ ಜನಪ್ರಿಯ ಕಥೆ, ಕಾದಂಬರಿಗಳಿಗೆ ಮುಖಚಿತ್ರ ರಚಿಸಿದವರು. ಲಂಕೇಶರ `ಪಲ್ಲವಿ~, `ಎಲ್ಲಿಂದಲೋ ಬಂದವರು~, `ಅನುರೂಪ~ ಮತ್ತು `ಘಟಶ್ರಾದ್ಧ~ ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.ಚಂದ್ರನಾಥ ಆಚಾರ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಅಜ್ಜ ಮಧೂರು ಮಹಾಲಿಂಗಾಚಾರ್ಯ ಮತ್ತು ಶಿವರಾಮ ಕಾರಂತರ ಪ್ರಭಾವಕ್ಕೆ ಒಳಗಾದವರು. ಕಲಾವಿದನಾಗುವ ತಮ್ಮ ಬಾಲ್ಯದ ಕನಸನ್ನು 1973ರಲ್ಲಿ `ಕೆನ್ ಕಲಾ ಶಾಲೆ~ ಸೇರುವ ಮೂಲಕ ಈಡೇರಿಸಿಕೊಂಡರು.ಅಲ್ಲಿಂದ ಕಲಾ ಡಿಪ್ಲೊಮಾ ಪಡೆದು ಪ್ರಜಾವಾಣಿ ಬಳಗ ಸೇರಿಕೊಂಡರು. 1979ರಲ್ಲಿ ಗ್ರಾಫಿಕ್ಸ್‌ನಲ್ಲಿ ಕಲಾ ಅಧ್ಯಯನಕ್ಕಾಗಿ ಶಾಂತಿನಿಕೇತನಕ್ಕೆ ತೆರಳಿದರು. ಅಲ್ಲಿಂದ ಬಂದ ಮೇಲೆ ಅವರ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಯಿತು.ಅಲ್ಲಿ ಗ್ರಾಫಿಕ್ ಮಾಧ್ಯಮದ ತಂತ್ರಗಾರಿಕೆಯ ಸೂಕ್ಷ್ಮ ಕಲಿತರು.ಶಾಂತಿನಿಕೇತನದಿಂದ ಬಂದ ನಂತರ ಮತ್ತೆ ಪತ್ರಿಕಾಲಯದ ಕೆಲಸಕ್ಕೆ ಸೇರಿಕೊಂಡರು. ಕಲಾ ಮಾಧ್ಯಮದಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು 2003ರಲ್ಲಿ ಪತ್ರಿಕಾ ಜಗತ್ತಿಗೆ ವಿದಾಯ ಹೇಳಿದರು.ತೈಲವರ್ಣ, ಜಲವರ್ಣ, ಅಕ್ರಲಿಕ್, ಪೆನ್ಸಿಲ್ ಮಾಧ್ಯಮಗಳಲ್ಲಿ ಚಂದ್ರನಾಥ್ ಮಹತ್ವದ ಕಲಾಕೃತಿ ರಚಿಸಿದ್ದಾರೆ. ಜನಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ರೇಖೆ, ಆಕರ್ಷಕ ಬಣ್ಣ, ವಿಭಿನ್ನ  ವರ್ಣ ಸಂಯೋಜನೆ ಮತ್ತು ಭಾರತೀಯ ಶೈಲಿಯ ಚಿತ್ರಗಳು

ಅವರ ವೈಶಿಷ್ಟ್ಯ.ಅವರು ದೇಶದ ಪ್ರಮುಖ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಏಳು ಏಕವ್ಯಕ್ತಿ ಕಲಾ ಪ್ರದರ್ಶನ ಮತ್ತು ಮೂವತ್ತಕ್ಕೂ ಹೆಚ್ಚು ಸಮೂಹ ಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಹಲವು, ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ. ಬೆಳಿಗ್ಗೆ 11.

 

 

ಪ್ರತಿಕ್ರಿಯಿಸಿ (+)