ಶುಕ್ರವಾರ, ನವೆಂಬರ್ 22, 2019
26 °C
ನೀತಿಸಂಹಿತೆ ಕಟ್ಟುನಿಟ್ಟು ಪಾಲನೆಗೆ ವೀಕ್ಷಕರ ಶ್ಲಾಘನೆ

ನಾವಣಾ ಸಿದ್ಧತೆಗೆ ಮೆಚ್ಚುಗೆ

Published:
Updated:

ಚಿಕ್ಕಮಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಜಿಲ್ಲೆಯ 5 ಕ್ಷೇತ್ರಗಳಲ್ಲಿ ನಡೆದಿರುವ ಪೂರ್ವ ಸಿದ್ಧತೆಗಳಿಗೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪಾಲ್ಗೊಂಡ ವೀಕ್ಷಕರು, ಮುಕ್ತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಉತ್ತಮ ಕಾರ್ಯ ಮಾಡುತ್ತಿದೆ. ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಇದೇ ರೀತಿ ಮುಂದುವರಿಯಬೇಕು ಎಂದರು.ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕೇಂದ್ರ ವೀಕ್ಷಕ ಬಾಲಕೃಷ್ಣ ಮೀನಾ ಮಾತನಾಡಿ, ಭದ್ರತಾ ಪಡೆ ನಿಯೋಜನೆ, ಚೆಕ್ ಪೋಸ್ಟ್‌ಗಳ ಸ್ಥಾಪನೆ ಸೇರಿದಂತೆ ಚುನಾವಣಾ ಸಿದ್ಧತೆಗಳು ಸಮರ್ಪಪ ಕವಾಗಿವೆ. ಚುನಾವಣಾ ಮಾದರಿ ನೀತಿ ಸಂಹಿತೆ ಗಮನಿಸಲು ಮಾದರಿ ನೀತಿ ಸಂಹಿತೆ ತಂಡಗಳು ಸಮರ್ಥವಾಗಿ ಕಾರ್ಯನಿರ್ವ ಹಿಸುತ್ತಿರುವುದು ಕಂಡುಬಂದಿದೆ ಎಂದರು.ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕೇಂದ್ರ ವೀಕ್ಷಕ ಎ.ಶೇಖರ್ ಬಾಬು ಮಾತನಾಡಿ, ವಿಧಾನಸಭಾ ಚುನಾವಣೆ ಯಾವುದೇ ಗೊಂದಲಗಳಿಲ್ಲದೆ, ಯಶಸ್ವಿ ಯಾಗಿ ನಡೆಯಲು ಎಲ್ಲರೂ ಕೈಜೋಡಿಸಬೇಕು ಎಂದರು.ಕಡೂರು ವಿಧಾನಸಭಾ ಕ್ಷೇತ್ರದ ಕೇಂದ್ರ ವೀಕ್ಷಕ ಬಾದಲ್ ಚಟರ್ಜಿ ಮಾತನಾಡಿ, ಚುನಾವಣೆ ಸಿದ್ಧತೆಯಲ್ಲಿ ವಿಶ್ವಾಸಾರ್ಹತೆ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಕೈಗೊಂಡಿರುವ ಸಿದ್ಧತೆಗಳು ಪ್ರಶಂಸನೀಯ. ಎಂಸಿಸಿ ತಂಡಗಳ ಹಗಲು ರಾತ್ರಿ ಕರ್ತವ್ಯದಿಂದ ಮುಕ್ತ ಚುನಾವಣೆಗೆ ಸಹಕಾರಿಯಾಗಲಿದೆ ಎಂದರು.  ತರೀಕೆರೆ ವಿಧಾನಸಭಾ ಕ್ಷೇತ್ರದ ಕೇಂದ್ರ ವೀಕ್ಷಕ ಟಿ.ಎನ್.ವೆಂಕಟೇಶ್ ಮಾತನಾಡಿ, ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಅಧಿಕಾರಿಗಳು ಯಾವುದೇ ರೀತಿಯ ಆರೋಪ ಬಾರದಂತೆ ಎಚ್ಚರಿಕೆ ವಹಿಸಬೇಕು. ಕೇಂದ್ರ ಚುನಾವಣಾ ಆಯೋಗ ಆಗಿಂದಾಗ್ಗೆ ನೀಡುವ ಸೂಚನೆ ಪಾಲಿಸಬೇಕು. ಮತದಾರರಿಗೆ ಚೀಟಿ ವಿತರಿಸುವ ಕಾರ್ಯ ತ್ವರಿತಗೊಳಿಸಬೇಕು ಎಂದರು.

ಕೇಂದ್ರ ಪೊಲೀಸ್ ವೀಕ್ಷಕ ಶ್ರಿಕಾಂತ್ ಜಾಧವ್ ಮಾತನಾಡಿ, ಜಿಲ್ಲೆಯ ನಕ್ಸಲ್ ಪೀಡಿತ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಕಾರ್ಯ ಕೈಗೊಂಡಿರುವುದು, ಹೆಚ್ಚಿನ ಪ್ರಮಾಣದ ಮತದಾನಕ್ಕೆ ನಡೆಸಿರುವ ಸಿದ್ಧತೆಗಳು ಶ್ಲಾಘನೀಯ ಎಂದರು.

ಜಿಲ್ಲಾಧಿಕಾರಿ ವಿ.ಯಶವಂತ್ ಮಾತನಾಡಿ, ಚುನಾವಣೆಗೆ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ ವಿವರಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ ಭದ್ರತೆ ಬಗ್ಗೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸ್ವೀಪ್ ಕಾರ್ಯಕ್ರಮಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕರಿಗೆ ವಿವರ ನೀಡಿದರು.

ಪ್ರತಿಕ್ರಿಯಿಸಿ (+)