ಮಂಗಳವಾರ, ಏಪ್ರಿಲ್ 20, 2021
23 °C

ನಾವಿಲ್ಲಿ ಸುರಕ್ಷಿತ, ಅಧ್ಯಯನ ಅಬಾಧಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: `ಇದು ಕೇವಲ ವದಂತಿ ಎಂಬುದು ಗೊತ್ತಾಗಿದೆ. ಆದರೆ, ನಮಗೆ ಯಾವುದೇ ಭಯ ಇಲ್ಲ. ನಾವಿಲ್ಲಿ ಸುರಕ್ಷಿತವಾಗಿದ್ದೇವೆ. ನಮ್ಮ ರಾಜ್ಯಕ್ಕೆ ಮರಳದೇ ಅಧ್ಯಯನ ಮುಂದುವರಿಸುತ್ತೇವೆ~

- ಇದು ನಗರದ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿಎಎಂಎಸ್ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಅಧ್ಯಯನ ಮಾಡುತ್ತಿರುವ ಅಸ್ಸಾಂ, ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ದೃಢ ನಿರ್ಧಾರದ ಮಾತುಗಳು.ಬೆದರಿಕೆ ಕರೆ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಹಬ್ಬುತ್ತಿರುವ ವದಂತಿಗಳ ಕಾರಣಕ್ಕೆ ಬೆಂಗಳೂರಿನಲ್ಲಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು, ಉದ್ಯೋಗಿಗಳು ತಮ್ಮ ತಾಯ್ನಾಡಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಈ ವಿದ್ಯಾರ್ಥಿಗಳು, ಯಾವುದೇ ರೀತಿ ಆತಂಕ ಪಡುವಂತಹ ವಾತಾವರಣ ಇಲ್ಲಿ ಇಲ್ಲ ಎಂದರು.`ಕೆಲ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ದೃಶ್ಯಗಳನ್ನು ನೋಡಿದ ನಂತರ ನಮ್ಮ ಪಾಲಕರು ಕರೆ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಸಹಜವಾದ ಪ್ರತಿಕ್ರಿಯೆ. ಆದರೆ, ನಾವಿಲ್ಲಿ ಸುರಕ್ಷಿತವಾಗಿರುವ ಬಗ್ಗೆ ಪಾಲಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ~ ಎನ್ನುತ್ತಾರೆ ಸ್ನಾತಕೋತ್ತರ ಕೋರ್ಸ್‌ನ ವಿದ್ಯಾರ್ಥಿ ಡಾ.ಬಿ.ಬೋರಾ.ಡಾ.ಬೋರಾ ಮೂಲತಃ ಅಸ್ಸಾಂನ ಮೋರಿಗಾಂವ್ ಜಿಲ್ಲೆಯವರು. ವದಂತಿಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಈಶಾನ್ಯ ಭಾಗದ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿರುವುದು ಸಹಜ. ಆದರೆ, ಭದ್ರತೆ ಬಗ್ಗೆ ರಾಜ್ಯ ಸರ್ಕಾರ ಭರವಸೆ ನೀಡಿರುವುದು ಸಂತಸದ ವಿಷಯ ಎಂದು ಡಾ.ಬೋರಾ ಹೇಳುತ್ತಾರೆ.`ನನ್ನ ಅಣ್ಣ ಓಂಪ್ರಕಾಶ್ ಯಾದವ್ ಬೆಂಗಳೂರಿನಲ್ಲಿ ಸ್ಯಾಮಸಂಗ್ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ನಿನ್ನೆಯಷ್ಟೇ ಮೊಬೈಲ್ ಮೂಲಕ ಆತನೊಂದಿಗೆ ಮಾತನಾಡಿದ್ದೇನೆ. ಯಾವುದೇ ಆತಂಕಪಡುವಂತಹ ವಾತಾವರಣ ಬೆಂಗಳೂರಿನಲ್ಲಿ ಇಲ್ಲ ಎಂಬುದಾಗಿ ತಿಳಿಸಿದ್ದಾನೆ~ ಎನ್ನುತ್ತಾರೆ ಅಂತಿಮ ಬಿಎಎಂಎಸ್ ವಿದ್ಯಾರ್ಥಿನಿ ಸುನಿತಾ ಯಾದವ್.`ಸುಮಾರು 3,500 ಕಿ.ಮೀ. ದೂರದ ರಾಜ್ಯದಲ್ಲಿನ ಕಾಲೇಜೊಂದರಲ್ಲಿ ಓದುತ್ತಿರುವ ನಮ್ಮ ಭದ್ರತೆ ಬಗ್ಗೆ ಪಾಲಕರಿಗೆ ಆತಂಕ ಮೂಡುವುದು ಸಹಜ. ಆದರೆ, ನಮ್ಮ ಕಾಲೇಜು ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು ನಮ್ಮ ಭದ್ರತೆ ಬಗ್ಗೆ ಸಾಕಷ್ಟು ಕ್ರಮ ಕೈಗೊಂಡಿದ್ದಾರೆ. ಇದು ಪಾಲಕರಿಗೂ ಗೊತ್ತು~ ಎಂದು ಅಂತಿಮ ವರ್ಷದ ವಿದ್ಯಾರ್ಥಿನಿಯರಾದ ಖುಷ್ಬೂ ಕುಮಾರಿ, ಸುಪ್ರಿಯಾ ಪಾಂಡೆ ಹೇಳುತ್ತಾರೆ.`ಈಶಾನ್ಯ ರಾಜ್ಯದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದಲೂ ಆ ರಾಜ್ಯದ ವಿದ್ಯಾರ್ಥಿಗಳು ಅಧ್ಯಯನಕ್ಕೆ ನಮ್ಮ ಕಾಲೇಜಿಗೆ ಬರುತ್ತಿದ್ದಾರೆ. ಮೊದಲಿನಿಂದಲೂ ಅವರ ಭದ್ರತೆಗೆ ಒತ್ತು ನೀಡಲಾಗಿದೆ. ಈಗಲೂ ಯಾವುದೇ ರೀತಿಯ ತೊಂದರೆ, ಆತಂಕ ಆಗದಂತೆ ಅವರ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ~ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಸ್. ಸವಡಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.