ಗುರುವಾರ , ಮೇ 19, 2022
25 °C

ನಾಳೆ ಸಿಎಸ್‌ಬಿ ಎದುರು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಕೇಂದ್ರ ಸರ್ಕಾರವು ಕಳೆದ ವರ್ಷ ಚೀನಾ ದೇಶದಿಂದ ಸುಂಕರಹಿತವಾಗಿ ಸುಮಾರು 2500 ಮೆಟ್ರಿಕ್ ಟನ್ ಕಚ್ಚಾರೇಷ್ಮೆಯನ್ನು ಆಮದು ಮಾಡಿಕೊಳ್ಳುವುದಾಗಿ ಹೊರಡಿಸಿರುವ ಆದೇಶವನ್ನು ಉಗ್ರವಾಗಿ ಖಂಡಿಸಿರುವ ತಾಲ್ಲೂಕು ರೇಷ್ಮೆ ಬೆಳೆಗಾರರು, ಶುಕ್ರವಾರದಂದು ಬೆಂಗಳೂರಿನ ಕೇಂದ್ರೀಯ ರೇಷ್ಮೆ ಮಂಡಳಿ (ಸಿಎಸ್‌ಬಿ) ಎದುರು ಬೃಹತ್  ಪ್ರತಿಭಟನಾ ರ್ಯಾಲಿ ನಡೆಸುತ್ತಿರುವುದಾಗಿ  ಚಿಕ್ಕಬಳ್ಳಾಪುರ ಜಿಲ್ಲಾ ರೇಷ್ಮೆಕೃಷಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.ಅವರು ಇಲ್ಲಿನ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 12 ಗಂಟೆಗೆ ಮಡಿವಾಳ ಚೆಕ್‌ಪೋಸ್ಟ್‌ನಿಂದ ಪ್ರತಿಭಟನಾ ಮೆರಣವಣಿಗೆ ಹೊರಟು ಕೇಂದ್ರೀಯ ರೇಷ್ಮೆ ಮಂಡಳಿ ತಲುಪುತ್ತೇವೆ. ಪ್ರತಿಭಟನೆಯಲ್ಲಿ ಸಂಸದ ಬಸುದೇವ ಆಚಾರ್ಯ, ರೈತಸಂಘದ ಅಖಿಲಭಾರತ ಪ್ರಧಾನಕಾರ್ಯದರ್ಶಿ ಕೆ.ವರದರಾಜನ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಮತ್ತಿತರರು ಭಾಗವಹಿಸಲಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಶ್ಚಿಮಬಂಗಾಳದ ಸುಮಾರು 25 ಸಾವಿರ ಮಂದಿ ರೇಷ್ಮೆ ಕೃಷಿಕರು, ಬಡ ನೂಲು ಬಿಚ್ಚಣಿಕೆದಾರರು, ಇತರೆ ರೇಷ್ಮೆ ಉದ್ಯಮಿಗಳು, ಸ್ವಯಂಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ವಿವರಿಸಿದರು.‘ಕೇಂದ್ರದ ರೈತವಿರೋಧಿ ಸುಂಕರಹಿತ ಆಮದು ನೀತಿಯಿಂದಾಗಿ ಕೆಲವೇ ಮಂದಿ ಲಾಬಿ ನಡೆಸುತ್ತಿರುವವರಿಗೆ ಆದಾಯ ಸಿಗಲಿದ್ದು, ಸಾವಿರಾರು ಮಂದಿ ರೇಷ್ಮೆ ಕೃಷಿ ಮತ್ತು ಉದ್ದಿಮೆಯನ್ನೇ ಅವಲಂಬಿಸಿರುವವರು ಬೀದಿಪಾಲಾಗಲಿದ್ದಾರೆ’ ಎಂದು ಅವರು ತಿಳಿಸಿದರು.’ಸದರಿ ಆದೇಶವನ್ನು ವಾಪಸ್ ಪಡೆಯಲಾಗಿದೆ’ ಎಂದು ಸುಳ್ಳು ಪ್ರಚಾರದಲ್ಲಿ ತೊಡಗಿ ಕೆಲವರು, ಮುಂದಿನ ಹಣಕಾಸು ವರ್ಷದಲ್ಲಿ ಮತ್ತೆ 5000 ಮೆಟ್ರಿಕ್‌ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಬೇಡಿಕೆಗಿಂತಲೂ 12 ಸಾವಿರ ಮೆಟ್ರಿಕ್‌ಟನ್ ರೇಷ್ಮೆ ಅಧಿಕ ಉತ್ಪಾದನೆಯಾಗಿರುವಾಗ ಸ್ವದೇಶೀ ರೇಷ್ಮೆ ಕೃಷಿ ಪ್ರೋತ್ಸಾಹಿಸಿದೇ ಆಮದುನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.ಟಿಎಪಿಸಿಎಂಎಸ್ ಅಧ್ಯಕ್ಷ ಇರಿಗೇನಹಳ್ಳಿ ಬಿ.ಶ್ರೀನಿವಾಸ್ ಮಾತನಾಡಿ, ಬಯಲು ಸೀಮೆಯ ರೈತರು ಮಿಲ್ಕ್ ಮತ್ತು ಸಿಲ್ಕ್‌ನಿಂದಲೇ ಜೀವನ ನಡೆಸುತ್ತಿದ್ದು ರೈತರ ಕಸುಬಿಗೆ ಅಡ್ಡಿಯಾಗುವ ನೀತಿಗಳನ್ನು ಎಲ್ಲರೂ ಖಂಡಿಸಬೇಕಿದೆ ಎಂದರು.ತಾಲ್ಲೂಕುಪಂಚಾಯ್ತಿ ಸದಸ್ಯ ಬೀಡಿಗಾನಹಹಳ್ಳಿ ಶಿವಣ್ಣ ಮಾತನಾಡಿ, ದೇಶದ ಬೆನ್ನುಲಾಬಿಗಿರುವ ಕೃಷಿ ಕಸುಬಿಗೆ ಪೂರಕವಾದ ನೀತಿಗಳೂ ಬಾರದೇ ರೈತರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.