ಶನಿವಾರ, ಜನವರಿ 18, 2020
22 °C

ನಾಳೆ ಹರಿದ್ವಾರದಿಂದ ಪ್ರಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್ (ಪಿಟಿಐ): ಅಣ್ಣಾ ತಂಡವು ಈ ತಿಂಗಳ 21ರಂದು ಉತ್ತರಾಖಂಡದ ಹರಿದ್ವಾರದಿಂದ ಆರಂಭಿಸಿ, ವಿಧಾನಸಭಾ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಪ್ರಚಾರವನ್ನು ಕೈಗೊಳ್ಳಲಿದೆ.ಭ್ರಷ್ಟಾಚಾರ ಮತ್ತು ಜಾತಿ, ಧರ್ಮ ಇನ್ನಿತರ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹಾಗೂ ಪ್ರಬಲ ಲೋಕಪಾಲ ಮಸೂದೆ ರಚನೆಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಅಣ್ಣಾ ತಂಡದ ಸದಸ್ಯರು ಚುನಾವಣಾ ರಾಜ್ಯಗಳಲ್ಲಿ ಈ ಪ್ರಚಾರಾಂದೋಲನ ನಡೆಸಲಿದ್ದಾರೆ. ಅರವಿಂದ ಕೇಜ್ರಿವಾಲ್, ಕಿರಣ್ ಬೇಡಿ ಹಾಗೂ ಕುಮಾರ್ ವಿಶ್ವಾಸ್, ಮನೀಷ್ ಸಿಸೋಡಿಯಾ ಮತ್ತಿತರರು ಈ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಹರಿದ್ವಾರ ನಂತರ ಡೆಹ್ರಾಡೂನ್, ರುದ್ರಪುರ, ಆಲ್ಮೊರಾ, ಹಲ್ದಾನಿ ಇನ್ನಿತರ ಪ್ರದೇಶಗಳಲ್ಲಿ ಅಣ್ಣಾ ತಂಡ ಪ್ರವಾಸ ನಡೆಸಲಿದೆ. ಆಮೇಲೆ ಜ. 24ರಂದು ಶ್ರೀನಗರಕ್ಕೆ ಹಾಗೂ ಜಮ್ಮು-ಕಾಶ್ಮೀರ, ಇತರ ಪ್ರದೇಶಗಳಿಗೆ ಜ. 27 ಮತ್ತು 28ರಂದು ಭೇಟಿ ನೀಡಲಿದೆ. ಚುನಾವಣಾ ರಾಜ್ಯಗಳಿಗೆ ಅಣ್ಣಾ ತಂಡ ಭೇಟಿ ನೀಡುವುದನ್ನು ಗುರುವಾರ ಇಲ್ಲಿ ಖಚಿತಪಡಿಸಿದ ಪ್ರಮುಖ ಸದಸ್ಯ ಮನೀಷ್ ಸಿಸೋಡಿಯಾ, ಆದರೆ ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿದರು. `ನಾವು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಪ್ರಚಾರ ನಡೆಸುತ್ತಿಲ್ಲ~ ಎಂದು ಸ್ಪಷ್ಟಪಡಿಸಿದ ಅವರು, `ಭ್ರಷ್ಟಾಚಾರ ಮತ್ತು ಕಳಂಕಿತ ಅಭ್ಯರ್ಥಿಗಳ ವಿರುದ್ಧ ಮತದಾರರಲ್ಲಿ ಅರಿವು ಮೂಡಿಸುತ್ತೇವೆ~ ಎಂದರು.  `ಶುದ್ಧ ವ್ಯಕ್ತಿತ್ವ, ಉತ್ತಮ ಶಿಕ್ಷಣ ಹಾಗೂ ಜನರ ಸೇವೆ ಮಾಡುವ ಹಿನ್ನೆಲೆಯ ಯೋಗ್ಯ ಅಭ್ಯರ್ಥಿಗಳಿಗೆ ಮತ ಹಾಕುವ ಮೂಲಕ ತಮ್ಮ ಮತವನ್ನು ಸೂಕ್ತವಾಗಿ ಬಳಸುವಂತೆ ಮತದಾರರಿಗೆ ಮಾರ್ಗದರ್ಶನ ನೀಡಲು ಇದು ಸಕಾಲ~ ಎಂದೂ ನುಡಿದರು. ಅಣ್ಣಾ ತಂಡದ ಲೋಕಪಾಲ ಮಸೂದೆ ಮಾದರಿಯಲ್ಲೇ ರಾಜ್ಯದಲ್ಲೂ ಲೋಕಪಾಲ ಮಸೂದೆ ಅಂಗೀಕರಿಸಿದ ಉತ್ತರಾಖಂಡ ಮುಖ್ಯಮಂತ್ರಿ ಖಂಡೂರಿ ಅವರನ್ನು ಅಭಿನಂದಿಸಿದರು.ಕಾಂಗ್ರೆಸ್ ವಿರೋಧ: ಈ ಮಧ್ಯೆ, ಅಣ್ಣಾ ತಂಡದ ಭೇಟಿಯನ್ನು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದ್ದು, `ಇದೊಂದು ರಾಜಕೀಯ ಪ್ರೇರಿತ ಮತ್ತು ಬಿಜೆಪಿಗೆ ಲಾಭ ಮಾಡಿಕೊಡುವುದಾಗಿದೆ~ ಎಂದು ಟೀಕಿಸಿದೆ. `ಈ ಭೇಟಿಯನ್ನು ಬಿಜೆಪಿಯೇ ರೂಪಿಸಿದೆ~ಎಂದು ಕಾಂಗ್ರೆಸ್ ವಕ್ತಾರ ಸುರೇಂದ್ರ ಕುಮಾರ್ ಆರೋಪಿಸಿದ್ದಾರೆ.ಬಿಜೆಪಿ ಸ್ವಾಗತ: ಆದರೆ ಅಣ್ಣಾ ತಂಡದ ಈ ಭೇಟಿಗೆ ಸ್ವಾಗತ ಸೂಚಿಸಿರುವ ಬಿಜೆಪಿ, `ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ದೇಶದ ಯಾವುದೇ ಭಾಗಕ್ಕೆ ತೆರಳಿ ಅಭಿಪ್ರಾಯ ಮಂಡಿಸಲು ಮುಕ್ತ ಅವಕಾಶವಿದೆ~ ಎಂದು ಸಮರ್ಥಿಸಿದೆ.

ಪ್ರತಿಕ್ರಿಯಿಸಿ (+)